Asianet Suvarna News Asianet Suvarna News

ಶಾಸಕರಿಗೆ ಹೆಡ್‌ಮಾಸ್ಟರ್‌ ಆದ ಸ್ಪೀಕರ್‌ ರಮೇಶ್‌!

ಪ್ರಶ್ನೆ ಕೇಳುವುದು ಹೇಗೆಂದು ದಿನಕರ ಶೆಟ್ಟಿಗೆ ಪಾಠ| ಶಾಸಕರಿಗೆ ಹೆಡ್‌ಮಾಸ್ಟರ್‌ ಆದ ಸ್ಪೀಕರ್‌ ರಮೇಶ್

Speaker ramesh kumar becomes Head master in suvarna soudha
Author
Belagavi, First Published Dec 13, 2018, 10:23 AM IST

ಬೆಳಗಾವಿ[ಡಿ.13]: ತಮಾಷೆಯ ಮಾತುಗಳ ಮೂಲಕ ಸದಾ ಶಾಸಕರ ಕಾಲೆಳೆಯುವ ಮತ್ತು ಹೊಸಬರಿಗೆ ಸಲಹೆ ಸೂಚನೆ ನೀಡುವ ಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಬುಧವಾರವೂ ಸಹ ಹೆಡ್‌ಮಾಸ್ಟರ್‌ ರೀತಿ ನಡೆದುಕೊಂಡರು.

ಕುಮಟಾ ಪ್ರತಿನಿಧಿಸುವ ಬಿಜೆಪಿ ಸದಸ್ಯ ದಿನಕರ್‌ ಕೇಶವ ಶೆಟ್ಟಿಅವರು, ಪ್ರಶ್ನೋತ್ತರ ಅವಧಿಯಲ್ಲಿ ತಮ್ಮ ಕ್ಷೇತ್ರದ ರಾಮನಗಿಂಡಿಯಲ್ಲಿ ಮಳೆಗಾಲದ ವೇಳೆ ಅಪಾರ ಪ್ರಮಾಣದ ಕಡಲು ಕೊರೆತ ಉಂಟಾಗುತ್ತಿರುವ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿದರು. ಇದಕ್ಕೆ ಪೌರಾಡಳಿತ ಸಚಿವರ ಬದಲಿಗೆ ಕೃಷಿ ಸಚಿವ ಶಿವಶಂಕರ ರೆಡ್ಡಿ ಉತ್ತರಿಸಿದರು. ಪ್ರತಿಯಾಗಿ ಉಪಪ್ರಶ್ನೆ ಕೇಳಲು ಮೊದಲ ಬಾರಿ ಶಾಸಕರಾದ ದಿನಕರ್‌ ಕೇಶವ ಶೆಟ್ಟಿತಡಬಡಾಯಿಸಿದರು.

ಶಾಸಕರ ಪರಿಸ್ಥಿತಿಯನ್ನು ಗಮನಿಸಿದ ಸಭಾಧ್ಯಕ್ಷರು, ಹೊಸ ಶಾಸಕರಿಗೆ ಶಾಸಕಾಂಗ ಸಭೆಯಲ್ಲಿ ಹಿರಿಯರು ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು. ಬಳಿಕ ಶಾಸಕ ಮಾಧುಸ್ವಾಮಿ ಅವರು ದಿನಕರ್‌ ಶೆಟ್ಟಿಬಳಿ ಹೋಗಿ ಉಪಪ್ರಶ್ನೆ ಕೇಳುವ ಬಗೆಯನ್ನು ವಿವರಿಸಿದರು. ಆದರೂ ಪ್ರಯೋಜನವಾಗಲಿಲ್ಲ. ಈ ವೇಳೆ ಮಧ್ಯಪ್ರವೇಶಿಸಿದ ಸಭಾಧ್ಯಕ್ಷರು, ಹೊಸ ಶಾಸಕರಿಗೆ ಧೈರ್ಯ ತುಂಬುವ ಮಾತುಗಳನ್ನಾಡಿದರು.

ನಂತರ ದಿನಕರ್‌ ಶೆಟ್ಟಿಅವರು ಉಪ ಪ್ರಶ್ನೆಯನ್ನು ಕೇಳಿದರು. ಉತ್ತರಿಸಿದ ಸಚಿವ ಶಿವಶಂಕರ ರೆಡ್ಡಿ, ಕಡಲ ಕೊರೆತ ತಡೆಗಟ್ಟಲು ಹೊನ್ನಾವರ ತಾಲೂಕಿನ ಕರ್ಕಿ ತೊಪ್ಪಲಕೇರಿಯಲ್ಲಿ 400 ಮೀಟರ್‌ ಉದ್ದದ ತುರ್ತು ತಡೆಗೋಡೆ ನಿರ್ಮಿಸಲು 127 ಲಕ್ಷ ರು. ಮೊತ್ತಕ್ಕೆ ಮತ್ತು ಕುಮಟಾ ತಾಲೂಕಿನ ರಾಮನಗಿಂಡಿಯಲ್ಲಿ 270 ಮೀಟರ್‌ ಉದ್ದದ ತುರ್ತು ತಡೆಗೋಡೆ ನಿರ್ಮಿಸಲು 90 ಲಕ್ಷ ರು. ಮೊತ್ತಕ್ಕೆ ಮಂಜೂರಾತಿ ಕೋರಲಾಗಿದೆ. ಶೀಘ್ರದಲ್ಲಿಯೇ ಅನುದಾನವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.

ರೂವಾರಿ ಪದ ಬಳಕೆ: ಸಿಬ್ಬಂದಿಗೆ ಸ್ಪೀಕರ್‌ ಕ್ಲಾಸ್‌

‘ರೂವಾರಿ’ ಪದಬಳಕೆಯು ಗೌರವ ಸೂಚಕ ಪದವಾಗಿದ್ದು, ಅದನ್ನು ತಪ್ಪು ಮಾಡಿದವರಿಗೆ ಬಳಕೆ ಮಾಡಿದ್ದೀರಿ? ನಿಮಗೆ ಕನ್ನಡ ಬರುವುದಿಲ್ಲವೇ? ಮತ್ತೊಮ್ಮೆ ಇಂತಹ ಘಟನೆ ಮರುಕಳಿಸಿದರೆ ಸೂಕ್ತ ದಂಡ ತೆರಬೇಕಾಗುತ್ತದೆ.

-ವಿಧಾನಸಭೆ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಸಭಾಧ್ಯಕ್ಷ ರಮೇಶ್‌ ಕುಮಾರ್‌ ಗರಂ ಆದ ಪರಿ ಇದು.

ಪ್ರಶ್ನೋತ್ತರ ಅವಧಿಯಲ್ಲಿ ಬುಧವಾರ ಶಾಸಕ ಮುನಿರತ್ನ ತಮ್ಮ ಕ್ಷೇತ್ರದಲ್ಲಿ ಕಸದ ಗುತ್ತಿಗೆ ನಿರ್ವಹಣೆಯಲ್ಲಿ ಅಕ್ರಮ ಎಸಗಿರುವ ಪ್ರಶ್ನೆಯಲ್ಲಿ ಪ್ರಕರಣದ ಪ್ರಮುಖ ರೂವಾರಿಯನ್ನು ಪತ್ತೆ ಹಚ್ಚಲಾಗಿದೆಯೇ ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರ ನೀಡುವಾಗ ಸಚಿವಾಲಯದ ಸಿಬ್ಬಂದಿ ‘ರೂವಾರಿ’ ಪದವನ್ನು ಯಥಾವತ್ತಾಗಿ ಬಳಕೆ ಮಾಡಿದ್ದರು. ಇದನ್ನು ಗಮನಿಸಿದ ಸಭಾಧ್ಯಕ್ಷರು, ಸಚಿವಾಲಯದ ಸಿಬ್ಬಂದಿ ವಿರುದ್ಧ ಕೆಂಡಾಮಂಡಲರಾದರು.

ಶಾಸಕರು ಪ್ರಶ್ನೆ ಕೇಳುವಾಗ ವ್ಯಂಗ್ಯವಾಗಿ ಕೇಳಿರಬಹುದು. ನಿಮಗೆ ಕನ್ನಡ ಬರುವುದಿಲ್ಲವೇ? ಪದ ಬಳಕೆ ಬಗ್ಗೆ ಎಚ್ಚರ ಇರಬೇಕಲ್ಲವೇ? ಮತ್ತೊಮ್ಮೆ ಇಂತಹ ಘಟನೆ ಮರುಕಳಿಸಬಾರದು. ಒಂದು ವೇಳೆ ಇಂತಹ ಘಟನೆ ಮರುಕಳುಹಿಸಿದರೆ ಸೂಕ್ತ ದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Follow Us:
Download App:
  • android
  • ios