ಬೆಂಗಳೂರು(ಫೆ.06): ಹೆಚ್ಚಿನ ಬೇಡಿಕೆ ಇಲ್ಲದ ಕಾರಣಕ್ಕಾಗಿ ಗೃಹಲಕ್ಷ್ಮೀ ಯೋಜನೆಯನ್ನು ಕೈ ಬಿಡಲಾಗಿದೆ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಸ್ಪಷ್ಟಪಡಿಸಿದ್ದಾರೆ. 

ಶುಕ್ರವಾರ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ ಸದಸ್ಯ ಬಂಡೆಪ್ಪ ಕಾಶೆಂಪುರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಒಂದು ವರ್ಷಕ್ಕೆ ಸೀಮಿತವಾಗುವಂತೆ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಯೋಜನೆಯನ್ನು ಮುಂದುವರಿಸಲು ಹೆಚ್ಚಿನ ಬೇಡಿಕೆ ಇಲ್ಲ. ಹೀಗಾಗಿ ಯೋಜನೆಯನ್ನು ಕೈ ಬಿಡಲಾಗಿದೆ. ಗೃಹಲಕ್ಷ್ಮೀ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆಭರಣಗಳ ಮೇಲೆ ಶೇ.3ರಷ್ಟು ಬಡ್ಡಿ ದರದಲ್ಲಿ 2019-20ನೇ ಸಾಲಿನಲ್ಲಿ 1015 ರೈತರಿಗೆ 1014.34 ಲಕ್ಷ ರು. ಸಾಲ ನೀಡಲಾಗಿದೆ. 2020-21ನೇ ಸಾಲಿನಿಂದ ಯೋಜನೆ ಕೈಬಿಡಲಾಗಿದೆ. ಬೇಡಿಕೆ ಇದ್ದಿದ್ದರೆ ಯೋಜನೆ ಮುಂದುವರಿಸಬಹುದಿತ್ತು. ಆದರೆ, ಬೇಡಿಕೆ ಇಲ್ಲದ ಕಾರಣ ಕೈಬಿಡಲಾಗಿದೆ ಎಂದು ತಿಳಿಸಿದರು.

ಯಾವುದೇ ಕಾರಣಕ್ಕೂ ಎಪಿಎಂಸಿ ಮುಚ್ಚಲ್ಲ: ಎಸ್‌ಟಿಎಸ್‌

ಬಂಡೆಪ್ಪ ಕಾಶೆಂಪುರ ಮಾತನಾಡಿ, ಯೋಜನೆಯಿಂದ ರೈತರಿಗೆ ಬಹಳಷ್ಟು ಉಪಯೋಗ ಇದೆ. ಹೀಗಾಗಿ ಯೋಜನೆಯನ್ನು ಮುಂದುವರಿಸಬೇಕು. ಆಭರಣಗಳ ಮೇಲೆ ಕಡಿಮೆ ದರದಲ್ಲಿ ಯಾರೂ ಸಹ ಸಾಲ ನೀಡುವುದಿಲ್ಲ. ಹೆಚ್ಚಿನ ಪ್ರಚಾರ ಕೊರತೆಯಿಂದಾಗಿ ಬಹಳಷ್ಟು ಮಂದಿಗೆ ಮಾಹಿತಿ ಇಲ್ಲ. ಸರ್ಕಾರ ಪ್ರಚಾರ ಕೈಗೊಂಡು ಯೋಜನೆಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು.