ಕನ್ನಡದಲ್ಲಿ ಆನ್‌ಲೈನ್ ರೈಲು ಟಿಕೆಟ್ ಬುಕಿಂಗ್ ಆ್ಯಪ್ ಬಿಡುಗಡೆ ಮಾಡಿದ ನೈಋತ್ಯ ರೈಲ್ವೆ!
ರಾಜ್ಯದ ಸ್ಥಳೀಯ ಭಾಷೆಯಲ್ಲಿ ಸರ್ಕಾರಿ ಅಪ್ಲಿಕೇಶನ್‌ಗಳನ್ನು ಒದಗಿಸುವುದು ಕರ್ನಾಟಕದ ಜನರ ಬಹುಕಾಲದ ಬೇಡಿಕೆಯಾಗಿತ್ತು. ಅದರಂತೆ ಕಾಯ್ದಿರಿಸದ ಟಿಕೆಟ್‌ಗಳನ್ನು ಬುಕ್ ಮಾಡುವ ಯುಟಿಎಸ್ ಆ್ಯಪ್ ನಲ್ಲಿ ಕನ್ನಡ ಭಾಷೆಯನ್ನು ಪರಿಚಯಿಸಿದೆ.
ಬೆಂಗಳೂರು (ಜ.18): ನೈಋತ್ಯ ರೈಲ್ವೆಯು ಕನ್ನಡದಲ್ಲಿ ಅನ್ ರಿಸರ್ವ್ಡ್ ಟಿಕೆಟಿಂಗ್ ಸಿಸ್ಟಮ್ (UTS) ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ ಮತ್ತು ಬಳಕೆದಾರರು ಈಗ ಕನ್ನಡ ಭಾಷೆಯ ಸಹಾಯದಿಂದ ತಮ್ಮ ಟಿಕೆಟ್‌ಗಳನ್ನು ಬುಕ್ ಮಾಡಬಹುದಾಗಿದೆ. ರಾಜ್ಯದ ಸ್ಥಳೀಯ ಭಾಷೆಯಲ್ಲಿ ಸರ್ಕಾರಿ ಅಪ್ಲಿಕೇಶನ್‌ಗಳನ್ನು ಒದಗಿಸುವುದು ಕರ್ನಾಟಕದ ಜನರ ಬಹುಕಾಲದ ಬೇಡಿಕೆಯಾಗಿತ್ತು. ಅದನ್ನೀಗ ನೈಋತ್ಯ ರೈಲ್ವೆ ಸಾಕಾರ ಮಾಡಿದೆ. ನೈಋತ್ಯ ರೈಲ್ವೆ ವಿಭಾಗೀಯ ರೈಲ್ವೇ ಮ್ಯಾನೇಜರ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನ ಪೋಸ್ಟ್‌ನಲ್ಲಿ, “ನೈಋತ್ಯ ರೈಲ್ವೆಯು ಜನವರಿ 18 ರಂದು ಕನ್ನಡ ಭಾಷೆಯಲ್ಲಿ ಮಾರ್ಪಾಡುಗಳೊಂದಿಗೆ ಕಾಯ್ದಿರಿಸದ ರೈಲು ಟಿಕೆಟ್‌ಗಳನ್ನು ಖರೀದಿಸಲು UTS ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ.” ಅಪ್ಲಿಕೇಶನ್ ಈಗಾಗಲೇ ಐಓಎಸ್ ಮತ್ತು ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ರೈಲು ನಿಲ್ದಾಣಗಳಲ್ಲಿನ ಟಿಕೆಟ್ ಕೌಂಟರ್‌ಗಳ ಬಳಿ ದಟ್ಟಣೆಯನ್ನು ತಪ್ಪಿಸಲು ಆನ್‌ಲೈನ್ ಬುಕಿಂಗ್ ಸೌಲಭ್ಯವನ್ನು ಪಡೆದುಕೊಳ್ಳುವಂತೆ ರೈಲ್ವೇ ಇಲಾಖೆ ಪ್ರಯಾಣಿಕರಿಗೆ ಮನವಿ ಮಾಡಿದೆ.
ನೈಋತ್ಯ ರೈಲ್ವೆಯಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು, ಟಿಕೆಟ್‌ಗಳ ವಿವರಗಳನ್ನು ಕನ್ನಡ ಭಾಷೆಯಲ್ಲಿ ಮುದ್ರಿಸುವುದು ಸೇರಿದಂತೆ ಕನ್ನಡ ಭಾಷಾ ಹೋರಾಟಗಾರರು ಸಾಕಷ್ಟು ವಿಚಾರಗಳಲ್ಲಿ ಕನ್ನಡೀಕರಣ ಆಗಬೇಕು ಎಂದು ಒತ್ತಾಯಿಸುತ್ತಿದ್ದರು. ಕರ್ನಾಟಕವು ಭಾರತೀಯ ರೈಲ್ವೆಗೆ ಬಹಳ ಮುಖ್ಯವಾದ ರಾಜ್ಯವಾಗಿದೆ ಏಕೆಂದರೆ ಇದು ಶಿಕ್ಷಣ, ಪ್ರವಾಸೋದ್ಯಮ ಮತ್ತು ವ್ಯಾಪಾರಕ್ಕಾಗಿ ದೇಶದಾದ್ಯಂತ ಅನೇಕ ಜನರನ್ನು ಸೆಳೆಯುತ್ತದೆ.
Travel Tips : ತತ್ಕಾಲ್ ರೈಲ್ವೆ ಟಿಕೆಟ್ ಬುಕ್ ಮಾಡಲು ಇಲ್ಲಿವೆ ಟಿಪ್ಸ್!
ಯುಟಿಎಸ್ ಆ್ಯಪ್ ಮೂಲಕ ಟಿಕೆಟ್ ಬುಕಿಂಗ್, ಟಿಕೆಟ್ ಕ್ಯಾನ್ಸಲ್, ಫ್ಲಾಟ್‌ಫ್ಲಾರ್ಮ್ ಟಿಕೆಟ್ ಮತ್ತು ಸೀಸನ್ ಟಿಕೆಟ್‌ಗಳನ್ನು ಖರೀದಿ ಮಾಡಬಹುದಾಗಿದೆ. ಇದು ಕಾಯ್ದಿರಿಸದ ರೈಲ್ವೆ ಟಿಕೆಟ್‌ಗಾಗಿ ಜನರು ಸರತಿ ಸಾಲಿನಲ್ಲಿ ನಿಲ್ಲಬೇಕಾದ ಅನಿವಾರ್ಯತೆಯನ್ನು ತಪ್ಪಿಸುತ್ತದೆ. ಕನ್ನಡ ಭಾಷೆ ಕೂಡ ಈಗ ಇರುವುದರಿಂದ ಕನ್ನಡ ಹೊರತಾಗಿ ಬೇರೆ ಭಾಷೆ ಬರದ ವ್ಯಕ್ತಿಗಳಿಗೆ ಟಿಕೆಟ್ ಖರೀದಿ ಮಾಡಲು ಉಪಯುಕ್ತವಾಗಲಿದೆ.
ಕೊಂಕಣ ರೈಲ್ವೆಯಲ್ಲಿ ಕಳ್ಳತನ ಪ್ರಕರಣ ಗಂಭೀರವಾಗಿ ಪರಿಗಣಿಸಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲು ಕರ್ನಾಟಕದ ಮೈಸೂರು ಮತ್ತು ಚೆನ್ನೈ ನಡುವೆ ಉದ್ಘಾಟನೆಗೊಂಡಿದ್ದು ಅದು ಬೆಂಗಳೂರಿನ ಮೂಲಕ ಪ್ರಯಾಣಿಸಲಿದೆ. ವರದಿಗಳ ಪ್ರಕಾರ, ಎರಡೂ ನಗರಗಳ ನಡುವೆ ಸುಲಭವಾಗಿ ಪ್ರಯಾಣಿಸಲು ಹುಬ್ಬಳ್ಳಿ ಮತ್ತು ಬೆಂಗಳೂರು ನಡುವೆ ಮತ್ತೊಂದು ವಂದೇ ಭಾರತ್ ರೈಲನ್ನು ಪ್ರಾರಂಭಿಸಲು ಸರ್ಕಾರ ಯೋಜಿಸುತ್ತಿದೆ. ಈ ಬಗ್ಗೆ ಅಧಿಕೃತ ಘೋಷಣೆಯನ್ನು ನಿರೀಕ್ಷಿಸಲಾಗುತ್ತಿದೆ.