ಬೆಂಗಳೂರು :  ನಗರದ ತುಮಕೂರು ರಸ್ತೆಯಲ್ಲಿ ಗೊರಗುಂಟೆ ಪಾಳ್ಯದಿಂದ ಆರಂಭವಾಗುವ ಮೇಲ್ಸೇತುವೆ ಮತ್ತು ಯಶವಂತಪುರ ವೃತ್ತದಿಂದ ಕೆನ್ನಮೆಟಲ್‌ ಕಾರ್ಖಾನೆವರೆಗಿನ ರಸ್ತೆಗೆ ಕರ್ನಾಟಕ ರತ್ನ ಡಾ.ಶಿವಕುಮಾರ ಸ್ವಾಮೀಜಿ ಅವರ ಹೆಸರು ನಾಮಕರಣ ಮಾಡಲು ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ತಿಳಿಸಿದ್ದಾರೆ.

ಯಶವಂತಪುರದ ಸಂವಿಧಾನ ವೃತ್ತದಿಂದ ತುಮಕೂರು ರಸ್ತೆಯ ಕೆನ್ನಮೆಟಲ್‌ ಕಾರ್ಖಾನೆವರೆಗಿನ ರಸ್ತೆಗೆ ‘ಪರಮ ಪೂಜ್ಯ ಡಾ.ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳವರ ರಸ್ತೆ’ ಎಂದು, ಅದೇ ರೀತಿ ಗೊರಗುಂಟೆ ಪಾಳ್ಯದಿಂದ ಆರಂಭವಾಗಿ ಕೆನ್ನಮೆಟಲ್‌ ಕಾರ್ಖಾನೆ ಬಳಿ ಕೊನೆಗೊಳ್ಳುವ ಮೇಲ್ಸೇತುವೆಗೆ ‘ಪರಮ ಪೂಜ್ಯ ಡಾ.ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾ ಸ್ವಾಮೀಜಿಗಳವರ ಮೇಲ್ಸೇತುವೆ’ ಎಂದು ನಾಮಕರಣ ಮಾಡಬೇಕೆಂದು ಈಗಾಗಲೇ ಕೌನ್ಸಿಲ್‌ ಸಭೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿದೆ.

ಸರ್ಕಾರದೊಂದಿಗೆ ಚರ್ಚಿಸಿ ಆದಷ್ಟುಬೇಗ ಅನುಮೋದನೆ ಪಡೆದು ಶೀಘ್ರದಲ್ಲೇ ರಸ್ತೆ ಮತ್ತು ಮೇಲ್ಸೇತುವೆಗೆ ಶ್ರೀಗಳ ಹೆಸರು ನಾಮಕರಣ ಮಾಡುವ ಕಾರ್ಯ ಕೈಗೊಳ್ಳುವುದಾಗಿ ಮೇಯರ್‌ ಹೇಳಿದ್ದಾರೆ.