ಬೆಂಗಳೂರು(ಡಿ.23): ಕೊರೋನಾ ಹೊಸ ಪ್ರಭೇದ ಪತ್ತೆಯಾಗಿರುವ ಬ್ರಿಟನ್‌ನಿಂದ ರಾಜ್ಯಕ್ಕೆ ಕಳೆದ ಎರಡು ವಾರದಲ್ಲಿ 2127 ಮಂದಿ ಆಗಮಿಸಿದ್ದಾರೆ. ಈ ಪೈಕಿ 233 ಮಂದಿಯನ್ನು ಮಾತ್ರ ಪರೀಕ್ಷೆಗೆ ಒಳಪಡಿಸಲಾಗಿದೆ. ಉಳಿದವರ ಪತ್ತೆ ಹಾಗೂ ಪರೀಕ್ಷೆಗೆ ರಾಜ್ಯಾದ್ಯಂತ ತಂಡಗಳನ್ನು ರಚಿಸಿ ತುರ್ತು ಕ್ರಮ ಕೈಗೊಳ್ಳಲಾಗಿದೆ.

ಬ್ರಿಟನ್‌ನಿಂದ ಬಂದಿರುವ ಪ್ರಯಾಣಿಕರ ಮೊಬೈಲ್‌ ಸಂಖ್ಯೆ, ಹೆಸರು, ವಿಳಾಸದಂತಹ ಮಾಹಿತಿಯನ್ನು ರಾಜ್ಯ ಆರೋಗ್ಯ ಇಲಾಖೆ ಸಂಗ್ರಹ ಮಾಡುತ್ತಿದೆ. ಈ ಮಾಹಿತಿ ವಿಮಾನಯಾನ ಸಂಸ್ಥೆಗಳಿಂದ ಇನ್ನೂ ಪರಿಪೂರ್ಣವಾಗಿ ಇಲಾಖೆಗೆ ಲಭ್ಯವಾಗಿಲ್ಲ. ಬುಧವಾರದ ವೇಳೆಗೆ ಸಂಪೂರ್ಣ ಮಾಹಿತಿಯನ್ನು ಇಲಾಖೆ ಪಡೆದುಕೊಳ್ಳಲಿದ್ದು, ಅನಂತರ ಈ ಮಾಹಿತಿಯನ್ನು ರಾಜ್ಯದ ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ತಲುಪಿಸಲು ಇಲಾಖೆ ಸಿದ್ಧತೆ ನಡೆಸಿದೆ.

ಜಿಲ್ಲಾ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ರಚಿಸಲಾಗಿರುವ ತಂಡಗಳು ಈ ಮಾಹಿತಿ ಅನುಸಾರವಾಗಿ ಪ್ರಯಾಣಿಕರನ್ನು ಪತ್ತೆ ಮಾಡಿ ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಪಡಿಸಲಿವೆ. ಪರೀಕ್ಷೆ ವೇಳೆ ಪಾಸಿಟಿವ್‌ ಬಂದರೆ ಅವರನ್ನು ಆಸ್ಪತ್ರೆಗಳಲ್ಲಿ ಐಸೋಲೇಷನ್‌ ಮಾಡಲಾಗುತ್ತದೆ. ಅಂತೆಯೇ ಅವರ ಸಂಪರ್ಕಿತರ ಮಾಹಿತಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ನೆಗೆಟಿವ್‌ ಬಂದರೆ ಕಡ್ಡಾಯವಾಗಿ 14 ದಿನ ಹೋಂ ಕ್ವಾರಂಟೈನ್‌ ಮಾಡಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ಡಾ.ಓಂಪ್ರಕಾಶ್‌ ಪಾಟೀಲ್‌ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಆದರೆ, ಮೂಲಗಳ ಪ್ರಕಾರ ಡಿ.7ರಿಂದ ಇದುವರೆಗೂ ಬ್ರಿಟನ್‌ನಿಂದ ರಾಜ್ಯಕ್ಕೆ ಮೂರುವರೆ ಸಾವಿರಕ್ಕೂ ಹೆಚ್ಚು ಮಂದಿ ಆಗಮಸಿದ್ದು, ಇದರಲ್ಲಿ ಬೆಂಗಳೂರಿನವರೇ ಅರ್ಧಕ್ಕೂ ಹೆಚ್ಚು ಮಂದಿಯಿದ್ದಾರೆ.

ಎಲ್ಲರಿಗೂ ಪರೀಕ್ಷೆ ಕಡ್ಡಾಯ-ಸುಧಾಕರ್‌:

ಈ ನಡುವೆ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ಡಿ.7ರಿಂದ ಡಿ.20ರ ವರೆಗೆ ಬ್ರಿಟನ್‌ನಿಂದ ರಾಜ್ಯಕ್ಕೆ ಬಂದಿರುವ ಎಲ್ಲ ಪ್ರಯಾಣಿಕರ ಮಾಹಿತಿ ಸಂಗ್ರಹಿಸಿ, ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಪಡಿಸಲು ಸೂಚನೆ ನೀಡಿರುವುದಾಗಿ ತಿಳಿಸಿದರು.

ಭಾನುವಾರ ಒಂದೇ ದಿನ ಬ್ರಿಟನ್‌ನಿಂದ ರಾಜ್ಯಕ್ಕೆ 537 ಮಂದಿ ರಾಜ್ಯಕ್ಕೆ ಬಂದಿದ್ದಾರೆ. ಈ ಪೈಕಿ 138 ಮಂದಿ ಕೊರೋನಾ ನೆಗೆಟಿವ್‌ ಪ್ರಮಾಣ ಪತ್ರ ಇಲ್ಲದೆ ಬಂದಿದ್ದಾರೆ. ಹೀಗಾಗಿ ಎಲ್ಲ ಪ್ರಯಾಣಿಕರನ್ನು ಪತ್ತೆ ಮಾಡಿ ಪರೀಕ್ಷೆಗೆ ಒಳಪಡಿಸಲು ಸೂಚಿಸಲಾಗಿದೆ. ಈ ಸಂಬಂಧ ವಿಮಾನ ನಿಲ್ದಾಣಗಳನ್ನು ಸಂಪರ್ಕಿಸಿ, ಪ್ರಯಾಣಿಕರ ಮಾಹಿತಿ ಸಂಗ್ರಹ ಆರಂಭಿಸಲಾಗಿದೆ ಎಂದರು.

ವಿಮಾನ ನಿಲ್ದಾಣದಲ್ಲಿ ಆರ್‌ಟಿಪಿಸಿಆರ್‌ ಪರೀಕ್ಷೆ:

ಮಹಾಮಾರಿಯ ಹೊಸ ರೂಪಾಂತರದ ಹಾವಳಿ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರದಿಂದ ಕಿಯೋಸ್ಕ್‌ ಆರಂಭಿಸಿದೆ. ಬ್ರಿಟನ್‌ ಸೇರಿದಂತೆ ಯೂರೋಪಿಯನ್‌ ದೇಶಗಳಿಂದ ಬರುವ ಪ್ರಯಾಣಿಕರಿಗೆ ಕಡ್ಡಾಯವಾಗಿ ಆರ್‌ಟಿಪಿಸಿಆರ್‌ ಪರೀಕ್ಷೆ ಆರಂಭಿಸಿದೆ.

ಈ ಹಿಂದೆ ವಿದೇಶದಿಂದ ಬರುವ ಪ್ರತಿ ಪ್ರಯಾಣಿಕರನ್ನೂ ಕೊರೋನಾ ಸೋಂಕು ಪರೀಕ್ಷೆಗೆ ಒಳಪಡಿಸಲಾಗುತ್ತಿತ್ತು. ರಾಜ್ಯದಲ್ಲಿ ಕೊರೋನಾ ಸೂಂಕು ತಗ್ಗಿದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಕೊರೋನಾ ಸೋಂಕು ಪರೀಕ್ಷೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಬ್ರಿಟನ್‌ನಲ್ಲಿ ಹೊಸ ಮಾದರಿಯ ಕೊರೋನಾ ವೈರಾಣು ಪತ್ತೆಯಾದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಬರುವ ಎಲ್ಲ ಪ್ರಯಾಣಿಕರನ್ನು ಕಡ್ಡಾಯವಾಗಿ ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಪಡಿಸಲು ಕ್ರಮ ಕೈಗೊಳ್ಳಲಾಗಿದೆ.

ಬ್ರಿಟನ್‌ಗೆ ಪ್ರತಿ ವಾರ 6 ವಿಮಾನ ಹಾರಾಟ:

ಲಂಡನ್‌-ಬೆಂಗಳೂರು ನಡುವೆ ಪ್ರತಿ ವಾರ ಆರು ವಿಮಾನ ಸಂಚರಿಸುತ್ತಿವೆ. ನಾಲ್ಕು ಬ್ರಿಟಿಷ್‌ ಏರ್‌ವೇಸ್‌ ವಿಮಾನಗಳು ಹಾಗೂ ಎರಡು ಏರ್‌ ಇಂಡಿಯಾ ವಿಮಾನಗಳು ಸಂಚರಿಸುತ್ತಿದ್ದವು. ಒಟ್ಟು ಎಷ್ಟುಮಂದಿ ಪ್ರಯಾಣಿಕರು ಬಂದಿದ್ದಾರೆ ಎಂಬ ಮಾಹಿತಿ ನಮಗೆ ಲಭ್ಯವಿಲ್ಲ. ಈ ನಡುವೆ ಕಳೆದ ಎರಡು ದಿನಗಳಿಂದ ಲಂಡನ್‌ನಿಂದ ಬೆಂಗಳೂರಿಗೆ ಯಾವುದೇ ವಿಮಾನಗಳು ಬಂದಿಲ್ಲ. ಕೇಂದ್ರ ಸರ್ಕಾರ ಡಿ.22ರ ಮಧ್ಯರಾತ್ರಿಯಿಂದ ಡಿ.31ರ ವರೆಗೆ ಲಂಡನ್‌ ವಿಮಾನಗಳ ಸಂಚಾರ ಬಂದ್‌ ಮಾಡಿದೆ ಎಂದು ಬೆಂಗಳೂರು ಇಂಟರ್‌ ನ್ಯಾಷನಲ್‌ ಏರ್‌ಪೋರ್ಟ್‌ ಲಿಮಿಟೆಡ್‌ನ ವಕ್ತಾರರೊಬ್ಬರು ಹೇಳಿದರು