ಬೆಂಗಳೂರು(ಡಿ.12): ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮದ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಲು ಆಗ್ರಹಿಸಿ ಶುಕ್ರವಾರ ಆರಂಭವಾಗಿರುವ ಸಾರಿಗೆ ಮುಷ್ಕರ ಮುಖಂಡರ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ.
ಮುಷ್ಕರದ ನೇತೃತ್ವವನ್ನು ಸಾರಿಗೆ ನೌಕರರ ಮುಖಂಡರ ಬದಲು, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ವಹಿಸಿದ್ದಾರೆ. ಇದಕ್ಕೆ ಕಾರ್ಮಿಕ ಮುಖಂಡ ಎಚ್‌.ವಿ. ಅನಂತ ಸುಬ್ಬರಾವ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಸಾರಿಗೆ ಸಚಿವರು ಅನಂತಸುಬ್ಬರಾವ್‌ ಅವರನ್ನು ಮಾತುಕತೆಗೆ ಕರೆದಿರುವುದಕ್ಕೆ ಕೋಡಿಹಳ್ಳಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಾಲ್ಕು ರಸ್ತೆ ಸಾರಿಗೆ ನಿಗಮಗಳಲ್ಲಿ ಹತ್ತಾರು ನೌಕರರ ಸಂಘಟನೆಗಳಿವೆ. ಈ ಪೈಕಿ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟ, ನಾಲ್ಕು ಸಾರಿಗೆ ನಿಗಮಗಳ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ, ಕನ್ನಡ ಕ್ರಿಯಾ ಸಮಿತಿ ಸೇರಿದಂತೆ ಇತರೆ ಸಾರಿಗೆ ನೌಕರರ ಸಂಘಟನೆಗಳು ಸೇರಿಕೊಂಡು ‘ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿಸುವ ಹೋರಾಟದ ಒಕ್ಕೂಟ’ ಮಾಡಿಕೊಂಡು ಮುಷ್ಕರಕ್ಕೆ ಕರೆ ನೀಡಲಾಗಿದೆ. ಈ ಒಕ್ಕೂಟದ ನೇತೃತ್ವವನ್ನು ಕೋಡಿಹಳ್ಳಿ ಚಂದ್ರಶೇಖರ್‌ ವಹಿಸಿದ್ದಾರೆ.

ಎಐಟಿಯುಸಿ ಸಂಯೋಜಿತ ಕೆಎಸ್‌ಆರ್‌ಟಿಸಿ ಸ್ಟಾಫ್‌ ಅಂಡ್‌ ವರ್ಕ​ರ್‍ಸ್ ಯೂನಿಯನ್‌ ಅಧ್ಯಕ್ಷ ಅನಂತಸುಬ್ಬರಾವ್‌ ಅವರು ನೌಕರರ ಈ ಮುಷ್ಕರದಲ್ಲಿ ಭಾಗಿಯಾಗಿಲ್ಲ. ಆದರೂ ಸಾರಿಗೆ ಸಚಿವ ಸವದಿ ಅವರು, ಸಂಧಾನ ಸಭೆಗೆ ಈ ಯೂನಿಯನ್‌ಗೆ ಆಹ್ವಾನ ನೀಡಿದ್ದರು.

KSRTC ನೌಕರರ ಬೇಡಿಕೆ ಈಡೇರಿಕೆ ಕಷ್ಟ: ಸಿಎಂ ಯಡಿಯೂರಪ್ಪ

ಸಚಿವರ ಸಭೆ ಬಳಿಕ ಮಾತನಾಡಿದ ಅನಂತಸುಬ್ಬರಾವ್‌ ಅವರು, ‘ಈಗ ಮುಷ್ಕರ ಕರೆ ನೀಡಿರುವುದು ಟ್ರೇಡ್‌ ಯೂನಿಯನ್‌ ಅಲ್ಲ. ಕೋಡಿಹಳ್ಳಿ ಟ್ರೇಡ್‌ ಯೂನಿಯನ್‌ ಯಾವಾಗ ಮುನ್ನಡೆಸಿದ್ದರು? ಸಾರಿಗೆ ನೌಕರರ ಸ್ಥಿತಿ ಹದಗೆಟ್ಟಿದೆ. ರೈತ ಮುಖಂಡರು ಸಾರಿಗೆ ನೌಕರರ ಮುಷ್ಕರಕ್ಕೆ ಕರೆ ನೀಡುತ್ತಾರೆ’ ಎಂದು ಕೋಡಿಹಳ್ಳಿ ವಿರುದ್ಧ ಕಿಡಿಕಾರಿದರು.

ಕೋಡಿಹಳ್ಳಿ ಆಕ್ರೋಶ:

ಹೋರಾಟಗಾರರನ್ನು ಸಭೆಗೆ ಕರೆದಿರುವುದಕ್ಕೆ ಸಾರಿಗೆ ಸಚಿವ ಸವದಿ ವಿರುದ್ಧ ಕಿಡಿಕಾರಿದ ಕೋಡಿಹಳ್ಳಿ ಚಂದ್ರಶೇಖರ್‌, ‘ಸಾರಿಗೆ ಸಚಿವರು ಸಭೆಗೆ ಹೋರಾಟ ಮಾಡಿದವರನ್ನು ಕರೆಯದೇ ಅತಿ ಬುದ್ಧಿವಂತಿಕೆ ತೋರಿಸುತ್ತಿದ್ದಾರೆ. ಈ ಮೂಲಕ ಹೋರಾಟ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಇಂದಿನ ಸಭೆಯಲ್ಲಿ ಪಾಲ್ಗೊಂಡಿರುವ ಯೂನಿಯನ್‌ ಲೀಡರ್‌ಗಳು ಗುರುವಾರದ ಹೋರಾಟದಲ್ಲಿ ಪಾಲ್ಗೊಂಡಿರಲಿಲ್ಲ. ಅವರ ಜೊತೆ ಸಭೆ ಮಾಡಿದರೇ ನಾವು ಒಪ್ಪುವುದಿಲ್ಲ. ನಾವು ಮುಷ್ಕರ ಕೈಬಿಡುವುದಿಲ್ಲ’ ಎಂದು ಹೇಳಿದರು.

ಒಟ್ಟಾರೆ ತನಗೆ ಸಂಬಂಧವೇ ಇಲ್ಲದ ಸಂಘಟನೆಯೊಂದಿಗೆ ಕೋಡಿಹಳ್ಳಿ ಚಂದ್ರಶೇಖರ್‌ ಗುರುತಿಸಿಕೊಂಡಿರುವುದು ಎಚ್‌.ವಿ. ಅನಂತಸುಬ್ಬರಾವ್‌ ಅವರಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಇಬ್ಬರ ನಡುವೆ ಒಳಗೊಳಗೆ ತಿಕ್ಕಾಟ ಆರಂಭವಾಗಿದೆ.