ಚೆನ್ನೈನಲ್ಲಿ ಸಿದ್ದರಾಮಯ್ಯಗೆ ಅಂಬೇಡ್ಕರ್ ಪ್ರಶಸ್ತಿ ಪ್ರಧಾನ, ಸ್ಟಾಲಿನ್ ಭೇಟಿ
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಚೆನ್ನೈನಲ್ಲಿ ಅಂಬೇಡ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಗಿದ್ದು, ಇದೇ ವೇಳೆ ತಮಿಳುನಾಡು ಸಿಎಂ ಸ್ಟಾಲಿನ್ ಭೇಟಿ ಮಾಡಿ ಮಾತುಕತೆ ನಡೆಸಿದರು.
ಬೆಂಗಳೂರು (ಜು.31): ತಮಿಳುನಾಡಿನ ವಿಡುದಲೈ ಚಿರುದೈಗಳ್ ಪಕ್ಷದ (ವಿಸಿಕೆ) ‘ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿಗೆ’ ಭಾಜನರಾಗಿರುವ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶನಿವಾರ ಚೆನ್ನೈನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕಾರ ಮಾಡಿದರು. ಶನಿವಾರ ಬೆಳಗ್ಗೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ವಿಸಿಕೆ ಪಕ್ಷ ಹಾಗೂ ಕಾಂಗ್ರೆಸ್‌ನ ಸಾವಿರಾರು ಕಾರ್ಯಕರ್ತರು ಭವ್ಯ ಸ್ವಾಗತದ ಮೂಲಕ ಸಿದ್ದರಾಮಯ್ಯ ಅವರನ್ನು ಬರ ಮಾಡಿಕೊಂಡರು. ಇದಕ್ಕೆ ಖುಷಿ ವ್ಯಕ್ತಪಡಿಸಿರುವ ಸಿದ್ದು, ಆತ್ಮೀಯವಾಗಿ ಬರಮಾಡಿಕೊಂಡ ಎಲ್ಲರಿಗೂ ಧನ್ಯವಾದಗಳು. ಗಡಿ ರೇಖೆಗಳನ್ನು ಮೀರಿ ದೇಶದ ಉದ್ದಗಲಕ್ಕೂ ನನ್ನ ಸೈದ್ಧಾಂತಿಕ ನಿಲುವಿಗೆ ಜೊತೆಯಾಗಿ ನಿಂತಿರುವ ಜನರೇ ನನ್ನ ರಾಜಕೀಯ ಶಕ್ತಿ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ನಂತರ ಮಧ್ಯಾಹ್ನ ಅವರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನು ಭೇಟಿ ಮಾಡಿದರು. ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಚೆನ್ನೈ ಪ್ರವಾಸದ ಸಂದರ್ಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರನ್ನು ಭೇಟಿ ಮಾಡಿ ಒಂದಷ್ಟುಹೊತ್ತು ಆತ್ಮೀಯ ಮಾತುಕತೆ ನಡೆಸಿದೆ ಎಂದು ತಿಳಿಸಿದರು. ಸ್ಟಾಲಿನ್ ಭೇಟಿ ವೇಳೆ ತಮಿಳುನಾಡು ಸಚಿವರಾದ ದೊರೈ ಮುರುಗನ್, ತಮಿಳುನಾಡು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಅಳಗಿರಿ, ಸಂಸದರಾದ ತಿರುಮಾವಲವನ್, ಕರ್ನಾಟಕದ ಮಾಜಿ ಸಚಿವ ಎಚ್.ಎಂ.ರೇವಣ್ಣ ಸೇರಿದಂತೆ ಹಲವರು ಹಾಜರಿದ್ದರು.
ಅಂಬೇಡ್ಕರ್ ಪ್ರಶಸ್ತಿ ಪ್ರದಾನ: ನಂತರ ಸಂಜೆ 4 ಗಂಟೆಗೆ ವಿಸಿಕೆ ಪಕ್ಷ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ, ಜ್ಯಾತ್ಯತೀತತೆ ಹಾಗೂ ಸಾಮಾಜಿಕ ನ್ಯಾಯದ ಸಿದ್ಧಾಂತಗಳಿಗಾಗಿ ಕೃಷಿ ಮಾಡುತ್ತಿರುವವರಿಗೆ ನೀಡುವ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ಸ್ವೀಕರಿಸಿದರು. ಅರಿವಿನ ಗುರು ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಪ್ರಶಸ್ತಿ ನೀಡಿ ಗೌರವಿಸಿದ ತಮಿಳುನಾಡಿನ ವಿಡುದಲೈ ಚಿರುದೈಗಳ್ ಪಕ್ಷದ ಮುಖ್ಯಸ್ಥರು ಹಾಗೂ ಸಂಸದರು ಆದ ತಿರುಮಾವಲವನ್ ಅವರಿಗೆ ಧನ್ಯವಾದಗಳು ಎಂಸು ಸಿದ್ದರಾಮಯ್ಯ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.
ಇನ್ನು ಚೆನ್ನೈನಲ್ಲಿ ಜುಲೈ 31 ರಂದು ದ್ರಾವಿಡ ಚಳವಳಿಯ ಪಿತಾಮಹಾ ಪೆರಿಯಾರ್ ಅವರ ಸಮಾಧಿ ಸ್ಥಳಕ್ಕೆ ಭೇಟಿನೀಡಿ ಗೌರವ ಸಲ್ಲಿಸಿ, ಬಳಿಕ ಪೆರಿಯಾರ್ ಅವರ ವಸ್ತು ಸಂಗ್ರಹಾಲಯವನ್ನು ವೀಕ್ಷಿಸಿದರು. ದ್ರಾವಿಡ ಪಕ್ಷದ ಅಧ್ಯಕ್ಷ ವೀರಮಣಿ, ತಮಿಳು ನಾಡು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸೆಲ್ವ ಪಿರುಂದಗೈ, ಮಾಜಿ ಸಚಿವ ಎಚ್.ಎಂ.ರೇವಣ್ಣ ಇನ್ನಿತರರು ಇದೇ ವೇಳೆ ಹಾಜರಿದ್ದರು.
ವಿಸಿಕೆ ಪಕ್ಷವು ಜಾತ್ಯತೀತತೆ ಹಾಗೂ ಸಾಮಾಜಿಕ ನ್ಯಾಯದ ಪರ ಹೋರಾಟ ಮಾಡುವ ಪ್ರಮುಖರಿಗೆ ಪ್ರತಿ ವರ್ಷ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಯನ್ನು ನೀಡುತ್ತದೆ. ಇತ್ತೀಚೆಗೆ ಸಿದ್ದರಾಮಯ್ಯ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದ ಪಕ್ಷವು ಪಕ್ಷದ ಸಂಸದ ತಿರುಮಾವಲವನ್ ಅವರನ್ನು ಕಳುಹಿಸಿ ಸಿದ್ದರಾಮಯ್ಯ ಅವರಿಗೆ ಪ್ರಶಸ್ತಿ ಸ್ವೀಕರಿಸಲು ಚೆನ್ನೈಗೆ ಆಗಮಿಸುವಂತೆ ಆಹ್ವಾನಿಸಿತ್ತು.