ಜೈಪುರ[ಜ.19]: ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟುಮೀಸಲು ನೀಡುವ ಗೊತ್ತುವಳಿಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ನೇತೃತ್ವದ ಸಂಪುಟ ಸಭೆ ತಾತ್ವಿಕ ಅನುಮೋದನೆ ನೀಡಿದೆ. ಶೀಘ್ರದಲ್ಲೇ ಈ ಸಂಬಂಧ ವಿಧಾನಸಭೆಯಲ್ಲಿ ಮಹಿಳಾ ಮೀಸಲು ಮಸೂದೆಯನ್ನು ಮಂಡಿಸಿ ಅನುಮೋದನೆ ಪಡೆಯುವ ನಿರೀಕ್ಷೆ ಇದೆ.

ಈ ಕುರಿತು ಮಾತನಾಡಿರುವ ಸಿಎಂ ಅಶೋಕ್‌ ಗೆಹ್ಲೋಟ್‌, ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರು ಸಂಸತ್ತಿನಲ್ಲಿ ಹಾಗೂ ವಿಧಾನಸಭೆಗಳಲ್ಲಿ ಮಹಿಳಾ ಮೀಸಲು ಮಸೂದೆ ಜಾರಿ ಮಾಡಲು ಹೋರಾಟ ನಡೆಸಿದ್ದರು. ಇನ್ನು ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಕೂಡಾ ಮಸೂದೆ ಪರ ಹೋರಾಟ ನಡೆಸಿದ್ದರು. ಅವರ ದೀರ್ಘ ಹೋರಾಟದ ಬಳಿಕ ಮಸೂದೆಗೆ ಲೋಕಸಭೆಯಲ್ಲಿ ಅನುಮೋದನೆ ದೊರೆತಿದೆ. ಆದರೆ, ರಾಜ್ಯಸಭೆಯಲ್ಲಿ ಬಾಕಿ ಉಳಿದಿದೆ ಎಂದು ಗೆಹ್ಲೋಟ್‌ ಹೇಳಿದ್ದಾರೆ.

ಕರ್ನಾಟಕದಲ್ಲೂ ಜಾರಿ?:

ಇದೇ ವೇಳೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌ ಆಡಳಿತದಲ್ಲಿ ಇರುವ ಐದು ರಾಜ್ಯಗಳಲ್ಲಿ ಮಸೂದೆಗೆ ಅನುಮೋದನೆ ಪಡೆಯಬೇಕು ಎಂದು ಬಯಸಿದ್ದಾರೆ ಎಂದು ಗೆಹ್ಲೋಟ್‌ ತಿಳಿಸಿದ್ದಾರೆ. ಹೀಗಾಗಿ ಕರ್ನಾಟಕದ ಜೆಡಿಎಸ್‌- ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲೂ ಶೀಘ್ರವೇ ಮಹಿಳಾ ಮೀಸಲು ಮಸೂದೆ ಜಾರಿಯಾಗುವ ಸಾಧ್ಯತೆ ದಟ್ಟವಾಗಿದೆ.