ಬೆಂಗಳೂರು,[ಡಿ.8]: ಜೈಪುರದಲ್ಲಿ ಇತ್ತೀಚೆಗೆ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಅನ್ನು ಟೀಕಿಸಿ ಪ್ರಧಾನಿ ನರೇಂದ್ರ ಮೋದಿ ಬಳಸಿದ 'ವಿಧವೆ' ಪದ ಭಾರಿ ವಿವಾದ ಸೃಷ್ಟಿಸಿದೆ. 

ಇದೀಗ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ತಮ್ಮ ತಾಯಿಯೂ ವಿಧವೆ ಎನ್ನವುದನ್ನು ಮೋದಿ ಮರೆಯಬಾರದು ಎಂದು ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.

ರಾಜಸ್ಥಾನ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ್ದ ಪ್ರಧಾನಿ ಮೋದಿ ಅವರು, ದೇಶದ ವಿಧವೆಯರ ವೇತನದ ಹಣವನ್ನು ಕಾಂಗ್ರೆಸ್‍ನ ವಿಧವಾ ಮಹಿಳೆ ಲೂಟಿ ಮಾಡಿದ್ದಾಳೆ ಎಂದು ಟೀಕೆ ಮಾಡಿದ್ದರು. ಇದನ್ನು ಖಂಡಿಸಿ ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

ರಾಜಸ್ಥಾನದಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಹುಟ್ಟದೇ ಇರುವ ಹೆಣ್ಣುಮಕ್ಕಳನ್ನು ವಿಧವೆಯರೆಂದು ಪಟ್ಟಿ ಮಾಡಿ ಅವರ ಹೆಸರಿನಲ್ಲಿ ಪಿಂಚಣಿ ಪಡೆದುಕೊಳ್ಳಲಾಗಿತ್ತು. ಈ ಹಣ ಕಾಂಗ್ರೆಸ್‌ನ ಯಾವ ವಿಧವೆಯ ಬ್ಯಾಂಕ್ ಖಾತೆಗೆ ಹೋಗಿದೆ? ಎಂದು ಮೋದಿ ಪ್ರಶ್ನಿಸಿದ್ದರು.

ಅಷ್ಟೇ ಅಲ್ಲದೇ ಕಾಂಗ್ರೆಸ್‌ನ ವಿಧವೆ ಎಂಬ ಪದವನ್ನು ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರನ್ನು ಕುರಿತಾಗಿ ಆಡಿದ್ದು. ಈ ಮೂಲಕ ಸೋನಿಯಾ ಗಾಂಧಿ ಅವರನ್ನು ಅವಮಾನಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.