Asianet Suvarna News Asianet Suvarna News

ನನ್ನ ಮತ ಮಾರಾಟಕ್ಕಿಲ್ಲ ಅಭಿಯಾನ ಕೈಗೊಳ್ಳಿ: ಸ್ಪೀಕರ್ ಕಾಗೇರಿ ಸಲಹೆ

* ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ ಸಂವಾದ ಕಾರ್ಯಕ್ರಮ
* ಪಕ್ಷಾಂತರ ಕಾಯ್ದೆಗೆ ಮತ್ತಷ್ಟು ಬಲ ನೀಡಲು ಚಿಂತನೆ
* ನ್ಯಾಯಾಲಯಗಳು ನ್ಯಾಯ ನೀಡುವ ಬದಲಾಗಿ ನಿರ್ಣಯ ನೀಡುತ್ತಿವೆ
* ಆದರ್ಶ ಮೌಲ್ಯಗಳು, ನೈತಿಕತೆ ಅಧಃಪತನಕ್ಕೆ ಇಳಿದಿವೆ.

Speaker Kageri advises my vote not for sale campaign
Author
First Published Nov 30, 2022, 6:35 PM IST

ಕಲಬುರಗಿ (ನ.30): ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ನನ್ನ ಮತ ಯಾವುದೇ ಕಾರಣಕ್ಕೂ ಮಾರಾಟಕ್ಕಿಲ್ಲ ಎಂಬ ಆತ್ಮಸಾಕ್ಷಿಯ ಅಭಿಯಾನ ಕೈಗೊಳ್ಳುವಂತೆ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕರೆ ನೀಡಿದ್ದಾರೆ. 

ಕಲಬುರಗಿಯ ಡಾ. ಎಸ್.ಎಂ ಪಂಡಿತ್ ರಂಗಮಂದಿರದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ 'ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ' ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇತ್ತೀಚೆಗೆ ಚುನಾವಣೆಯಲ್ಲಿ ಹಣ, ತೋಳ್ಬಲ ಹಾಗೂ ಜಾತಿ ಬಲ ಪ್ರಮುಖ ಪಾತ್ರ ವಹಿಸುತ್ತಿವೆ. ಸಂವಿಧಾನಬದ್ಧವಾಗಿ ಸಿಕ್ಕಿರುವ ಮತದ ಹಕ್ಕನ್ನು ಮತದಾರರು ಅರಿಯಬೇಕು. ಮತ ಮಾರಾಟ ಮಾಡದೇ ಸ್ಫರ್ಧಾಳುಗಳಲ್ಲಿ ಉತ್ತಮರನ್ನು ಆಯ್ಕೆ ಮಾಡಿ. ಒಂದು ವೇಳೆ ಚುನಾವಣೆ ನಿಂತವರಲ್ಲಿ ಯಾರೂ ಒಳ್ಳೆಯವರು ಕಾಣದಿದ್ದರೆ ನೋಟಾ ನಿಮ್ಮ ಮತವನ್ನು ಹಾಕಬೇಕು ಎಂದು ಮಾರ್ಮಿಕವಾಗಿ ನುಡಿದರು.

ಇದನ್ನೂ ಓದಿ:  Ground Report: ಕಲಬುರಗಿಯಲ್ಲಿ ಕೈ ಮಲ ಜಂಗಿ ಕುಸ್ತಿ: ಹಾಲಿ, ಮಾಜಿಗಳ ನಡುವೆ ಹೊಸಬರ ಫೈಟ್

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಮೌಲ್ಯಗಳು ಕುಸಿತವಾಗುತ್ತಿವೆ. ಭ್ರಷ್ಟಾಚಾರ ವ್ಯಾಪಿಸಿದೆ. ಜನಪ್ರತಿನಿಧಿಗಳು ಜನರಿಗೆ ನೀಡಿದ ಆಶ್ವಾಸನೆ ಈಡೇರಿಸುವಲ್ಲಿ ವಿಫಲರಾಗುತ್ತಿದ್ದಾರೆ. ಕಾರ್ಯಾಂಗದಲ್ಲಿ ಮಾನವೀಯತೆ ಮರೆತ ಪರಿಣಾಮ ಜನರು ಸರ್ಕಾರಿ ಯೋಜನೆಗಳ ಸೌಲಭ್ಯ ಪಡೆಯಲು ಕಚೇರಿಯಿಂದ ಕಚೇರಿಗೆ ಅಲೆದಾಡಿ ರೋಸಿ ಹೋಗಿದ್ದಾರೆ. ನ್ಯಾಯಾಲಯಗಳು ನ್ಯಾಯ ನೀಡುವ ಬದಲಾಗಿ ನಿರ್ಣಯ ನೀಡುತ್ತಿವೆ. ಮಾಧ್ಯಮ ಕ್ಷೇತ್ರವೂ ಸಾಮಾಜಿಕ ಹೊಣೆಗಾರಿಕೆ ಮರೆತ್ತಿದ್ದು, ಇಲ್ಲಿಯೂ ಭ್ರಷ್ಟಾಚಾರ ಕಾಲಿಟ್ಟಿದೆ. ಶಿಕ್ಷಣ ಸಂಸ್ಥೆಗಳು ರಾಷ್ಟ್ರೀಯತೆ ಮರೆತಂತಿವೆ. ಜ್ವರ, ನೆಗಡಿ ಬಂದು ಆಸ್ಪತ್ರೆಗೆ ಹೋದರೆ ಹತ್ತಾರು ತಪಾಸಣೆ ಮಾಡುತ್ತಾರೆ. ಇದರಿಂದ ಆದರ್ಶ ಮೌಲ್ಯಗಳು, ನೈತಿಕತೆ ಅಧಃಪತನಕ್ಕೆ ಇಳಿದಿದ್ದು, ವಿಷವರ್ತುಲದಲ್ಲಿ ನಾವು ಸಾಗುತ್ತಿದ್ದೇವೆ. ಇದಕ್ಕೆಲ್ಲ ಮತ ಮಾರಿಕೊಳ್ಳದೆ ಉತ್ತಮರನ್ನು ಆಯ್ಕೆ ಮಾಡುವುದೇ ಪರಿಹಾರವಾಗಿದೆ ಎಂದು ಹೇಳಿದರು.

ಪಕ್ಷಾಂತರ ಕಾಯ್ದೆಗೆ ಮತ್ತಷ್ಟು ಬಲ: ಪ್ರಮುಖವಾಗಿ ಯುವಕರು ಚುನಾವಣೆ ಸುಧಾರಣೆ ಹಾಗೂ ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿ ಹಿಡಿಯುವ ಮೂಲಕ ಪ್ರಜಾಪ್ರಭುತ್ವ ಕಾವಲುಗಾರರಾಗಿ ಹೊರಹೊಮ್ಮಬೇಕಿದೆ. ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆ ನಿಟ್ಟಿನಲ್ಲಿ ಈಗಾಗಲೆ ವಿಧಾನಸಭೆಯಲ್ಲಿ ಚರ್ಚಿಸಲಾಗಿದೆ. ಪಕ್ಷಾಂತರ ಕಾಯ್ದೆಗೆ ಮತ್ತಷ್ಟು ಬಲ ನೀಡಲು ಚಿಂತನೆ ನಡೆದಿದೆ. ಚುನಾವಣಾ ಪೂರ್ವವಾಗಿ ಹೊರಡಿಸಿದ ಪ್ರಾಣಾಳಿಕೆ ಈಡೇರಿಸುವತ್ತ ಆಡಳಿತ ಪಕ್ಷಗಳು ಗಮನಹರಿಸಬೇಕಿದೆ. ಇವೆಲ್ಲದರ ಬಗ್ಗೆ ಜನಾಭಿಪ್ರಾಯ ಮೂಡಿಸಲು ಜನರೊಂದಿಗೆ ಸಂವಾದ ನಡೆಸಲಾಗುತ್ತಿದೆ. ಈಗಾಗಲೆ ರಾಯಚೂರು, ಹುಬ್ಬಳ್ಳಿ, ದಾವಣಗೆರೆ, ವಿಜಯಪುರ, ಕೋಲಾರ ಸೇರಿ ಹಲವು ಕಡೆ ಸಂವಾದ ನಡೆಸಲಾಗಿದೆ ಎಂದರು.

 

ಶಿಕ್ಷಕರು ಮಕ್ಕಳಲ್ಲಿ ಶಿಸ್ತು ಬೆಳೆಸಲಿ: ವಿಶ್ವೇಶ್ವರ ಹೆಗಡೆ ಕಾಗೇರಿ

ಸದನಕ್ಕೆ ಗೈರಾಗುವ ಶಾಸಕರು: ಶಾಸಕರು ಸದನಕ್ಕೆ ಗೈರಾಗಿ ಕ್ಷೇತ್ರದಲ್ಲಿ ಮದುವೆ, ಹುಟ್ದಬ್ಬ, ಕ್ರೀಡಾಕೂಟ, ಜಾತ್ರೆ ಕಾರ್ಯಕ್ರಮಕ್ಕೆ ತೆರಳುತ್ತಾರೆ. ಅವರನ್ನು ಕೇಳಿದರೆ ಕ್ಷೇತ್ರದ ಮತದಾರರತ್ತ ಬೊಟ್ಟು ಮಾಡುತ್ತಾರೆ. ಸರ್ಕಾರದಿಂದ ಸಿಗಬಹುದಾದ ಮೂಲ ಸೌಕರ್ಯಗಳಾದ ರಸ್ತೆ, ಚರಂಡಿ, ಕುಡಿಯುವ ನೀರು, ಶೌಚಾಲಯಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಆದರೆ, ಮತದಾರರು ತಮ್ಮ ಮದುವೆ, ವೈಯಕ್ತಿಕ ಧಾರ್ಮಿಕ ಕಾರ್ಯಕ್ರಮಕ್ಕೆ ಶಾಸಕರನ್ನು ಆಹ್ವಾನಿಸುತ್ತಾರೆ. ಸಾರ್ವಜನಿಕ ಹಿತಾಸಕ್ತಿಗಿಂತ ವೈಯಕ್ತಿಕ ಹಿತಾಸಕ್ತಿನೇ ಇಲ್ಲಿ ಮುಖ್ಯವಾಗುತ್ತಿದೆ. ಇಲ್ಲಿ ಮತದಾರರ ಜವಾಬ್ದಾರಿ ಇಲ್ಲವೆ ಎಂದು ಸಭಿಕರನ್ನು ಪ್ರಶ್ನಿಸಿದ ಅವರು ಹಕ್ಕಿನ ಬಗ್ಗೆ ಜಾಗೃತರಾಗಿದ್ದೇವೆ. ಆದರೆ ಕರ್ತವ್ಯಗಳನ್ನು ಮರೆತಿದ್ದೇವೆ ಎಂದರು.

ಮತದಾರರ ಚೀಟಿಗೆ ಅಧಾರ್ ಜೋಡಿಸಿ: 1990ರಲ್ಲಿ ದಿನೇಶ್ ಗೋಸ್ವಾಮಿ ನೀಡಿದ ವರದಿಯಿಂದ ಹಿಡಿದು ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಅವರು ನೀಡಿರುವ ಆಡಳಿತ ಸುಧಾರಣಾ ವರದಿಯಲ್ಲಿ ಚುನಾವಣಾ ಸುಧಾರಣೆ ಕುರಿತು ಅನೇಕ ಪ್ರಸ್ತಾವನೆಗಳು ಸಲ್ಲಿಕೆಯಾಗಿವೆ. ಇವೆಲ್ಲದರ ಪರಿಣಾಮ ಹಲವಾರು ಸುಧಾರಣೆ ಕ್ರಮಗಳು ಚುನಾವಣಾ ಆಯೋಗ ಮಾಡಿದೆ. ಇತ್ತೀಚೆಗೆ ಆಧಾರ್‍‌ ಸಂಖ್ಯೆಗೆ ಮತದಾರರ ಚೀಟಿಯ ಸಂಖ್ಯೆಯನ್ನು ಜೋಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇದು ಶೇ.100ರಷ್ಟು ಮಾಡಿದಲ್ಲಿ ಚುನಾವಣೆ ವ್ಯವಸ್ಥೆಯಲ್ಲಿ ಬಹುದೊಡ್ಡ ಬದಲಾವಣೆ ಕಾಣಬಹುದಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಮತದಾರರು ತಮ್ಮ ವೋಟರ್‍‌ ಐಡಿಯನ್ನು ಆಧಾರ್‍‌ಗೆ ಲಿಂಕ್ ಮಾಡಿಸಬೇಕು ಎಂದರು.

BIG 3: ನೀರು ತರಲು ಕೆಲಸ ಬಿಡ್ಬೇಕು, ಮಕ್ಕಳು ಶಾಲೆಗೆ ಲೇಟಾಗಿ ಹೋಗ್ಬೇಕು!

ದೇಶದ ಪ್ರಗತಿ ಉತ್ತುಂಗಕ್ಕೆ: ವಿಶ್ವದ ಬಹುತೇಕ ದೇಶಗಳಲ್ಲಿ ರಾಜಕೀಯ ಅಸ್ಥಿತರತೆ, ಆರ್ಥಿಕ ಅಶಿಸ್ತಿನಿಂದ ಅಲ್ಲಿ ಅರಾಜಕತೆ ಸೃಷ್ಠಿಯಾಗಿದ್ದನ್ನು ಕಂಡಿದ್ದೇವೆ. ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಶ್ರೇಷ್ಠ ಸಂವಿಧಾನದ ಪರಿಣಾಮ ದೇಶದಲ್ಲಿ ಇಂತಹ ಸಮಸ್ಯೆ ಕಳೆದ 75 ವರ್ಷಗಳಲ್ಲಿ ಎಂದೂ ಕಂಡುಬಂದಿಲ್ಲ. ಇಂದು ಭಾರತವು ಪ್ರಗತಿಯ ಉತ್ತುಂಗದಲ್ಲಿದೆ. ಸ್ವಾತಂತ್ರ್ಯ ಪೂರ್ವದಲ್ಲಿ 30 ಕೋಟಿಯಿದ್ದ ಜನಸಂಖ್ಯೆ ಈಗ 140 ಕೋಟಿ ದಾಟಿದೆ.  ಆಗ ಇದ್ದ ಆಹಾರ ಸಮಸ್ಯೆ ಈಗಿಲ್ಲ. ತಲಾ ಆದಾಯ 259 ರೂ. ಗಳಿಂದ 1,12,835 ರೂ. ಗಳಿಗೆ ಏರಿಕೆಯಾಗಿದೆ. ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ, ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ಕಂಡಿದ್ದೇವೆ. ಕೋವಿಡ್ ಸಂದರ್ಭದಲ್ಲಿ ವಿಶ್ವದ ದೊಡ್ಡಣ್ಣ ಅಮೇರಿಕಾ ಪರಿಸ್ಥಿತಿ ನಿಭಾಯಿಸಲು ಆಗಲಿಲ್ಲ. ಆದರೆ ಭಾರತವು ಅದನ್ನು ಸಮರ್ಥವಾಗಿ ನಿಭಾಯಿಸಿದಲ್ಲದೆ ಇತರೆ ದೇಶಕ್ಕೆ ಕೋವಿಡ್ ಲಸಿಕೆ ನೀಡಿದೆ. ಒಟ್ಟಾರೆಯಾಗಿ ಭಾರತ ವಿಶ್ವ ಗುರುವಿನತ್ತ ಸಾಗಿದೆ. ಇದಕ್ಕೆ ಮೂಲ ಕಾರಣ ಸಂವಿಧಾನವಾಗಿದ್ದು, ಅದರ ಆಶಯದಂತೆ ನಡೆಯಬೇಕು ಎಂದರು.

ಇದೇ‌ ಸಂದರ್ಭದಲ್ಲಿ ಯುವ ಮತದಾರ ಸರುಬಾಯಿ‌‌ ಅವರಿಗೆ ಮತದಾರರ ಗುರುತಿನ ಚೀಟಿ ವಿತರಿಸಿದರು.  ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಸಂಘದ ಅಧ್ಯಕ್ಷ ಡಾ. ಬಸವರಾಜ ಪಾಟೀಲ ಸೇಡಂ, ಶಾಸಕರಾದ ರಾಜಕುಮಾರ ಪಾಟೀಲ ತೇಲ್ಕೂರ, ಎಂ.ವೈ.ಪಾಟೀಲ, ಬಸವರಾಜ ಮತ್ತಿಮೂಡ, ವಿಧಾನ ಪರಿಷತ್ ಶಾಸಕ ಬಿ.ಜಿ.ಪಾಟೀಲ್, ನಗರ ಪೊಲೀಸ್ ಆಯುಕ್ತ ಡಾ. ವೈ.ಎಸ್. ರವಿಕುಮಾರ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್, ಸಿಇಒ ಡಾ. ಗಿರೀಶ್ ಡಿ. ಬದೋಲೆ ಮತ್ತಿತರರು ಉಪಸ್ಥಿತರಿದ್ದರು.

Follow Us:
Download App:
  • android
  • ios