ಬೆಂಗಳೂರು[ಡಿ.28]: ರಾಜ್ಯ ಸರ್ಕಾರ ಅಸ್ಥಿರಗೊಳಿಸುವ ಬಿಜೆಪಿ ನಾಯಕರ ಕನಸು ನನಸಾಗುವುದಿಲ್ಲ. ಅಧಿಕಾರವಿಲ್ಲದೆ ಹತಾಶರಾಗಿರುವ ಬಿ.ಎಸ್‌. ಯಡಿಯೂರಪ್ಪ, ಉಮೇಶ್‌ ಕತ್ತಿ, ಕೆ.ಎಸ್‌. ಈಶ್ವರಪ್ಪ ಮುಂತಾದವರು ಅತೃಪ್ತ ಆತ್ಮಗಳಾಗಿದ್ದಾರೆ. ಅತೃಪ್ತಿ, ಹತಾಶೆಯಿಂದಲೇ ಇತರರ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಗುರುವಾರ ಸರಣಿ ಟ್ವೀಟ್‌ಗಳ ಮೂಲಕ ಬಿಜೆಪಿ ನಾಯಕರನ್ನು ಟೀಕಿಸಿರುವ ಅವರು, ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿ ಕನಸು ನನಸಾಗುವುದಿಲ್ಲ. 24 ಗಂಟೆಯಲ್ಲಿ ಸರ್ಕಾರ ಬೀಳಲಿದೆ, ಒಂದು ವಾರದಲ್ಲಿ ಸರ್ಕಾರ ಬೀಳಲಿದೆ ಎಂಬ ಉಮೇಶ್‌ ಕತ್ತಿ ಅವರ ಮಾತನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳಬೇಡಿ. ಸರ್ಕಾರದ ಅಸ್ಥಿರತೆ ಬಗ್ಗೆ ಮಾತನಾಡಿರುವ ಉಮೇಶ್‌ ಕತ್ತಿ ಅವರಿಗೆ ಬಿ.ಎಸ್‌. ಯಡಿಯೂರಪ್ಪ ಅವರೇ ಕಿವಿ ಹಿಂಡಿದ್ದಾರೆ. ಹೀಗಾಗಿ ಸರ್ಕಾರದ ಬಗ್ಗೆ ಯೋಚನೆ ಮಾಡುವುದು ಬಿಟ್ಟು ಬಿಜೆಪಿಯಲ್ಲಿರುವ ಅಸಮಾಧಾನಗಳನ್ನು ಬಗೆಹರಿಸಿಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.