ಬೆಂಗಳೂರು :  ಇಂಧನ ದರ ಹೆಚ್ಚಳದ ಹಿನ್ನೆಲೆಯಲ್ಲಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸೇರಿದಂತೆ ಎಲ್ಲ ನಿಗಮಗಳ ಬಸ್‌ ಪ್ರಯಾಣ ದರವನ್ನು ಶೇ. 18ರಷ್ಟುಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, 2013-14ರಲ್ಲಿ ಪ್ರಯಾಣ ದರ ಹೆಚ್ಚಳ ಮಾಡಿದ್ದು, ಅಲ್ಲಿಂದೀಚೆಗೆ ದರ ಪರಿಷ್ಕರಣೆ ಮಾಡಿಲ್ಲ. ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಳದಿಂದ ಸಾರಿಗೆ ಸಂಸ್ಥೆಗಳು ನಷ್ಟಅನುಭವಿಸುತ್ತಿವೆ. ಹೀಗಾಗಿ ದರ ಹೆಚ್ಚಳಕ್ಕೆ ಒಪ್ಪಿಗೆ ನೀಡುವಂತೆ ಕೋರಲಾಗಿದೆ. ಜೊತೆಗೆ ಇಂಧನ ದರ ಹೆಚ್ಚಳಕ್ಕೆ ಅನುಗುಣವಾಗಿ ಪ್ರಯಾಣ ದರವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಜಾಸ್ತಿ ಮಾಡುವ ಸಲಹೆಯನ್ನು ನೀಡಿದ್ದು, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ತಾತ್ವಿ​ಕ​ವಾಗಿ ಒಪ್ಪಿಕೊಂಡಿದ್ದರೂ, ಇನ್ನೂ ಅಂತಿಮ ತೀರ್ಮಾನವಾಗಿಲ್ಲ ಎಂದರು.

3 ಸಾವಿರ ಬಸ್‌ ಖರೀದಿ:

ಸಾರಿಗೆ ಸಂಸ್ಥೆಗಳಿಗೆ ಐಷಾರಾಮಿ, ಸ್ಲೀಪರ್‌ ಸೇರಿ 3 ಸಾವಿರ ಬಸ್‌ಗಳನ್ನು ಖರೀದಿಸಲು ನಿರ್ಧರಿಸಲಾಗಿದೆ. ನಿಗಮದ ಬಸ್‌ಗಳು 8 ಲಕ್ಷ ಕಿಲೋಮೀಟರ್‌ ಸಂಚರಿಸಿದ ಬಳಿಕ ಅವುಗಳನ್ನು ಗುಜರಿಗೆ ಹಾಕುವ ಪದ್ಧತಿ ಇದೆ. ಆದರೆ ನಮ್ಮ ಬಸ್‌ಗಳ ಚಾಸಿಗಳು 20 ಲಕ್ಷ ಕಿಲೋ ಮೀಟರ್‌ನಷ್ಟುಸಂಚರಿಬಲ್ಲವು. ಹಾಗಾಗಿ 8 ಲಕ್ಷ ಕಿಲೋಮೀಟರ್‌ ಸಂಚರಿಸಿದ ಬಸ್‌ಗಳನ್ನು ಹರಾಜು ಹಾಕದೇ ಅವುಗಳಿಗೆ ಹೊಸದಾಗಿ ಕವಚಗಳನ್ನು ಅಳವಡಿಸಿ, ಪುನಃ 6-8 ಲಕ್ಷ ಕಿಲೋಮೀಟರ್‌ವರೆಗೆ ಸಂಚರಿಸುವಂತೆ ಮಾಡಲಾಗುವುದು ಎಂದು ತಿಳಿಸಿದರು.

ಅಮಾನತು:

ಮಾರುಕಟ್ಟೆದರಕ್ಕಿಂತ ಹೆಚ್ಚಿನ ದರಕ್ಕೆ ಸರ್ವರ್‌ ಖರೀದಿ ಸೇರಿದಂತೆ ನಿಗಮದಲ್ಲಿ ಕಂಪ್ಯೂಟರ್‌ ಬಿಡಿ ಭಾಗಗಳ ಖರೀದಿಯಲ್ಲಿ ಅಧಿಕಾರಿಗಳ ಸಹಿ ದುರ್ಬಳಕೆ ಮಾಡಿಕೊಂಡಿರುವ ಆರೋಪದ ಮೇಲೆ 26 ಮಂದಿಯನ್ನು ಹಾಗೂ ಬಸ್‌ ಸೀಟುಗಳಿಗೆ ಅಳವಡಿಸುವ ರೆಕ್ಸಿನ್‌ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಸಂಬಂಧ ನಾಲ್ಕು ಜನರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಅದೇ ರೀತಿ ವಾಯವ್ಯ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕರ ನಿರ್ದೇಶಕರ ನಕಲಿ ಸಹಿ ಮಾಡಿ 142 ಸಿಬ್ಬಂದಿಗಳ ವರ್ಗಾವಣೆ ಮಾಡಿದ ಪ್ರಕರಣ ಸಂಬಂಧ 15 ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಕಳೆದ 2018-19ನೇ ಸಾಲಿನಲ್ಲಿ ಸುಮಾರು 117 ಕೋಟಿ ರು. ಮೌಲ್ಯದ ಬಿಡಿ ಭಾಗಗಳನ್ನು ಖರೀದಿಸಿರುವ ಸಂಬಂಧ ಸರಿಯಾದ ಲೆಕ್ಕಪತ್ರ ಇಟ್ಟಿಲ್ಲ, ಈ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಅದೇ ರೀತಿ ಬಿಎಂಟಿಸಿ 250 ಕೋಟಿ ನಷ್ಟಉಂಟಾಗಲು ಕಾರಣ ಏನೆಂಬುದನ್ನು ಪತ್ತೆ ಮಾಡಲು ತನಿಖೆ ನಡೆಯುತ್ತಿದೆ ಎಂದು ಅವರು ವಿವರಿಸಿದರು.

ಬಿಡಿ ಭಾಗಗಳ ಮಳಿಗೆ:

ಸಾರಿಗೆ ನಿಗಮಕ್ಕೆ ಬೇಕಾದ ಬಿಡಿ ಭಾಗಗಳ ಖರೀದಿಯಲ್ಲಿ ಅವ್ಯವಹಾರವಾಗುವುದನ್ನು ತಪ್ಪಿಸಲು ಸಂಬಂಧಪಟ್ಟಮೂಲ ತಯಾರಿಕಾ ಸಂಸ್ಥೆಯೇ ಮಳಿಗೆ ತೆರೆಯಲು ಅವಕಾಶ ನೀಡಲು ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ನಿಗಮದಲ್ಲಿ ಅನಗತ್ಯವಾಗಿ ಬಿಡಿ ಭಾಗಗಳನ್ನು ದಾಸ್ತಾನು ಮಾಡಿಕೊಳ್ಳುವುದನ್ನು ಹಾಗೂ ಅಕ್ರಮ ನಡೆಯುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.