ಶೀಘ್ರವೇ ಮತ್ತೊಂದು ಮಹತ್ವದ ಯೋಜನೆಯನ್ನು ಆರಂಭ ಮಾಡುವುದಾಗಿ ಸಿಎಂ ಎಚ್. ಡಿ .ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರು : ನದಿ ನೀರನ್ನು ಶುದ್ಧೀಕರಿಸಿ ಹಳ್ಳಿಗಳ ಪ್ರತಿ ಮನೆಗೆ ಕುಡಿಯುವ ನೀರು ಸರಬರಾಜು ಮಾಡಲು ‘ಜಲಧಾರೆ’ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2017-18ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ವಿತರಿಸಿ ಅವರು ಮಾತನಾಡಿದರು.
ಮುಂದಿನ ಐದು ವರ್ಷಗಳಲ್ಲಿ ಪ್ರತಿ ಹಳ್ಳಿಯ ಪ್ರತಿ ಮನೆಗೆ ಕುಡಿಯುವ ನೀರು ಪೂರೈಸುವ ಕೆಲಸ ಮಾಡುತ್ತಿದ್ದೇವೆ. ಅದಕ್ಕಾಗಿ ಅಂದಾಜು 70 ಸಾವಿರ ಕೋಟಿಯಷ್ಟುಹಣದ ಅಗತ್ಯ ಇದೆ. ಸರ್ಕಾರದಲ್ಲಿ ಹಣದ ಕೊರತೆ ಇರುವುದು ನಿಜ. ಕೇಂದ್ರದಿಂದ ಅನುದಾನ ಬರುವುದು ಕಡಿತಗೊಂಡಿದೆ. ಆದರೂ ಈ ಯೋಜನೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗುತ್ತಿದೆ. ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆರೆಗಳ ಹೂಳೆತ್ತಿಸಿ, ಒತ್ತುವರಿ ತೆರವು ಮಾಡಲು ಗ್ರಾ.ಪಂ. ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.
ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಪ್ರಗತಿ ಸಾಧ್ಯ ಎಂಬುದು ಮಹಾತ್ಮ ಗಾಂಧೀಜಿಯವರ ನಂಬಿಕೆ. ಹಳ್ಳಿಗಳಲ್ಲಿ ಉತ್ತಮ ಪರಿಸರ ಸೃಷ್ಟಿಸಿದಾಗ ಗಾಂಧೀಜಿ ಕನಸು ನನಸಾಗಲು ಸಾಧ್ಯ. ಸ್ವಚ್ಛತೆ ಕಾಪಾಡುವ ಮೂಲಕ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡಬೇಕು. ಗ್ರಾಮ ಪಂಚಾಯ್ತಿಗಳಿಗೆ ಇರುವ ಹೆಚ್ಚಿನ ಅಧಿಕಾರ ಬಳಸಿಕೊಂಡು ಪ್ರಾಮಾಣಿಕ ಕೆಲಸ ಮಾಡಬೇಕು. ಮಾಜಿ ಸಚಿವ ಎಚ್.ಕೆ.ಪಾಟೀಲ ಅವರು ಈ ಹಿಂದೆ ಸರ್ಕಾರದ ವತಿಯಿಂದ ಗಾಂಧಿ ಗ್ರಾಮ ಪ್ರಶಸ್ತಿ ಪ್ರಾರಂಭಿಸಿದ್ದು ಸಾರ್ಥಕವಾಗಿದೆ. ಪ್ರತಿ ಪಂಚಾಯತ್‌ಗಳು ಕೂಡ ನಾಡಿನ ಅಭಿವೃದ್ಧಿಗೆ ಪಣ ತೊಡಬೇಕು ಎಂದು ಹೇಳಿದರು.
1983-85ರಲ್ಲಿ ಮಾಜಿ ಸಚಿವ ನಜೀರ್ ಸಾಹೇಬ್ರು ಅಧಿಕಾರ ವಿಕೇಂದ್ರೀಕರಣ ಮಾಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರನ್ನು ಪ್ರೋತ್ಸಾಹಿಸಲು ಈ ಪ್ರಶಸ್ತಿ ಪ್ರಾರಂಭಿಸಲಾಗಿದೆ. ಪಂಚಾಯತ್‌ಗಳು ಕೂಡ ಸರ್ಕಾರದ ರೀತಿಯಲ್ಲೇ ಕೆಲಸ ಮಾಡುತ್ತವೆ. ಹಳ್ಳಿಗಳ ಅಭಿವೃದ್ಧಿ ನಿಟ್ಟಿನಲ್ಲಿ ಹೆಚ್ಚಿನ ಅವಕಾಶ ಪಂಚಾಯತ್ ಸದಸ್ಯರಿಗಿದೆ. ರಾಜ್ಯ ಸರ್ಕಾರ ಮಾಡದ ಕೆಲಸವನ್ನು ಅವರು ಮಾಡಬಹುದು ಎಂದು ಸಲಹೆ ನೀಡಿದರು.
ಸುಪ್ರೀಂ ಅಧಿಕಾರ:
ಗ್ರಾಮೀಣಾಭಿವೃದ್ಧಿ ಕೃಷ್ಣ ಬೈರೇಗೌಡ ಮಾತನಾಡಿ, ಗ್ರಾಮ ಪಂಚಾಯಿತಿಗಳು ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವ ಏಜೆನ್ಸಿಗಳಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರದಂತೆ ಗ್ರಾಮ ಪಂಚಾಯಿತಿಗಳದ್ದು ಸಮಾನಾಂತರ ಸರ್ಕಾರ. ಈ ಸಂಸ್ಥೆಗಳಿಗೆ ತನ್ನದೆ ಆದ ಸುಪ್ರೀಂ ಅಧಿಕಾರವಿದೆ. ಅದನ್ನು ಸದ್ಬಳಕೆ ಮಾಡಿಕೊಂಡು ಗ್ರಾಮಗಳ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸಲು ಕೇಂದ್ರ ಸರ್ಕಾರವು ನೀಡುತ್ತಿದ್ದ ಅನುದಾನದಲ್ಲಿ ಕಡಿತ ಮಾಡಲಾಗಿದೆ. ಮೊದಲು ಶೇ.70ರಷ್ಟುಅನುದಾನವನ್ನು ಕೇಂದ್ರ ಸರ್ಕಾರ ಭರಿಸುತ್ತಿತ್ತು. ಈಗ ಶೇ.12ರಷ್ಟುಮಾತ್ರ ಅನುದಾನ ನೀಡುತ್ತಿದೆ. ಉಳಿದ ಶೇ.88ರಷ್ಟುಅನುದಾನ ರಾಜ್ಯ ಸರ್ಕಾರಕ್ಕೆ ಹೊರೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಗಾಂಧಿ ಗ್ರಾಮ ಪುರಸ್ಕಾರ: ರಾಜ್ಯದ 30 ಜಿಲ್ಲೆಗಳ 175 ಗ್ರಾಮ ಪಂಚಾಯತ್‌ಗಳು ಗಾಂಧಿ ಗ್ರಾಮ ಪುರಸ್ಕಾರ ಸ್ವೀಕರಿಸಿದವು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಾಂಧಿ ಗ್ರಾಮ ಪ್ರಶಸ್ತಿ ವಿತರಿಸಿದರು. ಪ್ರಶಸ್ತಿ ಪುರಸ್ಕೃತ ಗ್ರಾ.ಪಂ.ಗಳು ತಲಾ ಐದು ಲಕ್ಷ ನಗದು ಮತ್ತು ಪಾರಿತೋಷಕ ಪಡೆದವು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮಂಗಳವಾರ ಮಹಾತ್ಮಗಾಂಧಿ ಜನ್ಮದಿನದ ಅಂಗವಾಗಿ ಗ್ರಾಮೀಣಾಭಿವೃದ್ಧಿ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲೆಯ ಗುಡಗೇರಿ ಗ್ರಾಮ ಪಂಚಾಯತ್‌ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಗಾಂಧಿ ಗ್ರಾಮ ಪುರಸ್ಕಾರ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಉಪಸ್ಥಿತರಿದ್ದರು.
