ನಾಡಗೀತೆ ಗೌರವಕ್ಕೆ ಯಾವುದೇ ರೀತಿಯ ಧಕ್ಕೆಯಾಗದಂತೆ  ನೋಡಿಕೊಳ್ಳಲು ಅದರ ಸಮಯವನ್ನು ಕಡಿತ ಮಾಡಲು ಇದೀಗ ನಿರ್ಧರುಸಲಾಗಿದೆ.  ಹಿನ್ನೆಲೆ ಸಂಗೀತ ಸೇರಿಸದೇ ಹಾಗೂ ಸಾಲುಗಳು ಪುನರಾವರ್ತನೆಯಾಗದಂತೆ ಗರಿಷ್ಠ 2.30 ನಿಮಿಷಗಳಲ್ಲಿ ಸುಶ್ರಾವ್ಯವಾಗಿ, ಗಂಭೀರತೆಯಿಂದ ಹಾಡಲು ಸಾಧ್ಯವಿದೆ ಎಂದು ತಜ್ಞರು  ಅಭಿಪ್ರಾಯಪಟ್ಟಿದ್ದಾರೆ

 ಬೆಂಗಳೂರು (ಮಾ.16): ಈಗಾಗಲೇ ಸ್ವೀಕೃತವಾದ ನಾಡಗೀತೆಯನ್ನು ಹಿನ್ನೆಲೆ ಸಂಗೀತವಿಲ್ಲದೆ ಎರಡೂವರೆ ನಿಮಿಷಗಳಲ್ಲಿ ಸುಶ್ರಾವ್ಯವಾಗಿ ಗಂಭೀರತೆಯಿಂದ ಹಾಡಬೇಕು ಎಂದು ಸರ್ಕಾರ ಸ್ಪಷ್ಟಆದೇಶ ಹೊರಡಿಸಬೇಕು ಎಂದು ಮನವಿ ಸಲ್ಲಿಸಲು ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಒಮ್ಮತದ ನಿರ್ಣಯ ಕೈಗೊಂಡಿದೆ.

ನಗರದ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್‌ ಅಧ್ಯಕ್ಷತೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ‘ಜಯಭಾರತ ಜನನಿಯ ತನುಜಾತೆ’ ನಾಡಗೀತೆಯನ್ನು ಹಾಡುವ ಕ್ರಮದ ಕುರಿತು ಹಿರಿಯ ಸಾಹಿತಿಗಳು, ಗಾಯಕರು, ಕನ್ನಡಪರ ಹೋರಾಟಗಾರರ ಸಲಹೆ ಪಡೆಯಲು ಸಭೆ ನಡೆಯಿತು.

ಸಭೆಯಲ್ಲಿ ‘ಜಯಭಾರತ ಜನನಿಯ ತನುಜಾತೆ’ ನಾಡಗೀತೆಯನ್ನು ಅಪಭ್ರಂಶವಿಲ್ಲದೆ, ಯಾವುದೇ ಆಲಾಪನ ಮತ್ತು ಸಾಲುಗಳ ನಡುವೆ ಹಿನ್ನೆಲೆ ಸಂಗೀತ ಸೇರಿಸದೇ ಹಾಗೂ ಸಾಲುಗಳು ಪುನರಾವರ್ತನೆಯಾಗದಂತೆ ಗರಿಷ್ಠ 2.30 ನಿಮಿಷಗಳಲ್ಲಿ ಸುಶ್ರಾವ್ಯವಾಗಿ, ಗಂಭೀರತೆಯಿಂದ ಹಾಡಲು ಸಾಧ್ಯವಿದೆ. ಆದ್ದರಿಂದ ಮಹಾಕವಿ ಕುವೆಂಪು ರಚಿತ ‘ಜಯಭಾರತ ಜನನಿಯ ತನುಜಾತೆ’ ನಾಡಗೀತೆಯನ್ನು ಕಡ್ಡಾಯವಾಗಿ ಎರಡೂವರೆ ನಿಮಿಷಗಳಲ್ಲಿ ಹಾಡಬೇಕು ಎಂದು ರಾಜ್ಯ ಸರ್ಕಾರ ಶೀಘ್ರ ಮತ್ತು ಸ್ಪಷ್ಟಆದೇಶ ಹೊರಡಿಸಬೇಕು ತಜ್ಞರು ಸಲಹೆ ನೀಡಿದರು.

ನಾಡಗೀತೆ ಕಡಿಮೆ ಅವಧಿಯಲ್ಲಿ ಮುಗಿಸಲು ಚಿಂತನೆ : ಲಿಂಬಾವಳಿ ...

ಜ್ಞಾನಪೀಠ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಮಾತನಾಡಿ, ಹಲವು ಬಾರಿ ಈ ಕುರಿತು ಸಭೆ ನಡೆಸಲಾಗಿದೆ. ಎಂಟತ್ತು ನಿಮಿಷ ನಾಡಗೀತೆ ಹಾಡುವುದರಿಂದ ದೀರ್ಘಕಾಲ ನಿಂತು ಗೌರವ ಸಲ್ಲಿಸಲು ಎಲ್ಲರಿಗೂ ಕಷ್ಟವಾಗುತ್ತದೆ. ನಾಡಗೀತೆಯನ್ನು ಗಂಭೀರತೆಯಿಂದ ಹಾಡಬೇಕಿದ್ದು, ಸಾಲುಗಳ ನಡುನಡುವೆ ಹಿನ್ನೆಲೆ ಸಂಗೀತವಿಲ್ಲದೆ ಪುನರಾವರ್ತನೆಯಾಗದಂತೆ ಎರಡೂವರೆ ನಿಮಿಷಗಳಲ್ಲಿ ಹಾಡಬೇಕು ಎಂದು ಸಲಹೆ ನೀಡಿದರು.

 ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಮಾತನಾಡಿ, ಸರ್ಕಾರ ನಾಡಗೀತೆ ಎಂದು ಅಂಗೀಕರಿಸುವುದಕ್ಕೆ ಮುಂಚಿತವಾಗಿ ಕುವೆಂಪು ಅವರು ಬರೆದ ಪದ್ಯ ಇದು. ಅದನ್ನು ಬದಲಾವಣೆ ಮಾಡುವ ಅಧಿಕಾರ ಯಾರಿಗೂ ಇಲ್ಲ. ಯಾವ ಶಬ್ದವನ್ನೂ ತೆಗೆದು ಹಾಕಬಾರದು. ಕವಿ ಕುವೆಂಪು ಬರೆದ ಮೂಲಪದ್ಯ ಇಟ್ಟುಕೊಂಡು ಎರಡು ನಿಮಿಷಗಳಲ್ಲಿ ಹಾಡಬೇಕು ಎಂದು ನಿರ್ಣಯ ಕೈಗೊಳ್ಳಬೇಕು ಎಂದರು.

ಹಿರಿಯ ಸಾಹಿತಿ ಡಾ.ಕಮಲಾ ಹಂಪನಾ ಮಾತನಾಡಿ, ಅನೇಕ ದೇಶಗಳಲ್ಲಿ ರಾಷ್ಟ್ರಗೀತೆಗಳು ಒಂದು ನಿಮಿಷದೊಳಗಾಗಿ ಮುಕ್ತಾಯವಾಗುತ್ತವೆ. ನಾಡಗೀತೆಯನ್ನು ಎರಡು ನಿಮಿಷಗಳಲ್ಲಿ ಹಾಡುವುದು ಸೂಕ್ತ ಎಂದು ಸಲಹೆ ನೀಡಿದರು.

ಸಭೆಯಲ್ಲಿ ಹಿರಿಯ ಸಾಹಿತಿ ಡಾ.ಸಿದ್ದಲಿಂಗಯ್ಯ, ಡಾ.ದೊಡ್ಡರಂಗೇಗೌಡ, ಬಿ.ಟಿ.ಲಲಿತಾನಾಯಕ್‌, ವೈ.ಕೆ.ಮುದ್ದುಕೃಷ್ಣ, ಮುದ್ದುಮೋಹನ್‌, ಚಿರಂಜೀವಿಸಿಂಗ್‌, ಡಾ.ಬೈರಮಂಗಲ ರಾಮೇಗೌಡ, ಕಿಕ್ಕೇರಿ ಕೃಷ್ಣಮೂರ್ತಿ ಸೇರಿದಂತೆ ಹಲವರು ಭಾಗವಹಿಸಿದ್ದರು.