Asianet Suvarna News Asianet Suvarna News

ಪಿಎಸ್ಐ ನೇಮಕಾತಿ ಹಗರಣ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟದ ನಿರ್ಧಾರ

ಪಿಎಸ್ಐ ನೇಮಕ ಹಗರಣದ ಸಂಬಂಧ ನ್ಯಾ.ಬಿ.ವೀರಪ್ಪ ಆಯೋಗವು ಸಲ್ಲಿಸಿರುವ ವರದಿ ಆಧಾರದ ಮೇಲೆ ಪ್ರಕರಣದ ಹೆಚ್ಚಿನ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಲು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. 

SIT to Probe PSI Recruitment Scam CM Siddaramaiah Cabinet Decision gvd
Author
First Published Mar 15, 2024, 6:43 AM IST

ಬೆಂಗಳೂರು (ಮಾ.15): ಪಿಎಸ್ಐ ನೇಮಕ ಹಗರಣದ ಸಂಬಂಧ ನ್ಯಾ.ಬಿ.ವೀರಪ್ಪ ಆಯೋಗವು ಸಲ್ಲಿಸಿರುವ ವರದಿ ಆಧಾರದ ಮೇಲೆ ಪ್ರಕರಣದ ಹೆಚ್ಚಿನ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಲು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಸಚಿವ ಸಂಪುಟ ಸಭೆ ಬಳಿಕ ಮಾಹಿತಿ ನೀಡಿದ ಸಚಿವ ಕೃಷ್ಣ ಬೈರೇಗೌಡ, ನ್ಯಾ.ವೀರಪ್ಪ ಆಯೋಗದ ವರದಿಯಲ್ಲಿ ನೇಮಕಾತಿ ಹಗರಣದಲ್ಲಿ ಸರ್ಕಾರದವರಿಂದ ಹಿಡಿದು ಮಧ್ಯವರ್ತಿಗಳವರೆಗೆ 113 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. 

ಇನ್ನೂ ಹೆಚ್ಚು ಮಂದಿಯ ವಿಚಾರಣೆ ನಡೆಸುವ ಸಲುವಾಗಿ ಸಮನ್ಸ್‌ ನೀಡಲಾಗಿತ್ತು. ಆದರೆ ಬಹುತೇಕರು ಬಂದು ಆಯೋಗದ ಮುಂದೆ ಉತ್ತರ ನೀಡಿಲ್ಲ. ಯಾರನ್ನಾದರೂ ಕರೆಸಿ ವಿಚಾರಣೆ ನಡೆಸಲು ಆಯೋಗಕ್ಕೆ ಸೂಕ್ತ ಅಧಿಕಾರ ಇಲ್ಲ. ಹೀಗಾಗಿ ಅಂತಹವರನ್ನು ವಿಚಾರಣೆ ನಡೆಸಲು ಎಸ್‌ಐಟಿ ರಚನೆ ಅಗತ್ಯವಿದೆ ಎಂದು ವರದಿಯಲ್ಲಿ ತಿಳಿಸಿದ್ದರು. ಹೀಗಾಗಿ ನಿವೃತ್ತ ನ್ಯಾಯಮೂರ್ತಿ ವೀರಪ್ಪ ಅವರ ಶಿಫಾರಸಿನ ಮೇರೆಗೆ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಹೇಳಿದರು.

ಏನಿದು ಪ್ರಕರಣ?: ಹಿಂದಿನ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ, 545 ಪಿಎಸ್‌ಐಗಳ ನೇಮಕಾತಿಗಾಗಿ ಪಿಎಸ್‌ಐ ಪರೀಕ್ಷೆಯನ್ನು ಅಕ್ಟೋಬರ್ 3, 2021ರಂದು ನಡೆಸಲಾಗಿತ್ತು. 92 ಕೇಂದ್ರಗಳಲ್ಲಿ 54,289 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಫಲಿತಾಂಶ ಪ್ರಕಟವಾದ ನಂತರ, ಪರೀಕ್ಷೆಯಲ್ಲಿ ಅಕ್ರಮಗಳು ನಡೆದ ಆರೋಪ ಬಂದಿತು. ಹೀಗಾಗಿ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿತು. ಸಿಐಡಿ 52 ಅಭ್ಯರ್ಥಿಗಳು ಸೇರಿದಂತೆ 113 ಜನರನ್ನು ಬಂಧಿಸಿದೆ. ಪೊಲೀಸ್ ನೇಮಕಾತಿ ಸೆಲ್‌ನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದ ಐಪಿಎಸ್ ಅಧಿಕಾರಿ ಅಮೃತ್ ಪಾಲ್ ಅವರನ್ನೂ ಸಿಐಡಿ ಬಂಧಿಸಿತ್ತು.

ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಹಣದ ಕೊರತೆ ಇಲ್ಲ: ಸಿಎಂ ಸಿದ್ದರಾಮಯ್ಯ

ಈಗಾಗಲೇ ಸಿಐಡಿ ತನಿಖೆ ನಡೆಸುತ್ತಿರುವಾಗ ಎಸ್‌ಐಟಿ ಅಗತ್ಯವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಿಐಡಿ ಅವರು 17 ಕೇಸು ದಾಖಲಿಸಿಕೊಂಡು 113 ಮಂದಿಯನ್ನು ಬಂಧಿಸಿ ತನಿಖೆ ನಡೆಸಿದ್ದಾರೆ. ಈ ಪೈಕಿ ಕೆಲವರು ಜಾಮೀನು ಪಡೆದಿದ್ದಾರೆ. ಸಿಐಡಿ ತನಿಖೆಯನ್ನು ನಾವು ಹಿಂಪಡೆಯುವುದಿಲ್ಲ. ಆಯೋಗದ ಶಿಫಾರಸಿನ ಮೇರೆಗೆ ಎಲ್ಲಾ ಕೋನಗಳಲ್ಲೂ ತನಿಖೆ ನಡೆಸಲು ಅನುವಾಗುವಂತೆ ಹೆಚ್ಚು ಶಕ್ತಿ ಇರುವ ಎಸ್‌ಐಟಿ ರಚನೆ ಸೂಕ್ತ ತೀರ್ಮಾನ ಎಂದು ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡರು. ನ್ಯಾ.ವೀರಪ್ಪ ಅವರ ಆಯೋಗದ ವರದಿಯಲ್ಲಿ ಹಿಂದಿನ ಸರ್ಕಾರದ ಸಚಿವರ ಪ್ರಸ್ತಾಪ ಇದೆಯೇ ಎಂಬ ಪ್ರಶ್ನೆಗೆ, ನಾನು ವರದಿಯನ್ನು ಗಮನಿಸಿದ್ದೇನೆ. ಆದರೆ ನನಗೆ ಅಂತಹ ಯಾವುದೇ ಹೆಸರು ಕಂಡು ಬರಲಿಲ್ಲ ಎಂದರು.

Follow Us:
Download App:
  • android
  • ios