ಕೊಪ್ಪಳದ ಗಂಗಾವತಿಯ ಅಂಜನಾದ್ರಿ ಬೆಟ್ಟವನ್ನು ಅಭಿವೃದ್ಧಿಪಡಿಸಬೇಕು. 9 ವರ್ಷ ಕೇಂದ್ರದಲ್ಲಿ, 4 ವರ್ಷ ರಾಜ್ಯದಲ್ಲಿ ಅಧಿಕಾರದಲ್ಲಿದ್ದೂ ಸುಮ್ಮನಿದ್ದ ಬಿಜೆಪಿ ಕೊನೆ ಕ್ಷಣದಲ್ಲಿ 120 ಕೋಟಿ ರು. ಘೋಷಣೆ ಮಾಡಿ ಹೋಗಿದೆ. ಈಗಿನ ಸರ್ಕಾರ ಸೂಕ್ತ ಯೋಜನೆ ರೂಪಿಸಿ ಕೆಲಸ ಆರಂಭಿಸಬೇಕು: ಶಾಸಕ ಜನಾರ್ದನ ರೆಡ್ಡಿ
ವಿಧಾನಸಭೆ(ಜು.21): 2013ರಿಂದ ಅರಣ್ಯ ಅಭಿವೃದ್ಧಿ ತೆರಿಗೆ ಹೆಸರಿನಲ್ಲಿ ಗಣಿ ಉದ್ಯಮಿಗಳಿಂದ 24,000 ಕೋಟಿ ರು. ತೆರಿಗೆ ಸಂಗ್ರಹವಾಗಿದೆ. ಈ ಹಣವನ್ನು ಬಳ್ಳಾರಿ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳ ಅಭಿವೃದ್ಧಿಗೆ ಬಳಸಲು ಸುಪ್ರೀಂಕೋರ್ಟ್ ಸಮ್ಮತಿ ನೀಡಿದೆ. ಹೀಗಾಗಿ ಸರ್ಕಾರವು ಈ ನಿಟ್ಟಿನಲ್ಲಿ ಅಭಿವೃದ್ಧಿ ಯೋಜನೆ ರೂಪಿಸಬೇಕು ಎಂದು ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಶಾಸಕ ಜನಾರ್ದನ ರೆಡ್ಡಿ ಮನವಿ ಮಾಡಿದ್ದಾರೆ.
ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಹಿಂದೆ ನಾನು ಸಚಿವನಾಗಿದ್ದಾಗ ಗಣಿ ಉದ್ಯಮಿಗಳ ವಿರೋಧದ ನಡುವೆಯೂ ಗಣಿ ಉದ್ದಿಮೆಗಳಿಂದ ಶೇ.6ರಷ್ಟುಅರಣ್ಯ ಅಭಿವೃದ್ಧಿ ತೆರಿಗೆ ಸಂಗ್ರಹಿಸಲು ನಿರ್ಧರಿಸಿದೆ. ಈ ಬಗ್ಗೆ ಹೈಕೋರ್ಟ್, ಸುಪ್ರೀಂಕೋರ್ಟ್‌ನಲ್ಲಿ ಗಣಿ ಉದ್ಯಮಿಗಳು ಪ್ರಶ್ನಿಸಿದರೂ ನ್ಯಾಯಾಲಯ ಸರ್ಕಾರದ ಪರ ತೀರ್ಪು ನೀಡಿತ್ತು. ಈ ಮೂಲಕ 2013ರಿಂದ ಸಂಗ್ರಹಿಸಿರುವ 24,000 ಕೋಟಿ ರು. ಹಣ ಸರ್ಕಾರದ ಬಳಿ ಇದೆ. ಈ ಹಣದಲ್ಲಿ 18,000 ಕೋಟಿ ರು. ಬಳ್ಳಾರಿ ನಗರ ಹಾಗೂ 6000 ಕೋಟಿ ರು. ಹಣವನ್ನು ಚಿತ್ರದುರ್ಗ, ತುಮಕೂರು ಜಿಲ್ಲೆಗಳ ಅಭಿವೃದ್ಧಿಗೆ ಬಳಕೆ ಮಾಡಲು ಸುಪ್ರೀಂಕೋರ್ಟ್ ಸಮ್ಮತಿ ನೀಡಿದೆ. ಹೀಗಾಗಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಯಾವುದೇ ವೆಚ್ಚವಿಲ್ಲದೆ ಮೂರು ಜಿಲ್ಲೆ ಅಭಿವೃದ್ಧಿ ಮಾಡಬಹುದು. ಈ ನಿಟ್ಟಿನಲ್ಲಿ ಸರ್ಕಾರ ಗಮನ ನೀಡಿದರೆ ರಾಜ್ಯದಲ್ಲೇ ಅತಿ ಮುಂದುವರೆದ ಜಿಲ್ಲೆಗಳನ್ನಾಗಿ ಮಾಡಬಹುದು ಎಂದು ಸಲಹೆ ನೀಡಿದರು.
ಅಂಜನಾದ್ರಿಗೆ ನಯಾಪೈಸೆ ಬಿಡುಗಡೆ ಆಗಿಲ್ಲ: ಜನಾರ್ದನ ರೆಡ್ಡಿ ಕಿಡಿ
ಇನ್ನು ಬಳ್ಳಾರಿಗೆ 2010ರಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಆಗಿತ್ತು. ಈಗಾಗಲೇ 83 ಕೋಟಿ ರು. ವೆಚ್ಚದಲ್ಲಿ ಕಟ್ಟಡ ಸಿದ್ಧವಾಗಿದೆ. ಸಲಕರಣೆಗಳಿಗೆ ಅಗತ್ಯವಿರುವ 50 ಕೋಟಿ ರು. ಹಣ ನೀಡಿದರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಿದ್ಧವಾಗಲಿದೆ. ಬಳ್ಳಾರಿಯಲ್ಲಿ 20 ಎಕರೆ ಜಾಗ ಸಿದ್ಧವಿದ್ದು, ಕೆಎಸ್‌ಸಿಎನವರು ಸ್ಟೇಡಿಯಂ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದಕ್ಕೆ ಅನುಮತಿ ನೀಡಬೇಕು. ಬಳ್ಳಾರಿಯನ್ನು ಸ್ಮಾರ್ಟ್ ಸಿಟಿ ಯೋಜನೆಗೆ ಪರಿಗಣಿಸದೆ ಅನ್ಯಾಯ ಮಾಡಲಾಗಿದೆ. ಈ ಬಗ್ಗೆ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ವಿಜಯನಗರದಲ್ಲಿ ಬರುವ ಹಂಪಿಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.
ಅಂಜನಾದ್ರಿ ಬೆಟ್ಟ ಅಭಿವೃದ್ಧಿಗೆ ಆಗ್ರಹ
ಕೊಪ್ಪಳದ ಗಂಗಾವತಿಯ ಅಂಜನಾದ್ರಿ ಬೆಟ್ಟವನ್ನು ಅಭಿವೃದ್ಧಿಪಡಿಸಬೇಕು. 9 ವರ್ಷ ಕೇಂದ್ರದಲ್ಲಿ, 4 ವರ್ಷ ರಾಜ್ಯದಲ್ಲಿ ಅಧಿಕಾರದಲ್ಲಿದ್ದೂ ಸುಮ್ಮನಿದ್ದ ಬಿಜೆಪಿ ಕೊನೆ ಕ್ಷಣದಲ್ಲಿ 120 ಕೋಟಿ ರು. ಘೋಷಣೆ ಮಾಡಿ ಹೋಗಿದೆ. ಈಗಿನ ಸರ್ಕಾರ ಸೂಕ್ತ ಯೋಜನೆ ರೂಪಿಸಿ ಕೆಲಸ ಆರಂಭಿಸಬೇಕು. ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ತಿರುಪತಿ ಮಾದರಿಯಲ್ಲಿ ಅಂಜನಾದ್ರಿಯಲ್ಲಿ ಯಾತ್ರಿನಿವಾಸ ನಿರ್ಮಾಣಕ್ಕೆ ಆಹ್ವಾನ ನೀಡಬೇಕು ಎಂದು ಮನವಿ ಮಾಡಿದರು.