ನ್ಯಾಷನಲ್ ಹೆರಾಲ್ಡ್ ಪ್ರಕರಣ ಮುಂದಿಟ್ಟುಕೊಂಡು ಎಐಸಿಸಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ನಾಯಕ ರಾಹುಲ… ಗಾಂಧಿ ಅವರಿಗೆ ಕೇಂದ್ರ ಸರಕಾರ ಇ.ಡಿ. ವಿಚಾರಣೆ ಹೆಸರಿನಲ್ಲಿ ಕಿರುಕುಳ ನೀಡುತ್ತಿದೆ.
ಬೆಂಗಳೂರು (ಜೂ.12): ನ್ಯಾಷನಲ್ ಹೆರಾಲ್ಡ್ ಪ್ರಕರಣ ಮುಂದಿಟ್ಟುಕೊಂಡು ಎಐಸಿಸಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ನಾಯಕ ರಾಹುಲ… ಗಾಂಧಿ ಅವರಿಗೆ ಕೇಂದ್ರ ಸರಕಾರ ಇ.ಡಿ. ವಿಚಾರಣೆ ಹೆಸರಿನಲ್ಲಿ ಕಿರುಕುಳ ನೀಡುತ್ತಿದೆ. ಇದನ್ನು ಖಂಡಿಸಿ ಸೋಮವಾರ ಶಾಂತಿನಗರದ ಜಾರಿ ನಿರ್ದೇಶನಾಲಯ (ಇ.ಡಿ) ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಶನಿವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ದೆಹಲಿಯ ಇ.ಡಿ. ಕಚೇರಿಯು ಸೋಮವಾರದಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಇದೇ ವೇಳೆ ರಾಜ್ಯ ಕಾಂಗ್ರೆಸ್ ವತಿಯಿಂದ ಬೆಂಗಳೂರಿನ ಇ.ಡಿ. ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು. ನಮ್ಮ ನಾಯಕರು ಇ.ಡಿ. ವಿಚಾರಣೆ ಎದುರಿಸುವಷ್ಟೂಹೊತ್ತು ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು. ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಕರೆ ನೀಡಲಾಗಿದೆ. ರಾಜ್ಯದ ಎಲ್ಲಾ ಶಾಸಕರು, ಮುಖಂಡರು, ಕಾರ್ಯಕರ್ತರೂ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಜತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಕರೆ ತರುವಂತೆ ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿಗಳಿಗೆ ಸೂಚಿಸಲಾಗಿದೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣ, ರಾಹುಲ್ ಗಾಂಧಿ ವಿಚಾರಣೆಗೆ ಹೊಸ ದಿನಾಂಕ ನೀಡಿದ ಇ.ಡಿ
ಪ್ರತಿಭಟನೆಯಲ್ಲಿ ಭಾಗವಹಿಸಲು ಆಗಮಿಸುವವರು ಹಿಂದಿನ ದಿನವೇ ಬೆಂಗಳೂರಿಗೆ ಆಗಮಿಸಬೇಕು ಎಂದು ಕರೆ ನೀಡಿದರು. ಸೋನಿಯಾ ಗಾಂಧಿ ದೇಶದ ಪ್ರಧಾನಮಂತ್ರಿಯಾಗಲು ಎರಡು ಬಾರಿ ಅವಕಾಶ ಸಿಕ್ಕರೂ ದೇಶದ ಹಿತಕ್ಕಾಗಿ ವಿಶ್ವದ ಶ್ರೇಷ್ಠ ಆರ್ಥಿಕ ತಜ್ಞ ಮನಮೋಹನ್‌ಸಿಂಗ್ ಅವರಿಗೆ ಪ್ರಧಾನಮಂತ್ರಿ ಸ್ಥಾನ ತ್ಯಾಗ ಮಾಡಿದ್ದಾರೆ. ಅವರ ಬೆಳವಣಿಗೆ ಸಹಿಸದ ಬಿಜೆಪಿ ಸರ್ಕಾರ ಅವರ ವಿರುದ್ಧ ವಿನಾಕಾರಣ ಕೇಂದ್ರ ತನಿಖಾ ಸಂಸ್ಥೆಗಳನ್ನು ಬಿಟ್ಟು ಕಿರುಕುಳ ನೀಡುತ್ತಿದೆ. ಹಿಂದೆ ಬಿಜೆಪಿ ಸರ್ಕಾರವೇ ಕೈಬಿಟ್ಟಿದ್ದ ಪ್ರಕರಣ ಮುಂದಿಟ್ಟುಕೊಂಡು ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿದೆ. ಇದೆಲ್ಲವೂ ರಾಜಕೀಯ ಷಡ್ಯಂತ್ರವಷ್ಟೇ ಎಂದು ಕಿಡಿಕಾರಿದರು.
ಇಡಿ ಸಮನ್ಸ್ ಬೆನ್ನಲ್ಲೇ ವಿದೇಶದಿಂದ ದೆಹಲಿಗೆ ಆಗಮಿಸಿದ ರಾಹುಲ್ ಗಾಂಧಿ: ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ನೀಡಿದ ಸಮನ್ಸ್ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದೇಶದಿಂದ ನವದೆಹಲಿಗೆ ಆಗಮಿಸಿದ್ದಾರೆ. ಜೂನ್ 13ರೊಳಗೆ ವಿಚಾರಣೆಗೆ ಹಾಜರಾಗಲು ಇಡಿ ಸಮನ್ಸ್ ನೀಡಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜೂನ್ 2ಕ್ಕೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿತ್ತು. ಈ ವೇಳೆ ತಾನು ವಿದೇಶದಲ್ಲಿರುವುದರಿಂದ ಕಾಲಾವಕಾಶ ನೀಡಬೇಕೆಂದು ರಾಹುಲ್ ಗಾಂಧಿ ಮನವಿ ಮಾಡಿದ್ದರು.
ಏನಿದು ನ್ಯಾಷನಲ್ ಹೆರಾಲ್ಡ್ ಕೇಸ್, ರಾಜಕೀಯ ಸಂಚಲನಕ್ಕೆ ಕಾರಣವಾಗಿರುವ ಪ್ರಕರಣದ ಇತಿಹಾಸ!
ರಾಹುಲ್ ಮನವಿ ಪುರಸ್ಕರಿಸಿದ ಜಾರಿ ನಿರ್ದೇಶನಾಲಯ ಜೂನ್ 13ರೊಳಗೆ ವಿಚಾರಣೆ ಹಾಜರಾಗಲು ಸೂಚಿಸಿತ್ತು. ವಿದೇಶಿ ಪ್ರವಾಸದಲ್ಲಿದ್ದ ರಾಹುಲ್ ಗಾಂಧಿ ಇದೀಗ ನವದೆಹಲಿಗೆ ವಾಪಸ್ ಬಂದಿದ್ದಾರೆ. ಕಾಂಗ್ರೆಸ್ ರಾಹುಲ್ ದೆಹಲಿಗೆ ಆಗಮಿಸಿರುವುದನ್ನು ಖಚಿತಪಡಿಸಿದೆ. ಇದೇ ಪ್ರಕರಣ ಸಂಬಂಧ ಸೋನಿಯಾ ಗಾಂಧಿಗೂ ಇಡಿ ನೋಟಿಸ್ ನೀಡಿದೆ. ಆದರೆ ಜೂನ್್ 2 ರಂದು ಸೋನಿಯಾ ಗಾಂಧಿಗೆ ಕೊರೋನಾ ದೃಢಪಟ್ಟಿದೆ. ಹೀಗಾಗಿ ಸೋನಿಯಾ ಚೇತರಿಸಿಕೊಂಡ ಬಳಿಕ ಇಡಿ ಹೊಸ ವಿಚಾರಣೆಗೆ ಹೊಸ ದಿನಾಂಕ ಘೋಷಿಸಲಿದೆ.
