ಕೆಎಸ್ಸಾರ್ಟಿಸಿ ಬಸ್‌ಗಳಿನ್ನು ‘ಸಂಚಾರಿ ತರಕಾರಿ ಅಂಗಡಿ’|  ಮನೆಬಾಗಿಲಿಗೇ ಈ ಮೂಲಕ ತರಕಾರಿ ಪೂರೈಕೆ

ಬೆಂಗಳೂರು(ಏ.27): ಕೊರೋನಾ ಸೋಂಕಿತರಿರುವ ಬಡಾವಣೆಗಳಲ್ಲಿ ಇನ್ನು ಮುಂದೆ ಸಂಚಾರಿ ತರಕಾರಿ ಅಂಗಡಿ ಬಸ್‌ಗಳು ಬರಲಿವೆ!

ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಕಂಟೈನ್‌ಮೆಂಟ್‌ ಹಾಗೂ ಹಾಟ್‌ ಸ್ಪಾಟ್‌ ಎಂದು ಗುರುತಿಸಿರುವ ಪ್ರದೇಶಗಳ ಜನ ಮನೆ ಬಾಗಿಲಲ್ಲೇ ತರಕಾರಿ ಖರೀದಿಸಬಹುದು. ಕಂಟೈನ್ಮೆಂಚ್‌ ಪ್ರದೇಶಗಳಲ್ಲಿ ಜನ ಮನೆಗಳಿಂದ ಹೊರ ಬಾರದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ಈ ಪ್ರದೇಶಗಳಲ್ಲಿ ಆಟೋ, ತಳ್ಳುವ ಗಾಡಿಗಳಲ್ಲಿ ತರಕಾರಿ ಮಾರಾಟ ಮಾಡುವುದರಿಂದ ಅವರಿಗೂ ಸೋಂಕು ತಗುಲುವ ಸಾಧ್ಯತೆ ಇದೆ. ಹೀಗಾಗಿ ಮನೆ ಬಾಗಿಲಿಗೆ ತರಕಾರಿ ಪೂರೈಸಲು ಹಳೆಯ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಸಂಚಾರಿ ತರಕಾರಿ ಅಂಗಡಿ ಲಾರಿಗಳಾಗಿ ಪರಿವರ್ತಿಸಲು ನಿಗಮ ಮುಂದಾಗಿದೆ.

ಲಾಕ್‌ಡೌನ್‌ ಸಡಿಲ: ಬಸ್‌​ಗಳ ಮೂಲಕ ಸ್ವಂತ ಸ್ಥಳ​ಗ​ಳಿಗೆ ತೆರಳಿದ ವಲಸೆ ಕಾರ್ಮಿಕರು

ಪ್ರಸ್ತುತ ನಿಗಮದಲ್ಲಿ 50 ಲಾರಿ ಮಾದರಿಯ ಬಸ್‌ಗಳಿದ್ದು, ನಿಗಮಕ್ಕೆ ಸಂಬಂಧಿಸಿದ ಸರಕು ಸಾಗಣೆ ಮಾಡುತ್ತಿವೆ. ಇವುಗಳ ಜೊತೆಗೆ ಹಳೆಯ ಬಸ್‌ಗಳ ಮೇಲ್ಛಾವಣಿ ತೆಗೆದು ಲಾರಿಯಾಗಿ ಮಾರ್ಪಡಿಸಲು ತೀರ್ಮಾನಿಸಲಾಗಿದೆ.

ಬೆಂಗಳೂರು, ಮೈಸೂರು ಸೇರಿದಂತೆ ಕೊರೋನಾ ಸೋಂಕಿತರಿರುವ ಕಂಟೈನ್ಮೆಂಚ್‌ ಹಾಗೂ ಹಾಚ್‌ ಸ್ಪಾಟ್‌ ಇರುವ ಪ್ರದೇಶಗಳಲ್ಲಿ ಈ ಸಂಚಾರಿ ತರಕಾರಿ ಲಾರಿಗಳು ಸಂಚರಿಸಲಿವೆ. ಹೀಗಾಗಿ ಜನ ತಮ್ಮ ಮನೆಗಳ ಬಳಿಯೇ ತಮಗೆ ಬೇಕಾದ ತರಕಾರಿ ಖರೀದಿಸಬಹುದು.

ಶಿರಸಿ ಸಾರಿಗೆ ಸಂಸ್ಥೆ ವಿಭಾಗಕ್ಕೆ 12 ಕೋಟಿ ನಷ್ಟ

ಕೆಎಸ್‌ಆರ್‌ಟಿಸಿ ಈ ಸಂಚಾರಿ ತರಕಾರಿ ಅಂಗಡಿ ಲಾರಿಗಳನ್ನು ಸಿದ್ಧಪಡಿಸಿ, ಜಿಲ್ಲಾಡಳಿತಗಳಿಗೆ ನೀಡಲಿದೆ. ತರಕಾರಿ ಸಂಗ್ರಹ, ಮಾರಾಟದ ಬಗ್ಗೆ ಆಯಾ ಜಿಲ್ಲಾಡಳಿತವೇ ಕ್ರಮ ಕೈಗೊಳ್ಳಲಿದೆ. ಈ ಸಂಬಂಧ ಇನ್ನು ಅಂತಿಮ ತೀರ್ಮಾನವಾಗಿಲ್ಲ. ಶೀಘ್ರದಲ್ಲೇ ಸಭೆ ಜರುಗಲಿದ್ದು, ಚರ್ಚೆಯ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.