ಬೆಂಗಳೂರು[ಡಿ.12]: ರಾಜ್ಯದ ಒಂದು ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1ನೇ ತರಗತಿಯಿಂದಲೇ ಆಂಗ್ಲ ಮಾಧ್ಯಮದ ಬೋಧನೆಗೆ ಕ್ರಮ ಕೈಗೊಳ್ಳಲಾಗಿದ್ದು, ಹಂತ-ಹಂತವಾಗಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಆಂಗ್ಲ ಮಾಧ್ಯಮ ತರಗತಿ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಉಮಾನಾಥ ಎ. ಕೋಟ್ಯಾನ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಒಂದು ಸಾವಿರ ಶಾಲೆಗಳಲ್ಲಿ 1ನೇ ತರಗತಿಯಿಂದಲೇ ಆಂಗ್ಲ ಮಾಧ್ಯಮ ಆರಂಭಿಸಲು ಅ.26ರಂದೇ ಆದೇಶಿಸಲಾಗಿದೆ. ಇದಕ್ಕಾಗಿ ಇಂಗ್ಲಿಷ್‌ ಬೋಧನೆಯಲ್ಲಿ ಪರಿಣಿತಿ ಹೊಂದಿರುವ ಕಾರ್ಯನಿರತ ಶಿಕ್ಷಕರಿಗೆ ಆಯ್ಕೆ ಪರೀಕ್ಷೆ ನಡೆಸಿ ಆಂಗ್ಲ ಮಾಧ್ಯಮ ತರಗತಿ ಬೋಧಿಸಲು ನಿಯೋಜಿಸುತ್ತೇವೆ ಎಂದು ತಿಳಿಸಿದರು.

ಇಂತಹ ಶಿಕ್ಷಕರಿಗೆ ಪ್ರಾದೇಶಿಕ ಆಂಗ್ಲ ಭಾಷಾ ತರಬೇತಿ ಸಂಸ್ಥೆ ಮೂಲಕ 15 ದಿನದ ತರಬೇತಿ ನೀಡಲಾಗುವುದು. ಪ್ರತಿ ತಿಂಗಳೂ ಸಂಸ್ಥೆಯೊಂದಿಗೆ ವಿಡಿಯೋ ಸಂವಾದ ನಡೆಸಲಾಗುವುದು. ಅಲ್ಲದೆ, ಪ್ರಸಕ್ತ ಸಾಲಿನಲ್ಲಿ 1,715 ಆಂಗ್ಲ ಭಾಷಾ ಶಿಕ್ಷಕರನ್ನೂ ನೇಮಿಸಿಕೊಳ್ಳಲಾಗುವುದು. ಈಗಾಗಲೇ ಈ ಪೈಕಿ ಒಂದು ಸಾವಿರ ಆಂಗ್ಲ ಭಾಷಾ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.