ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆ (ಕ್ಯಾನ್ಸರ್‌) ಮಾದರಿಯಲ್ಲೇ ಹುಬ್ಬಳ್ಳಿ-ಧಾರವಾಡ ಭಾಗಕ್ಕೆ ಒಂದು ಸುಸಜ್ಜಿತ ಕ್ಯಾನ್ಸರ್‌ ಆಸ್ಪತ್ರೆ ನಿರ್ಮಾಣ ರಾಜ್ಯಾದ್ಯಂತ ಸರ್ಕಾರಿ ಕ್ಯಾನ್ಸರ್‌ ಆಸ್ಪತ್ರೆಗಳಲ್ಲಿ ಕಡಿಮೆ ದರದಲ್ಲಿ ಔಷಧಿ ಒದಗಿಸಲು ಖಾಸಗಿ ಸಂಸ್ಥೆಗಳ ಸಹಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ

 ಬೆಂಗಳೂರು (ಆ.24): ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆ (ಕ್ಯಾನ್ಸರ್‌) ಮಾದರಿಯಲ್ಲೇ ಹುಬ್ಬಳ್ಳಿ-ಧಾರವಾಡ ಭಾಗಕ್ಕೆ ಒಂದು ಸುಸಜ್ಜಿತ ಕ್ಯಾನ್ಸರ್‌ ಆಸ್ಪತ್ರೆ ನಿರ್ಮಾಣ ಮಾಡುವ ಹಾಗೂ ರಾಜ್ಯಾದ್ಯಂತ ಸರ್ಕಾರಿ ಕ್ಯಾನ್ಸರ್‌ ಆಸ್ಪತ್ರೆಗಳಲ್ಲಿ ಕಡಿಮೆ ದರದಲ್ಲಿ ಔಷಧಿ ಒದಗಿಸಲು ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ವ್ಯವಸ್ಥೆ ಮಾಡುವ ಚಿಂತನೆಯಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಇಸ್ಫೋಸಿಸ್‌ ವತಿಯಿಂದ ನಿರ್ಮಿಸಿರುವ ಹೊರ ರೋಗಿಗಳ ವಿಭಾಗದ ಕಟ್ಟಡ ಹಾಗೂ ಹಲವು ವಿಶೇಷ ಸೌಲಭ್ಯಗಳನ್ನು ಸೋಮವಾರ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಕ್ಯಾನ್ಸರ್‌ ಗಂಭೀರ ಕಾಯಿಲೆ. ಹೀಗಾಗಿ ಎಲ್ಲರಿಗೂ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯುವಂತೆ ಮಾಡಲು ರಾಜ್ಯದ ವಿವಿಧೆಡೆ ಕ್ಯಾನ್ಸರ್‌ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಈಗಾಗಲೇ ಶಿವಮೊಗ್ಗ, ಕಲಬುರಗಿಯಲ್ಲಿ ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆ ಶಾಖೆಗಳು ಪ್ರಾರಂಭವಾಗಿವೆ. ಸದ್ಯದಲ್ಲೇ ಹುಬ್ಬಳ್ಳಿ-ಧಾರವಾಡ ಭಾಗಕ್ಕೂ ಒಂದು ಆಸ್ಪತ್ರೆ ನಿರ್ಮಿಸಲು ಸಿದ್ದರಿದ್ದು, ಇದಕ್ಕೆ ಬೇಕಾದ ಸಿದ್ಧತೆಯನ್ನು ಕಿದ್ವಾಯಿ ಸಂಸ್ಥೆ ಹಾಗೂ ಆರೋಗ್ಯ ಇಲಾಖೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ದಿನವೇ ವಿದ್ಯಾರ್ಥಿಗಳಿಗೆ ಕೊಡುಗೆ ಘೋಷಿಸಿದ ಸಿಎಂ

ರಿಯಾಯಿತಿ ಔಷಧ ವಿತರಣೆ: ಕ್ಯಾನ್ಸರ್‌ ರೋಗಿಗಳಿಗೆ ಚಿಕಿತ್ಸೆ ಕೊಡಿಸುವುದು ದುಬಾರಿ ಕೆಲಸ. ಸರ್ಕಾರ ಉಚಿತ ಹಾಗೂ ರಿಯಾಯಿತಿ ದರದಲ್ಲಿ ಚಿಕಿತ್ಸೆ ಕೊಟ್ಟರೂ ಔಷಧಿಗಾಗಿ ಹೆಚ್ಚು ಹಣ ವ್ಯಯಿಸಬೇಕಾಗುತ್ತದೆ. ಹೀಗಾಗಿ ರಾಜ್ಯ ಸರ್ಕಾರವು ಖಾಸಗಿ ಸಂಸ್ಥೆಗಳು ಹಾಗೂ ಖಾಸಗಿ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ ಕಿದ್ವಾಯಿ ಸ್ಮಾರಕ ಗಂಥಿ ಹಾಗೂ ಅದರ ಘಟಕಗಳಲ್ಲಿ ಕಡಿಮೆ ದರದಲ್ಲಿ ಔಷಧ ವಿತರಣೆ ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದರು.

ನನ್ನ ತಾಯಿಗೂ ಕ್ಯಾನ್ಸರ್‌ ಇತ್ತು: ಸಿಎಂ

ನನ್ನ ತಾಯಿಗೂ ಕ್ಯಾನ್ಸರ್‌ ಇತ್ತು. ಕ್ಯಾನ್ಸರ್‌ ಬಂದರೆ ಚಿಕಿತ್ಸೆ ಕೊಡಿಸಬೇಕೋ ಬೇಡವೋ ಎನಿಸಿಬಿಡುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೋವು ತೋಡಿಕೊಂಡರು.

ಕ್ಯಾನ್ಸರ್‌ ಚಿಕಿತ್ಸೆ ಕೊಟ್ಟರೂ ಬದುಕುತ್ತಾರೋ ಇಲ್ಲ ಎಂಬ ಭಯ ಹುಟ್ಟುತ್ತದೆ. ನನ್ನ ತಾಯಿಗೆ ಕ್ಯಾನ್ಸರ್‌ ಆದಾಗಿನ ಅವಧಿಗಿಂತ ಈಗ ವೈದ್ಯಕೀಯ ವಿಜ್ಞಾನ ಮುಂದುವರೆದಿದೆ. ಪ್ರಥಮ ಹಾಗೂ ದ್ವಿತೀಯ ಹಂತದಲ್ಲೇ ಪತ್ತೆ ಮಾಡಿದರೆ ರೋಗಿಗಳನ್ನು ಬದುಕಿಸಬಹುದು. ಕ್ಯಾನ್ಸರ್‌ ಬಂದರೆ ಸಾವು ನಿಶ್ಚಿತ ಎಂಬ ಮಾನಸಿಕ ಒತ್ತಡದಿಂದ ರೋಗಿಗಳನ್ನು ಹೊರ ತರಬೇಕು ಎಂದರು.

ಸುಧಾಮೂರ್ತಿ ಅವರ ಸಹಕಾರ ದೊಡ್ಡದು:

ಇಸ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಸುಧಾಮೂರ್ತಿ ಅವರು ಬಡವರಿಗೆ ಸದಾ ಸಹಾಯ ಮಾಡುತ್ತಿದ್ದಾರೆ. ಸುಧಾ ಅಕ್ಕ ಅವರ ಸಹಕಾರ ಗುಣ ದೊಡ್ಡದು. ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ ಎಂಬ ಸರ್ವಜ್ಞನ ಮಾತನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬಂದಿದ್ದಾರೆ. ಎಲ್ಲಾ ಆಸ್ಪತ್ರೆಗಳಿಗೂ ಸಹಾಯಹಸ್ತ ಚಾಚಿದ್ದಾರೆ ಎಂದು ನೆನೆದರು.

ನಾನು ಶ್ರೀಮಂತರಿಗಾಗಿ ಯಾವುದೇ ಕೆಲಸ ಮಾಡುವುದಿಲ್ಲ. ಬಡರೋಗಿಗಳ ನೆರವಿಗೆ ನಮ್ಮ ಪ್ರತಿಷ್ಠಾನ ಸದಾ ಮುಂದಿರುತ್ತದೆ. ಬಡವರ ಆರೋಗ್ಯ ಚೆನ್ನಾಗಿರಬೇಕು. ಹಣ ಇರುವುದು ಜನರಿಗಾಗಿಯೇ ಹೊರತು ಎಣಿಸಲು ಅಲ್ಲ. ಈ ಆಸ್ಪತ್ರೆ ನಮ್ಮ ದೇಶದಲ್ಲೇ ಪ್ರಥಮ ಆಸ್ಪತ್ರೆ ಆಗಬೇಕು.

- ಡಾ.ಸುಧಾಮೂರ್ತಿ, ಇಸ್ಫೋಸಿಸ್‌ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರು

ನಮ್ಮಲ್ಲಿರುವ ಶಸ್ತ್ರಚಿಕಿತ್ಸೆ ವ್ಯವಸ್ಥೆ ದೇಶದ ಇನ್ನೆಲ್ಲೂ ಇಲ್ಲ. ಸುಧಾಮೂರ್ತಿ ಅವರು 70 ಕೋಟಿ ರು.ಗಿಂತ ಹೆಚ್ಚು ದೇಣಿಗೆ ನೀಡಿದ್ದಾರೆ. ವಿಶ್ವಮಟ್ಟದ 5 ಶಸ್ತ್ರಚಿಕಿತ್ಸಾ ಘಟಕಗಳನ್ನು ಈ ಸಂಸ್ಥೆ ಹೊಂದಿದೆ. ಯೂರೋಪ್‌ ಬಿಟ್ಟರೆ ಸಿ.ಟಿ. ಸಿಮ್ಯುಲೇಟರ್‌ ಇರುವುದು ನಮ್ಮಲ್ಲಿ ಮಾತ್ರ.

- ಡಾ.ಸಿ.ರಾಮಚಂದ್ರ, ನಿರ್ದೇಶಕರು, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ

ಕಿದ್ವಾಯಿಯಲ್ಲಿ ಆರಂಭಗೊಂಡ ಹೊಸ ವ್ಯವಸ್ಥೆಗಳು

ಸೋಮವಾರ ಇಸ್ಫೋಸಿಸ್‌ ಹೊರ ರೋಗಿ ವಿಭಾಗದ ಕಟ್ಟಡ, ರಾಜ್ಯದ ಮೊಟ್ಟಮೊದಲ ಕಾಗದ ರಹಿತ ಸರ್ಕಾರಿ ಆಸ್ಪತ್ರೆ (ಪ್ಯಾಕ್ಸ್‌) ಸೇವೆ ಸೇರಿದಂತೆ ಹಲವಾರು ವಿಶೇಷ ಹಾಗೂ ವಿಶ್ವ ದರ್ಜೆ ಸೌಲಭ್ಯಗಳನ್ನು ಲೋಕಾರ್ಪಣೆ ಮಾಡಲಾಯಿತು. ಬೋನ್‌ ಮ್ಯಾರೋ ಟ್ರಾನ್ಸ್‌ಪ್ಲ್ಯಾಂಟ್‌ ಘಟಕ (ಅಸ್ಥಿಮಜ್ಜೆ ಕಸಿ), ಪೆಟ್‌ ಸ್ಕಾ್ಯನರ್‌ ಬಂಕರ್‌, ಮಾಲಿಕ್ಯುಲರ್‌ ಆಂಕಾಲಜಿ ಲ್ಯಾಬ್‌, ಮಕ್ಕಳ ಐಸಿಯು, ಬ್ರಾಕಿಥೆರಪಿ ಹಾಗೂ ಸಿಮ್ಯುಲೇಟರ್‌, ನವೀಕೃತ ಔಷಧಾಲಯ, ಶಸ್ತ್ರಚಿಕಿತ್ಸಾ ಕೊಠಡಿಗಳ ಉದ್ಘಾಟನೆ ಮಾಡಲಾಯಿತು.