ಬೆಂಗಳೂರು : ದಕ್ಷಿಣದ ಗಂಗಾ ಎಂದೇ ಪ್ರಖ್ಯಾತಿ ಹೊಂದಿರುವ ಕಾವೇರಿ ನದಿಯ ತ್ರಿವೇಣಿ ಸಂಗಮದ ಶ್ರೀ ಕ್ಷೇತ್ರ ಟಿ.ನರಸೀಪುರ ತಾಲೂಕಿನ ತಿರುಮಕೂಡಲುದಲ್ಲಿ ಫೆ.17  ರಿಂದ 19 ವರೆಗೆ ನಡೆಯಲಿರುವ ‘11 ನೇ ಕುಂಭಮೇಳ’ಕ್ಕೆ ಆಗಮಿಸುವ ಭಕ್ತರಿಗೆ ಸೂಕ್ತ ಮೂಲ ಸೌಲಭ್ಯ ಕಲ್ಪಿಸುವುದಕ್ಕೆ ಬೇಕಾದ ಹಣಕಾಸಿನ ನೆರವು ಒದಗಿಸುವುದಕ್ಕೆ ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿ ಹೇಳಿದರು. 

ನಗರದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಬುಧವಾರ ಸುತ್ತೂರು, ಆದಿಚುಂಚನಗಿರಿ ಸಂಸ್ಥಾನ ಸ್ವಾಮೀಜಿಗಳು ಹಾಗೂ ಮೈಸೂರು ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಟಿ.ನರಸೀಪುರದ ತಿರುಮಕೂಡಲು ‘11ನೇ ಕುಂಭಮೇಳ’ ಕುರಿತು ಪೂರ್ವಸಿದ್ಧತಾ ಸಭೆ ನಡೆಸಲಾಯಿತು.

ಕಳೆದೆರಡು ಪೂರ್ವ ಸಿದ್ಧತಾ ಸಭೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದ ಸಿಎಂ ಕುಮಾರಸ್ವಾಮಿ, ಟಿ.ನರಸಿಪುರದ ತಿರುಮಕೂಡಲು ತ್ರಿವೇಣಿ ಸಂಗಮದ ಶ್ರೀ ಕ್ಷೇತ್ರದಲ್ಲಿ3 ವರ್ಷಗಳಿಗೊಮ್ಮೆ ಕುಂಭಮೇಳ ನಡೆಸಲಾಗುತ್ತಿದೆ. 

ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಕುಂಭಮೇಳದ ಆಯೋಜನೆ, ಪ್ರಚಾರ ಹಾಗೂ ಆಗಮಿಸುವ ಭಕ್ತರಿಗೆ ಸೂಕ್ತ ಮೂಲಸೌಕರ್ಯ ಒದಗಿಸಲು ಬೇಕಾದ ಸಿದ್ಧತೆಗಳನ್ನು ಅಚ್ಚುಕಟ್ಟಾಗಿ ಮಾಡಬೇಕು. ಭಕ್ತರಿಗೆ ಯಾವುದೇ ರೀತಿ ಅನಾನುಕೂಲವಾಗಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಣದ ಬಗ್ಗೆ ಚಿಂತೆ ಬೇಡ. ಕುಂಭಮೇಳಕ್ಕೆ ಆಗಮಿಸುವ ಭಕ್ತರಿಗೆ ಬೇಕಾದ ಸೋಪಾನ ಕಟ್ಟೆ, ಶೌಚಾಲಯ, ಸ್ನಾನಗೃಹಗಳ ನಿರ್ಮಾಣ, ರಸ್ತೆ, ನಿವಾಸಿ ಕೇಂದ್ರಗಳ ವ್ಯವಸ್ಥೆ ಮಾಡಿ ಎಂದು ಹೇಳಿದರು. 

ಇಬ್ಬರು ಅಧಿಕಾರಿಗಳು ಉತ್ತರ ಪ್ರದೇಶಕ್ಕೆ ಹೋಗಿ: ಉತ್ತರ ಪ್ರದೇಶ ಪ್ರಯಾಗದಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಕೇಂದ್ರ ಸರ್ಕಾರ 4,200 ಕೋಟಿ ರು. ವೆಚ್ಚ ಮಾಡಿದೆ. ಇಬ್ಬರು ಅಧಿಕಾರಿಗಳು ಪ್ರಯಾಗಗೆ ಭೇಟಿ ನೀಡಿ, ಅಲ್ಲಿ ಭಕ್ತರಿಗೆ ಯಾವ ರೀತಿ ವ್ಯವಸ್ಥೆ ಮಾಡಲಾಗಿದೆ ಎಂಬದನ್ನು ಪರಿಶೀಲನೆ ಮಾಡಿಕೊಂಡು ಬನ್ನಿ. ವಿಶೇಷವಾದ ಕಾರ್ಯಕ್ರಮಗಳನ್ನು ರೂಪಿಸಿ, ಉತ್ತರ ಭಾರತದಲ್ಲಿ ನಡೆಯುವ ಕುಂಭ ಮೇಳಕ್ಕೆ ಯಾವುದೇ ರೀತಿ ಕಡಿಮೆ ಇರದಂತೆ ಟಿ.ನರಸೀಪುರದ ಕುಂಭಮೇಳದಲ್ಲಿ ವ್ಯವಸ್ಥೆ ಮಾಡಿ ಎಂದು ತಿಳಿಸಿದರು.

ಸುತ್ತೂರು ಮಠಾಧ್ಯಕ್ಷರಾದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ, ಕೈಲಾಸ ಆಶ್ರಮ ಮಹಾಸಂಸ್ಥಾನ ಮಠದ ಜಯೇಂದ್ರಪುರಿ ಸ್ವಾಮೀಜಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಸಣ್ಣ ನೀರಾವರಿ ಸಚಿವ ಸಿ. ಪುಟ್ಟರಾಜು, ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ, ಲೋಕಸಭಾ ಸದಸ್ಯ ಶಿವರಾಮೇಗೌಡ, ಶಾಸಕರಾದ ಯತೀಂದ್ರ ಸಿದ್ದರಾಮಯ್ಯ, ಗೋಪಾಲಯ್ಯ, ಎಚ್. ವಿಶ್ವನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.