ಒಟ್ಟು ಮೃತರ ಸಂಖ್ಯೆ 15ಕ್ಕೆ ಏರಿಕೆ, ಉ.ಕ., ಉಡುಪಿ ಜಿಲ್ಲೆಯಲ್ಲಿ ತಲಾ ಇಬ್ಬರ ಸಾವು, ಕರಾವಳಿಗೆ ಇಂದೂ ಆರೆಂಜ್‌ ಅಲರ್ಟ್‌, ಹೊಸನಗರ ತಾಲೂಕಿನ 2 ಶಾಲೆಗಳಿಗೆ ಇಂದು ರಜೆ

ಬೆಂಗಳೂರು(ಜು.08):  ಕರಾವಳಿ, ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಮಳೆ ಸಂಬಂಧಿ ಅವಘಡಗಳಗೆ ಶುಕ್ರವಾರ ಮತ್ತೆ 6 ಮಂದಿ ಮೃತಪಟ್ಟಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಮುಂಗಾರು ಮಳೆಗೆ ಜುಲೈ ತಿಂಗಳಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಭಾರಿ ಮಳೆ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಬಿದನೂರು ಹಾಗೂ ನಿಟ್ಟೂರು ಗ್ರಾಮದ ಶಾಲೆಗಳಿಗೆ ಶನಿವಾರ ರಜೆ ಘೋಷಣೆ ಮಾಡಲಾಗಿದೆ. ಅಲ್ಲದೆ, ಹವಾಮಾನ ಇಲಾಖೆ ಕರಾವಳಿ ಭಾಗಕ್ಕೆ ಶನಿವಾರವೂ ಆರೆಂಜ್‌ ಅಲರ್ಟ್‌ ಘೋಷಿಸಿದ್ದು, ಭಾರಿ ಮಳೆಯ ಮುನ್ಸೂಚನೆ ನೀಡಿದೆ.

ಭಾರಿ ಮಳೆಗೆ 6 ಮಂದಿ ಬಲಿ: ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಪೋಸ್ಟ್‌ ಬೆಟ್ಕುಳಿಯಲ್ಲಿ ಅಘನಾಶಿನಿ ನದಿಯ ಅಂಚಿನಲ್ಲಿರುವ ಗದ್ದೆಗೆ ಬೇಲಿ ನಿರ್ಮಿಸಲು ಹೋದ ಇಬ್ಬರು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ. ಬೆಟ್ಕುಳಿ ಗ್ರಾಮದ ಸತೀಶ ಪಾಂಡುರಂಗ ನಾಯ್ಕ (38) ಹಾಗೂ ಉಲ್ಲಾಸ ಗಾವಡಿ (50) ಮೃತರು. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ನಂದಾವರದಲ್ಲಿ ಮನೆ ಮೇಲೆ ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿ ಝರೀನಾ (49) ಎಂಬುವರು ಅಸುನೀಗಿದ್ದಾರೆ. ಅವರ ಪುತ್ರಿ ಶಫಾ (20) ಎಂಬುವರನ್ನು ರಕ್ಷಿಸಲಾಗಿದೆ.

ಚಿಕ್ಕಮಗಳೂರಲ್ಲಿ ತಗ್ಗಿದ ವರುಣನ ಅಬ್ಬರ, ಇಂದೂ ಕೂಡ ಶಾಲಾ, ಕಾಲೇಜುಗಳಿಗೆ ರಜೆ

ಇದೇ ವೇಳೆ, ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ನಿಟ್ಟೆಗ್ರಾಮದಲ್ಲಿ ಶೆಟ್ಟಿಬೆಟ್ಟು ನಿವಾಸಿ ರಾಜು ಪಾಣಾರ (47) ಎಂಬುವರು ಶಾಂಭವಿ ನದಿಯಲ್ಲಿ ಕೊಚ್ಚಿ ಹೋಗಿದ್ದರೆ, ತಾಲೂಕಿನ ಬೆಳ್ಮಣ್‌-ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ಭಾರಿ ಗಾತ್ರದ ಅಲದ ಮರವೊಂದು ಉರುಳಿ ಬಿದ್ದು, ಬೈಕ್‌ ಸವಾರ ಪಿಲಾರು ಗ್ರಾಮದ ನಿವಾಸಿ ಮಂಜುನಾಥ ಪ್ರವೀಣ್‌ ಆಚಾರ್ಯ (31) ಎಂಬುವರು ಮೃತಪಟ್ಟಿದ್ದಾರೆ. ಹಾಸನ ಜಿಲ್ಲೆ ಬೇಲೂರು ತಾಲೂಕಿನ ಬಳ್ಳೂರು ಗ್ರಾಮದಲ್ಲಿ ಗಾಳಿ-ಮಳೆಗೆ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ಗಂಗಮ್ಮ (67) ಎಂಬುವರು ಅಸುನೀಗಿದ್ದು, ಘಟನೆ ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಮನೆಗಳಿಗೆ ಹಾನಿ, ಸಂಚಾರ ವ್ಯತ್ಯಯ: ಇದೇ ವೇಳೆ, ಶಿವಮೊಗ್ಗ, ಕೊಡಗು, ಉಡುಪಿ ಜಿಲ್ಲೆಗಳಲ್ಲಿ ಗಾಳಿ-ಮಳೆಗೆ ಮರಗಳು ಉರುಳಿ ಬಿದ್ದು 30ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ. ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲೂಕಿನ ಅವುರ್ಲಿಯಲ್ಲಿ ಸೇತುವೆ ಕುಸಿದ ಪರಿಣಾಮ ಗುಂದ-ಉಳವಿ ಮಾರ್ಗದಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಶರಾವತಿ ನದಿ ಹಿನ್ನೀರಿನ ಪ್ರಮಾಣ ಏರಿಕೆಯಾದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸಿಗಂದೂರು ಲಾಂಚ್‌ನಲ್ಲಿ ವಾಹನ ಸಾಗಾಣಿಕೆಗೆ ಇದ್ದ ನಿರ್ಬಂಧ ತೆರವುಗೊಳಿಸಲಾಗಿದೆ. ತುಂಗಾ ಜಲಾಶಯದ 12 ಕ್ರಸ್ಟ್‌ಗೇಟ್‌ ತೆರೆದು ನೀರನ್ನು ಹೊರಕ್ಕೆ ಬಿಡಲಾಗುತ್ತಿದ್ದು, ಶಿವಮೊಗ್ಗದ ಕೋರ್ಪಲಯ್ಯ ಛತ್ರ ಮಂಟಪದ ಬಹುಭಾಗ ಮುಳುಗಿದೆ.