Asianet Suvarna News Asianet Suvarna News

ಯುಜಿಸಿ ಕಚೇರಿ ಎತ್ತಂಗಡಿಗೆ ಸಿದ್ದರಾಮಯ್ಯ ಆಕ್ರೋಶ

ಮೋದಿ, ಅಮಿತ್‌ ಶಾ ರಾಜ್ಯಕ್ಕೆ ಬಂದಾಗೆಲ್ಲ ಕನ್ನಡಿಗರಿಗೆ ಆಘಾತ, ಈ ಬಾರಿ ಯುಜಿಸಿ ಕಚೇರಿ ಸ್ಥಳಾಂತರಿಸಿ ಕನ್ನಡಿಗರ ಹಕ್ಕು ಹರಣ: ಸಿದ್ದರಾಮಯ್ಯ

Siddaramaiah Outrage at UGC Office Transfer From Bengaluru grg
Author
First Published Jan 20, 2023, 2:30 AM IST

ಬೆಂಗಳೂರು(ಜ.20): ‘ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಸಚಿವ ಅಮಿತ್‌ ಶಾ ಕರ್ನಾಟಕಕ್ಕೆ ಬಂದ ಪ್ರತಿ ಸಾರಿಯೂ ಕನ್ನಡಿಗರಿಗೆ ಆಘಾತ ಮಾಡಿಯೇ ಬರುತ್ತಿದ್ದಾರೆ. ಈ ಬಾರಿ ಬೆಂಗಳೂರಿನಲ್ಲಿದ್ದ ಯುಜಿಸಿ ಪ್ರಾದೇಶಿಕ ಕಚೇರಿಯನ್ನು ಸ್ಥಳಾಂತರ ಮಾಡಿ ಕನ್ನಡಿಗರ ಮತ್ತೊಂದು ಹಕ್ಕು ಕಸಿದಿದ್ದಾರೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ಈ ಬಗ್ಗೆ ಪ್ರತಿಕಾ ಹೇಳಿಕೆ ನೀಡಿರುವ ಅವರು, ‘ಬೆಂಗಳೂರಿನಲ್ಲಿದ್ದ ಯುಜಿಸಿ ಕಚೇರಿಯನ್ನು ದೆಹಲಿಗೆ ಸ್ಥಳಾಂತರಿಸಲಾಗುತ್ತಿದೆ. ಇದರಿಂದ ರಾಜ್ಯದ ಮಕ್ಕಳು, ಅಧ್ಯಾಪಕರು, ಕಾಲೇಜು, ವಿವಿಗಳ ಆಡಳಿತ ಮಂಡಳಿಗಳವರು ಸಣ್ಣ-ಪುಟ್ಟಸಮಸ್ಯೆಗಳಿಗೂ ದೆಹಲಿಗೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿದ್ದಾರೆ.

Assembly election: ಸಿದ್ದರಾಮಯ್ಯ ಖಾಲಿ ಡಬ್ಬ- ಸುಮ್ಮನೆ ಸದ್ದು ಮಾಡ್ತಾರೆ: ಸಚಿವ ಅಶೋಕ್‌ ತಿರುಗೇಟು

ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗದ (ಯುಜಿಸಿ) ಕಚೇರಿ ಬೆಂಗಳೂರು ಬಿಟ್ಟು ದೆಹಲಿಗೆ ಹೋಗುತ್ತಿದ್ದರೂ ರಾಜ್ಯದ ಉನ್ನತ ಶಿಕ್ಷಣ ಸಚಿವರಾಗಲಿ, ಮುಖ್ಯಮಂತ್ರಿಗಳಾಗಲಿ ಸಣ್ಣ ಪ್ರತಿಭಟನೆಯನ್ನೂ ದಾಖಲಿಸಿಲ್ಲ. ಗುಜರಾತ್‌ ಮೂಲದ ಈ ಜೋಡಿ ರಾಜ್ಯದ ಪ್ರತಿಯೊಂದನ್ನೂ ಕಿತ್ತುಕೊಳ್ಳುತ್ತಿದೆ. ದಮ್ಮು, ತಾಕತ್ತಿನ ಬಗ್ಗೆ ಮಾತನಾಡುವ ಮುಖ್ಯಮಂತ್ರಿಗಳು ಹಾಗೂ ರಾಜ್ಯ ಬಿಜೆಪಿ ಸರ್ಕಾರವು ರಾಜ್ಯದ ಸ್ವಾಭಿಮಾನವನ್ನೇ ದರೋಡೆ ಮಾಡುತ್ತಿದ್ದರೂ ಉಸಿರು ಎತ್ತದೆ ರಾಜ್ಯದ 7 ಕೋಟಿ ಕನ್ನಡಿಗರಿಗೆ ಅವಮಾನ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.

ಅಮಿತ್‌ ಶಾ ಮತ್ತು ನರೇಂದ್ರ ಮೋದಿಯವರಿಗೆ ಕರ್ನಾಟಕ ಎಂಬುದೊಂದು ರಾಜ್ಯವಿದೆ ಎಂದು ನೆನಪಾಗುವುದು ಚುನಾವಣೆಗಳು ಬಂದಾಗ ಅಥವಾ ಕರ್ನಾಟಕದಲ್ಲಿ ಸಂಪತ್ತಿದೆ, ಅದನ್ನು ಲೂಟಿ ಮಾಡುವುದು ಹೇಗೆ ಎಂಬ ಯೋಚನೆ ಬಂದಾಗ ಮಾತ್ರ.

ರಾಜ್ಯದಲ್ಲಿ ರೈತರು ಬೆಳೆದ ಅಡಿಕೆ, ತೆಂಗು, ಕಬ್ಬು, ಮೆಣಸು, ಕಾಫಿ, ಭತ್ತ ಮುಂತಾದ ಬೆಳೆಗಳಿಗೆ ಬೆಲೆಗಳಿಲ್ಲ. ತೊಗರಿಗೆ ನೆಟೆ ರೋಗ ಬಂದಿದೆ. ಜಾನುವಾರುಗಳಿಗೆ ಚರ್ಮಗಂಟು ಕಾಯಿಲೆ ಬಂದು 30000ಕ್ಕೂ ಹೆಚ್ಚು ಜಾನುವಾರುಗಳು ಮರಣ ಹೊಂದಿವೆ. ಸುಮಾರು 18 ಲಕ್ಷ ಲೀಟರ್‌ ಹಾಲು ಉತ್ಪಾದನೆ ಕಡಿಮೆಯಾಗಿದೆ. ಪ್ರತಿ ದಿನ ರೈತರಿಗೆ 6.66 ಕೋಟಿಗಳಷ್ಟು ಆದಾಯ ನಷ್ಟವಾಗುತ್ತಿದೆ. ಮಲೆನಾಡಿನ ಅಡಿಕೆ, ಕಾಫಿ ಬೆಳೆಗಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಷ್ಟಾದರೂ ಕರ್ನಾಟಕ ಎಂಬ ರಾಜ್ಯ ಇದೆ ಎಂಬ ನೆನಪು ಬಂದಿತ್ತೇ ಎಂದು ಪ್ರಶ್ನಿಸಿದ್ದಾರೆ.

Follow Us:
Download App:
  • android
  • ios