ದಸರಾ ಉದ್ಘಾಟನೆಗೆ ಆಮಂತ್ರಣ: ಸಿಎಂ, ಸೋಮಶೇಖರ್‌ಗೆ ಎಸ್.ಎಂ.ಕೃಷ್ಣ ಧನ್ಯವಾದ
* ವಿಶ್ವವಿಖ್ಯಾತ ದಸರಾ ಉದ್ಘಾಟಿಸುತ್ತಿರುವುದು ನನ್ನ ಬಾಳಿನ ಸುದೈವ
* ತಾಯಿ ಚಾಮುಂಡೇಶ್ವರಿ ಮನುಕುಲಕ್ಕೆ ಬಂದಿರುವ ಕೊರೋನಾದಿಂದ ಮುಕ್ತಗೊಳಿಸಲಿ
* ರಾಜ್ಯ ಮತ್ತೆ ಅಭಿವೃದ್ಧಿ ಎಡೆಗೆ ಸಾಗಲಿ
ಬೆಂಗಳೂರು(ಸೆ.30): ವಿಶ್ವವಿಖ್ಯಾತ ಮೈಸೂರು ದಸರಾ(Mysuru Dasara) ಉದ್ಘಾಟನೆಗೆ ಆಮಂತ್ರಣ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮೈಸೂರು-ಚಾಮರಾಜನಗರ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರಿಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ(SM Krishna) ಅವರು ಧನ್ಯವಾದ ತಿಳಿಸಿದ್ದಾರೆ.
ಈ ಬಾರಿಯ ವಿಶ್ವವಿಖ್ಯಾತ ದಸರಾ ಉದ್ಘಾಟಿಸುತ್ತಿರುವುದು ನನ್ನ ಬಾಳಿನ ಸುದೈವ. ಇಂತಹ ಅವಕಾಶ ನೀಡಿದ ಬಸವರಾಜ ಬೊಮ್ಮಾಯಿ(Basavaraj Bommai), ಎಸ್.ಟಿ. ಸೋಮಶೇಖರ್ ಹಾಗೂ ರಾಜ್ಯದ ಜನತೆಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.
ಈ ಬಾರಿಯ ಮೈಸೂರು ದಸರಾ ಉದ್ಘಾಟಿಸಲಿದ್ದಾರೆ ರಾಜಕೀಯ ಮುತ್ಸದ್ದಿ ಎಸ್. ಎಂ. ಕೃಷ್ಣ
ಎಸ್.ಟಿ. ಸೋಮಶೇಖರ್‌ಗೆ ಧನ್ಯವಾದ:
ಎಸ್.ಎಂ. ಕೃಷ್ಣ ಅವರು ಸಹಕಾರ ಸಚಿವ ಹಾಗೂ ಮೈಸೂರು-ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್(ST Somashekhar) ಅವರಿಗೂ ಧನ್ಯವಾದ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಸಂದರ್ಭದಲ್ಲಿ ಇತಿಹಾಸ ಪ್ರಸಿದ್ಧ ನಾಡ ದಸರಾಗೆ ನನ್ನನ್ನು ಆಹ್ವಾನಿಸಿರುವ ತಮ್ಮ ಹೃದಯ ವೈಶಾಲ್ಯತೆಗೆ ನಾನು ಆಭಾರಿಯಾಗಿದ್ದೇನೆ ಎಂದು ಎಸ್.ಎಂ. ಕೃಷ್ಣ ಅವರು ಪತ್ರದ ಮೂಲಕ ಸೋಮಶೇಖರ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಮೈಸೂರು(Mysuru) ಜಿಲ್ಲಾ ಉಸ್ತುವಾರಿ ಸಚಿವರಾಗಿ ಆ ಭಾಗದ ಜನರ ಜೊತೆ ಬೆರೆತು ಕಳೆದ ಒಂದೂವರೆ ವರ್ಷದಲ್ಲಿ ಹಲವಾರು ಜನಪರ ಕೆಲಸಗಳ ಮೂಲಕ ಸೋಮಶೇಖರ್ ಮನೆ ಮಾತಾಗಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯ ಅನುಕೂಲ ಪಡೆದ ರೈತ ವರ್ಗವೇ ಅಧಿಕವಾಗಿರುವ ಮಂಡ್ಯ ಜಿಲ್ಲೆಯಿಂದ ಬಂದ ನಾನು ಈ ಬಾರಿ ದಸರಾ ಉದ್ಘಾಟಿಸುತ್ತಿರುವುದು ನನ್ನ ಬಾಳಿನ ಸುದೈವ. ತಾಯಿ ಚಾಮುಂಡೇಶ್ವರಿಯು ಮನುಕುಲಕ್ಕೆ ಬಂದಿರುವ ಕೊರೋನಾ ಮಹಾಮಾರಿಯಿಂದ ಮುಕ್ತಗೊಳಿಸಲಿ. ನಿಮ್ಮ ನೇತೃತ್ವದಲ್ಲಿ ರಾಜ್ಯ ಮತ್ತೆ ಅಭಿವೃದ್ಧಿ ಎಡೆಗೆ ಸಾಗಲಿ. ದಸರಾ ಉದ್ಘಾಟನೆಗೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದ ಎಂದು ಪತ್ರದ ಮೂಲಕ ತಿಳಿಸಿದ್ದಾರೆ.