ಕಲಬುರಗಿಯಿಂದ ಸಿದ್ದರಾಮಯ್ಯ ‘ಹಿಂದ’ ಹೋರಾಟ| ನೂತನ ಗ್ರಾಪಂ ಸದಸ್ಯರಿಗೆ ಸನ್ಮಾನ ಮಾಡುವ ನೆಪ| ಮಾರ್ಚ್ ಅಂತ್ಯಕ್ಕೆ ಬೃಹತ್ ಸಮಾವೇಶ ಆಯೋಜನೆ| ಸಿದ್ದರಾಮಯ್ಯ ಅವರು ಹಿಂದ ಹೋರಾಟ ಸಂಘಟಿಸುವ ಬಗ್ಗೆ ಕನ್ನಡಪ್ರಭ ಫೆ.9ರಂದು ವಿಶೇಷ ವರದಿ ಪ್ರಕಟಿಸಿತ್ತು.
ಬೆಂಗಳೂರು(ಫೆ.11): ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ‘ಹಿಂದ’ ಸಂಘಟನೆಗೆ ಅಧಿಕೃತ ಚಾಲನೆ ನೀಡಿದ್ದು, ಬುಧವಾರ ಪ್ರಮುಖ ಹಿಂದುಳಿದ ಹಾಗೂ ದಲಿತ ನಾಯಕರೊಂದಿಗೆ ಸಭೆ ನಡೆಸಿ ಹೋರಾಟದ ರೂಪರೇಷೆಗಳ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ.
ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಸದಸ್ಯರಿಗೆ ಸನ್ಮಾನ ಮಾಡುವ ಸಲುವಾಗಿ ಮಾಚ್‌ರ್ ಕೊನೆಯ ವಾರದಲ್ಲಿ ಬೃಹತ್ ಸಮಾವೇಶ ನಡೆಸುವ ಮೂಲಕ ಅವರು ‘ಹಿಂದ’ ಹೋರಾಟಕ್ಕೆ ಚಾಲನೆ ನೀಡಲಿದ್ದಾರೆ.
ಸಮಾವೇಶ ಸಿದ್ಧತೆ ನಡೆಸಲು ಸಮಿತಿಯನ್ನೂ ರಚಿಸಲಾಗಿದ್ದು, ಸಮಿತಿಯು ಹಿಂದುಳಿದ, ದಲಿತ ಹಾಗೂ ಅಲ್ಪಸಂಖ್ಯಾತ ಗ್ರಾ.ಪಂ. ಸದಸ್ಯರ ಮಾಹಿತಿ ಸಂಗ್ರಹಕ್ಕೆ ಮುಂದಾಗಿದೆ. ಕಲಬುರಗಿಯಲ್ಲಿ ಮೊದಲ ಬೃಹತ್ ಸಮಾವೇಶ ಹಮ್ಮಿಕೊಳ್ಳಲು ನಿರ್ಧರಿಸಿದ್ದು, ಈ ಕುರಿತು ಬುಧವಾರ ತಮ್ಮ ನಿವಾಸದಲ್ಲಿ ಬೀದರ್, ಕಲಬುರಗಿ ಮುಖಂಡರೊಂದಿಗೆ ಮಹತ್ವದ ಚರ್ಚೆ ನಡೆಸಿದ್ದಾರೆ.
ಅಲ್ಲದೆ, ಈ ಹಿಂದೆ ಅಹಿಂದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ತಮ್ಮ ಆಪ್ತ, ಮಾಜಿ ಸಚಿವ ಹಾಗೂ ದಲಿತ ನಾಯಕ ಡಾ.ಎಚ್.ಸಿ. ಮಹದೇವಪ್ಪ ನಿವಾಸಕ್ಕೆ ಹಠಾತ್ ಭೇಟಿ ನೀಡಿ ಸುದೀರ್ಘ ಚರ್ಚೆ ನಡೆಸಿದ್ದು, ‘ಹಿಂದ’ ಸಂಘಟನೆ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಿಂದ ಅಂತರ ಕಾಯ್ದುಕೊಂಡಿದ್ದ ಎಚ್.ಸಿ.ಮಹದೇವಪ್ಪ ಅವರಿಗೆ ಕಾಲಿನಲ್ಲಿ ಸಮಸ್ಯೆ ಉಂಟಾಗಿರುವುದರಿಂದ ಆರೋಗ್ಯ ವಿಚಾರಿಸಲು ಸಿದ್ದರಾಮಯ್ಯ ಹೋಗಿದ್ದರು ಎನ್ನಲಾಗುತ್ತಿದೆ. ಆದರೂ, ಮಹದೇವಪ್ಪ ಅವರ ಹಠಾತ್ ಭೇಟಿ ಮೂಲಕ ಹಿಂದೆ ಅಹಿಂದ ಹೋರಾಟದಲ್ಲಿ ತಮ್ಮ ಜೊತೆಗಿದ್ದ ಪ್ರಮುಖ ನಾಯಕರನ್ನು ‘ಹಿಂದ’ ಹೋರಾಟಕ್ಕಾಗಿ ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಭಾರೀ ಸಂಚಲನ:
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಕುರುಬರ ಎಸ್.ಟಿ. ಹೋರಾಟ ಸಮಿತಿಯು ಕುರುಬರಿಗೆ ಎಸ್.ಟಿ. ಮೀಸಲಾತಿಗೆ ಒತ್ತಾಯಿಸಿ ಭಾನುವಾರ ಬೃಹತ್ ಸಮಾವೇಶ ಹಮ್ಮಿಕೊಂಡಿತ್ತು. ಇದರ ಬೆನ್ನಲ್ಲೇ ಸೋಮವಾರ ತಮ್ಮ ಆಪ್ತ ನಾಯಕರೊಂದಿಗೆ ‘ಹಿಂದ’ ಹೋರಾಟ ಆರಂಭಿಸುವ ಬಗ್ಗೆ ಸಿದ್ದರಾಮಯ್ಯ ಚರ್ಚಿಸಿದ್ದರು. ಈ ಕುರಿತು ಮಂಗಳವಾರ ‘ಕನ್ನಡಪ್ರಭ’ ವಿಶೇಷ ವರದಿ ಪ್ರಕಟಿಸಿತ್ತು.
ವರದಿ ಪ್ರಕಟವಾದ ಬೆನ್ನಲ್ಲೇ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಿದ್ದರಾಮಯ್ಯ, ‘ಹಿಂದುಳಿದವರು, ದಲಿತರು ಹಾಗೂ ಅಲ್ಪಸಂಖ್ಯಾತರಿಗೆ ಅನ್ಯಾಯವಾದರೆ ರಸ್ತೆಗಿಳಿದು ಹೋರಾಟ ನಡೆಸುತ್ತೇನೆ’ ಎಂದು ಬಹಿರಂಗವಾಗಿ ಘೋಷಿಸಿದ್ದರು. ಇದೀಗ ಹಿಂದ ಸಂಘಟನೆಗೆ ಅಧಿಕೃತ ಚಾಲನೆ ನೀಡಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಉಂಟು ಮಾಡಿದೆ.
ಭರ್ಜರಿ ತಯಾರಿ
1. ಬೀದರ್, ಕಲಬುರಗಿ ಭಾಗದ ಮುಖಂಡರೊಂದಿಗೆ ಸಿದ್ದರಾಮಯ್ಯ ಮಹತ್ವದ ಸಮಾಲೋಚನೆ
2. ಸಮಾವೇಶದ ತಯಾರಿಗೆ ಸಮಿತಿ ರಚನೆ. ಅ.ಹಿಂ.ದ. ಗ್ರಾಪಂ ಸದಸ್ಯರ ಮಾಹಿತಿ ಸಂಗ್ರಹಕ್ಕೆ ಸಿದ್ಧತೆ
3. ಕಲಬುರಗಿಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಆಯ್ದ ಗ್ರಾಪಂ ಸದಸ್ಯರಿಗೆ ಸನ್ಮಾನಕ್ಕೆ ಯೋಜನೆ
4. ವಿಧಾನಸಭೆ ಚುನಾವಣೆ ಬಳಿಕ ದೂರ ಇದ್ದ ಎಚ್.ಸಿ.ಮಹದೇವಪ್ಪ ಕೂಡ ಸಿದ್ದು ನಿವಾಸಕ್ಕೆ ಭೇಟಿ
5. ‘ಅಹಿಂದ’ದಲ್ಲಿ ತಮ್ಮ ಜತೆಗಿದ್ದ ನಾಯಕರನ್ನು ಒಗ್ಗೂಡಿಸಲು ಸಿದ್ದು ಪ್ರಯತ್ನದ ಬಗ್ಗೆ ಗುಸುಗುಸು
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 11, 2021, 7:30 AM IST