ವಿದೇಶದಲ್ಲಿದ್ದಾಗ ಪ್ರಜ್ವಲ್ ರೇವಣ್ಣಗೆ ಹಣ ಕಳಿಸಿದ್ದ ಗೆಳತಿಗೆ ಸಂಕಷ್ಟ: ಎಸ್‌ಐಟಿ ನೋಟಿಸ್
ಲೈಂಗಿಕ ದೌರ್ಜನ್ಯ ಆರೋಪ ಹೊತ್ತು ತಿಂಗಳ ಕಾಲ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಹಣಕಾಸು ನೆರವು ನೀಡಿದ್ದ ತಪ್ಪಿಗೆ ಅವರ ಗೆಳತಿಯೊಬ್ಬರಿಗೆ ವಿಶೇಷ ತನಿಖಾ ದಳ (ಎಸ್‌ಐಟಿ)ದ ತನಿಖೆಯ ಸಂಕಷ್ಟ ಎದುರಾಗಿದೆ.
ಬೆಂಗಳೂರು (ಜೂ.09): ಲೈಂಗಿಕ ದೌರ್ಜನ್ಯ ಆರೋಪ ಹೊತ್ತು ತಿಂಗಳ ಕಾಲ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಹಣಕಾಸು ನೆರವು ನೀಡಿದ್ದ ತಪ್ಪಿಗೆ ಅವರ ಗೆಳತಿಯೊಬ್ಬರಿಗೆ ವಿಶೇಷ ತನಿಖಾ ದಳ (ಎಸ್‌ಐಟಿ)ದ ತನಿಖೆಯ ಸಂಕಷ್ಟ ಎದುರಾಗಿದೆ. ಪ್ರಜ್ವಲ್ ಅವರ ಗೂಗಲ್ ಪೇ ಮಾಹಿತಿಯನ್ನು ಪರಿಶೀಲಿಸಿದಾಗ ವಿದೇಶದಲ್ಲಿದ್ದ ಅವಧಿಯಲ್ಲಿ ಅವರಿಗೆ ಹಣಕಾಸು ಸಹಕಾರ ಕೊಟ್ಟವರ ವಿವರ ಬಯಲಾಗಿದೆ. ತಮ್ಮ ಸ್ನೇಹಿತರ ಮೂಲಕ ಪ್ರಜ್ವಲ್ ಅವರಿಗೆ ನಿಯಮಿತವಾಗಿ ಗೆಳತಿ ಹಣಕಾಸಿನ ನೆರವು ನೀಡಿದ್ದರು. ಈ ಮಾಹಿತಿ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಆಕೆಗೆ ನೋಟಿಸ್ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.
ವಿದೇಶದಲ್ಲಿ ತಮಗೆ ನೆರವಾದರ ಬಗ್ಗೆ ಪ್ರಜ್ವಲ್ ಬಾಯ್ಬಿಡುತ್ತಿಲ್ಲ. ಹಣ ವರ್ಗಾವಣೆ ಕುರಿತು ಕೇಳಿದರೂ ಸಹ ಹಾರಿಕೆ ಉತ್ತರ ನೀಡಿ ಜಾರಿಕೊಳ್ಳುತ್ತಿದ್ದಾರೆ. ಆದರೆ ಪ್ರಜ್ವಲ್‌ಗೆ ಗೂಗಲ್ ಪೇ ಮೂಲಕ ಹಣ ವರ್ಗಾವಣೆಯಾಗಿರುವ ಬಗ್ಗೆ ಬ್ಯಾಂಕ್‌ಗಳಿಂದ ದಾಖಲೆ ಸಮೇತ ಮಾಹಿತಿ ಸಂಗ್ರಹಿಸಲಾಗಿದೆ. ಈ ಮಾಹಿತಿ ಆಧರಿಸಿಯೇ ಅವರ ತನಿಖೆ ನಡೆದಿದೆ. ಹಲವು ದಿನಗಳಿಂದ ಬೆಂಗಳೂರಿನ ಯುವತಿ ಜತೆ ಪ್ರಜ್ವಲ್‌ಗೆ ಸ್ನೇಹವಿದೆ. ಜರ್ಮನ್ ದೇಶದಲ್ಲಿ ಆಕೆಯ ಸ್ನೇಹಿತರು ಹಾಗೂ ಸೋದರ ಸಂಬಂಧಿಗಳು ನೆಲೆಸಿದ್ದಾರೆ. ಹೀಗಾಗಿ ಪ್ರಜ್ವಲ್ ವಿದೇಶದಲ್ಲಿದ್ದಾಗ ತನ್ನ ಸ್ನೇಹಿತರ ಮೂಲಕ ಆಕೆ ಸಹಾಯ ಮಾಡಿದ್ದಾಳೆ ಎಂಬ ಮಾಹಿತಿ ಸಿಕ್ಕಿದೆ. ಆ ಗೆಳತಿಯ ವಿಚಾರಣೆ ಬಳಿಕ ಹಣ ವರ್ಗಾವಣೆ ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಮೂಲಗಳು ಹೇಳಿವೆ.
ವಾಲ್ಮೀಕಿ ನಿಗಮ ಕೇಸ್ ತನಿಖೆಗೆ ಸಿಬಿಐನಿಂದ ಪತ್ರ ಬಂದಿಲ್ಲ: ಸಚಿವ ಪರಮೇಶ್ವರ್
ಪ್ರಜ್ವಲ್ ಪುರುಷತ್ವ ಪರೀಕ್ಷೆಗೆ ಮಾದರಿ ಸಂಗ್ರಹ: ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು‘ಪುರುಷತ್ವ ಪರೀಕ್ಷೆ’ಗೆ ಒಳಪಡಿಸಲು ವಿಶೇಷ ತನಿಖಾ ದಳದ (ಎಸ್‌ಐಟಿ) ಅಧಿಕಾರಿಗಳು ಮುಂದಾಗಿದ್ದು, ಈ ಬಗ್ಗೆ ಪ್ರಾಥಮಿಕ ಪರೀಕ್ಷೆ ನಡೆಸಿದ್ದಾರೆ. ನಗರದ ಬೌರಿಂಗ್ ಆಸ್ಪತ್ರೆ ಆವರಣದ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ಪ್ರಜ್ವಲ್ ರವರ ವೈದ್ಯಕೀಯ ತಪಾಸಣೆ ನಡೆದಿದೆ. ಈ ವೇಳೆ ಪುರುಷತ್ವ ಪರೀಕ್ಷೆಗೆ ಅವರಿಂದ ವೀರ್ಯ, ಮರ್ಮಾಂಗದ ಕೂದಲು ಹಾಗೂ ರಕ್ತ ಸಂಗ್ರಹಿಸಲಾಗಿದೆ.
ಮುಂದಿನ ಹಂತವಾಗಿ ಕೋರ್ಟ್ ಅನುಮತಿ ಪಡೆದು ಪ್ರಜ್ವಲ್ ಅವರನ್ನು ಪುರುಷತ್ವ ಪರೀಕ್ಷೆಗೆ ಒಳಪಡಿಸಲಾಗುವುದು. ಇದಕ್ಕಾಗಿ ತಜ್ಞರ ತಂಡ ರಚನೆಯಾಗಲಿದೆ. ಈ ತಜ್ಞರ ತಂಡ ತನ್ನ ವರದಿಯನ್ನು ಎಸ್‌ಐಟಿಗೆ ಸಲ್ಲಿಸಲಿದೆ ಎನ್ನಲಾಗಿದೆ. ಸಿಐಡಿ ಕೇಂದ್ರ ಕಚೇರಿಯಿಂದ ಆಂಬ್ಯುಲೆನ್ಸ್‌ನಲ್ಲಿ ಬೌರಿಂಗ್ ಆಸ್ಪತ್ರೆಗೆ ಬೆಳಗ್ಗೆ 11.30ರ ಸುಮಾರಿಗೆ ಪ್ರಜ್ವಲ್ ಅವರನ್ನು ಎಸ್‌ಐಟಿ ಅಧಿಕಾರಿಗಳು ಕರೆದುಕೊಂಡು ಹೋಗಿದ್ದಾರೆ. ಆನಂತರ ಮೂರು ತಾಸಿಗೂ ಅಧಿಕ ಹೊತ್ತು ವೈದ್ಯಕೀಯ ತಪಾಸಣೆ ಬಳಿಕ ಮತ್ತೆ ಅವರನ್ನು ಸಿಐಡಿ ಕಚೇರಿಗೆ ಕರೆತಂದು ಅಧಿಕಾರಿಗಳು ವಿಚಾರಣೆ ಮುಂದುವರೆಸಿದ್ದಾರೆ.
ನಿಗಮಗಳಿಂದ ಪ್ರಸ್ತಾವನೆ ಬಂದರೆ ಬಸ್ ಟಿಕೆಟ್ ದರ ಏರಿಕೆ ನಿರ್ಧಾರ: ಸಚಿವ ರಾಮಲಿಂಗಾರೆಡ್ಡಿ
ಅತ್ಯಾಚಾರ ಪ್ರಕರಣದಲ್ಲಿ ಲೈಂಗಿಕ ಕ್ರಿಯೆ ನಡೆಸಲು ದೈಹಿಕವಾಗಿ ಆರೋಪಿ ಸಾಮರ್ಥ್ಯ ಹೊಂದಿದ್ದಾನೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಪುರುಷತ್ವ ಪರೀಕ್ಷೆ ಅಗತ್ಯವಾಗಿದೆ. ಈ ಕಾರಣಕ್ಕೆ ಪ್ರಜ್ವಲ್ ಅವರನ್ನು ಎಸ್‌ಐಟಿ ಅಧಿಕಾರಿಗಳು ಪುರುಷತ್ವ ಪರೀಕ್ಷೆಗೊಳಪಡಿಸಲು ನಿರ್ಧರಿಸಿದ್ಧಾರೆ. ಅತ್ಯಾಚಾರ ಪ್ರಕರಣದಲ್ಲಿ ಇದು ಸಾಮಾನ್ಯ ಪರೀಕ್ಷೆಯಾಗಿದೆ ಎಂದು ಮೂಲಗಳು ಹೇಳಿವೆ. ಅಲ್ಲದೆ ಹಾಸನ ನಗರದ ಸಂಸದರ ವಸತಿ ಗೃಹದಲ್ಲಿ ದಿಂಬು ಹಾಗೂ ಹಾಸಿಗೆಯನ್ನು ಎಸ್‌ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದರು. ಆ ಹಾಸಿಗೆಯ ಹೊದಿಕೆಯಲ್ಲಿ ಕೂದಲು ಹಾಗೂ ವೀರ್ಯದ ಗುರುತುಗಳು ಪತ್ತೆಯಾಗಿದ್ದವು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಪ್ರಜ್ವಲ್ ಅವರಿಗೆ ಪುರುಷತ್ವ ಪರೀಕ್ಷೆ ನಡೆದಿದ್ದು, ಈ ವರದಿ ತನಿಖೆಗೆ ಮಹತ್ವದ ವೈದ್ಯಕೀಯ ಪುರಾವೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.