Asianet Suvarna News Asianet Suvarna News

ಸಿದ್ದು ಅವಧಿಯ ಜವಳಿ ನೀತಿ ಫೇಲ್‌: ಸಿಎಜಿ ವರದಿ

 10 ಸಾವಿರ ಕೋಟಿ ರು. ಬಂಡವಾಳ ಆಕರ್ಷಿಸುವ ಜೊತೆಗೆ ಐದು ಲಕ್ಷ ಉದ್ಯೋಗ ಸೃಷ್ಟಿಸುವ ಗುರಿಯೊಂದಿಗೆ ಪ್ರಕಟಿಸಿದ 2013-18 ಅವಧಿಯ ‘ನೂತನ ಜವಳಿ ನೀತಿ’ ತನ್ನ ನಿರೀಕ್ಷಿತ ಗುರಿ ತಲುಪುವಲ್ಲಿ ವಿಫಲವಾಗಿದೆ ಎಂದು ವರದಿಯೊಂದು ಹೇಳಿದೆ. 

Siddaramaiah Textile Plan Failed  CIJ Gives Reports
Author
Bengaluru, First Published Oct 11, 2019, 7:13 AM IST

ಬೆಂಗಳೂರು[ಅ.11]:  ಜವಳಿ ಕ್ಷೇತ್ರದಲ್ಲಿ ಐದು ವರ್ಷದಲ್ಲಿ 10 ಸಾವಿರ ಕೋಟಿ ರು. ಬಂಡವಾಳ ಆಕರ್ಷಿಸುವ ಜೊತೆಗೆ ಐದು ಲಕ್ಷ ಉದ್ಯೋಗ ಸೃಷ್ಟಿಸುವ ಗುರಿಯೊಂದಿಗೆ ಪ್ರಕಟಿಸಿದ 2013-18 ಅವಧಿಯ ‘ನೂತನ ಜವಳಿ ನೀತಿ’ ತನ್ನ ನಿರೀಕ್ಷಿತ ಗುರಿ ತಲುಪುವಲ್ಲಿ ವಿಫಲವಾಗಿದೆ ಎಂದು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರ ವರದಿ ಹೇಳಿದೆ.

ನೀತಿ ರೂಪಿಸಿದ ಸರ್ಕಾರ ಈ ಕ್ಷೇತ್ರದ ಬಗ್ಗೆ ಸಮಗ್ರವಾದ ದತ್ತಾಂಶ ಸಂಗ್ರಹಿಸದೇ ಇರುವುದು, ಹೂಡಿಕೆದಾರರ ಸಮಸ್ಯೆ ಆಲಿಸಿ ಪರಿಹರಿಸದೇ ಇರುವುದು, ಫಲಾನುಭವಿ ಘಟಕಗಳಿಗೆ ಪ್ರೋತ್ಸಾಹಧನ​​​​​- ರಿಯಾಯತಿಗಳ ಬಿಡುಗಡೆ ಮಾಡುವಲ್ಲಿ ವಿಳಂಬ ಧೋರಣೆ ತೋರಿದ ಪರಿಣಾಮ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ವಿಧಾನ ಮಂಡಲದ ಉಭಯ ಸದನಗಳಲ್ಲಿ ಗುರುವಾರ ವರದಿ ಮಂಡಿಸಲಾಯಿತು. ನಂತರ ರಾಜ್ಯ ಮಹಾಲೇಖಪಾಲರಾದ ಅನೂಪ್‌ ಫ್ರಾನ್ಸಿಸ್‌ ಡುಂಗ್‌ ಡುಂಗ್‌ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಇನ್ನಷ್ಟುವಿವರ ನೀಡಿದರು.

‘ನೂತನ ಜವಳಿ ನೀತಿ’ ಜಾರಿಗೆ ಅನುಸರಿಸಿದ ಕ್ರಮ, ಕಾರ್ಯಕ್ಷಮತೆ ಕುರಿತು ನಡೆಸಿದ ಲೆಕ್ಕ ಪರಿಶೋಧನೆಯಲ್ಲಿ ಹೂಡಿಕೆ ಕೇವಲ ಶೇ.37 ಮತ್ತು ಉದ್ಯೋಗ ಸೃಷ್ಟಿಶೇ.24ರಷ್ಟುಮಾತ್ರ ಆಗಿದೆ. ಪ್ರಮುಖವಾಗಿ ಐದು ವರ್ಷಗಳ ಅವಧಿಯಲ್ಲಿ ಜವಳಿ ಘಟಕಗಳ ಸ್ಥಾಪನೆಗೆ ಕೇವಲ 4950.90 ಕೋಟಿ ರು. ಬಂಡವಾಳ ಹೂಡಿಕೆಯಿದ್ದ 85 ಯೋಜನೆಗಳಿಗೆ ಅನುಮೋದನೆ ನೀಡಲಾಯಿತು. ಅನುಮೋದಿತ 85 ಯೋಜನೆಗಳ ಪೈಕಿ 55 ಯೋಜನೆಗಳು ಮಾಚ್‌ರ್‍ ಅಂತ್ಯಕ್ಕೆ ಅನುಷ್ಠಾನ ಇಲ್ಲವೇ ಅನುಷ್ಠಾನದ ಹಂತದಲ್ಲಿದ್ದವು. ಆದರೆ 22 ಯೋಜನೆಗಳನ್ನು ಕೈಬಿಡಲಾಯಿತು. ಈ ಯೋಜನೆಗಳು ಜಾರಿಗೆ ಬಾರದೆ ಇರುವುದರ ಕಾರಣಗಳನ್ನು ಇಲಾಖೆ ಗಮನಿಸದೆ ಪರಿಹಾರ ಕ್ರಮವನ್ನು ಕಂಡುಕೊಳ್ಳದಿರುವುದು ಕಂಡು ಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸಂಭಾವ್ಯ ಹೂಡಿಕೆದಾರರ ಕೊರತೆಯಿಂದ ಜವಳಿ ಪಾರ್ಕ್ ಸ್ಥಾಪನೆಗೆ ಮೀಸಲಾದ ಅಥವಾ ಪ್ರಸ್ತಾವಿತವಾಗಿದ್ದ 2583 ಎಕರೆ ಭೂಮಿ ಉಪಯೋಗವಾಗಿಲ್ಲ. ಹಿಂದುಳಿದ ಪ್ರದೇಶಗಳಲ್ಲಿ ಖಾಸಗಿ ವೃತ್ತಿಪರರಿಂದ ಹೂಡಿಕೆಗಳನ್ನು ಆಕರ್ಷಿಸಲು ಪ್ರೋತ್ಸಾಹದ ಜೊತೆಗೆ ಅವಶ್ಯಕ ಮೂಲಭೂತ ಸೌಲಭ್ಯ ಒದಗಿಸದೇ ಕೇವಲ ಭೂಮಿಯನ್ನು ಮಾತ್ರ ಒದಗಿಸಿರುವ ಕಾರಣದಿಂದಲೂ ಜವಳಿ ನೀತಿ ಫಲಪ್ರದವಾಗಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ಉಳಿದಂತೆ ಸಿಎಜಿ ವರದಿಯಲ್ಲಿ ಉಲ್ಲೇಖಿಸಿದ ಪ್ರಮುಖ ಅಂಶಗಳು ಈ ರೀತಿ ಇವೆ:

* ನಷ್ಟದಲ್ಲಿದ್ದ ಸಹಕಾರಿ ಕ್ಷೇತ್ರದಲ್ಲಿನ ನೂಲಿನ ಗಿರಣಿಗಳ ಪುನಶ್ಚೇತನ ಸಂಬಂಧ ರಾಜ್ಯ ಸರ್ಕಾರ 271.87 ಕೋಟಿ ರು. ಬಾಕಿ ಮನ್ನಾ ಮಾಡಿದ್ದರೂ, ಒಂಬತ್ತು ಗಿರಣಿಗಳ ಪೈಕಿ ಆರು ಗಿರಣಿಗಳು ಪುನಶ್ಚೇತನವಾಗಲಿಲ್ಲ.

* ಖಾಸಗಿ ವಲಯದ ಭಾಗವಹಿಸುವಿಕೆಯೊಂದಿಗೆ ಯೋಜಿತವಾಗಿದ್ದ ಸಮಗ್ರ ಸೌಲಭ್ಯ ಇರುವ ಆರು ಜವಳಿ ಪಾರ್ಕ್ ಯಶಸ್ವಿಯಾಗಲಿಲ್ಲ. ವಿಶೇಷ ಉದ್ದೇಶದ ವಾಹಕಕ್ಕೆ (ಎಸ್‌ಪಿವಿ) 6.35 ಕೋಟಿ ರು. ಬಿಡುಗಡೆ ಮಾಡಲಾಯಿತು.

* ಫಲಾನುಭವಿ ಘಟಕಗಳಿಗೆ ಪ್ರೋತ್ಸಾಹಧನ ಅಥವಾ ರಿಯಾಯಿತಿ ಬಿಡುಗಡೆ ಮಾಡುವಲ್ಲಿ ವಿಳಂಬವಾದ ಕಾರಣ ಈ ಘಟಕಗಳ ಮೇಲೆ ಪರಿಣಾಮ ಬೀರಿತು.

* ಜವಳಿ ನೀತಿಯನ್ನು ಮೀರಿ ಒಂದು ಸೂಪರ್‌ ಮೆಗಾ ಯೋಜನೆಗೆ ಪ್ರೋತ್ಸಾಹ ಧನವನ್ನು ಅಪ್ರಸ್ತುತವಾಗಿ 315 ಕೋಟಿ ರು. ಬಿಡುಗಡೆ ಮಾಡಿದ್ದು ಹೆಚ್ಚುವರಿ ಆರ್ಥಿಕ ಪರಿಣಾಮ ಉಂಟು ಮಾಡಿತು.

* ಹಲವಾರು ಯೋಜನೆಗಳ ಅನುಷ್ಠಾನಕ್ಕೆ ಬಿಡುಗಡೆಯಾಗಿದ್ದ 84.53 ಕೋಟಿ ರು. ಎರಡರಿಂದ ಐದು ವರ್ಷಗಳ ಕಾಲ ಬ್ಯಾಂಕ್‌ ಖಾತೆಯಲ್ಲಿ ಬಳಕೆಯಾಗದೇ ಉಳಿದಿತ್ತು.

* ಇಲಾಖೆಯು ವಿದ್ಯುಚ್ಛಕ್ತಿ ಬಿಲ್‌ಗಳನ್ನು ಪೂರ್ಣವಾಗಿ ಪಾವತಿ ಮಾಡದಿದ್ದರಿಂದ 51.89 ಕೋಟಿ ರು. ದಂಡ ಬಡ್ಡಿಯನ್ನು ಬೆಸ್ಕಾಂಗೆ ಪಾವತಿಸಿತು.

Follow Us:
Download App:
  • android
  • ios