ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ನಗದು ಬಹುಮಾನ ಹೆಚ್ಚಳ. ಬಂಗಾರ ₹7 ಲಕ್ಷ, ಬೆಳ್ಳಿಗೆ ₹5 ಲಕ್ಷ, ಕಂಚು ₹2 ಲಕ್ಷ ಘೋಷಣೆ. ಇನ್ನು ಒಲಿಂಪಿಕ್ಸ್ ಬಂಗಾರ ವಿಜೇತರಿಗೆ ₹5 ಕೋಟಿ ಕೊಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದರು. ರಾಜ್ಯದ ಕ್ರೀಡಾಪಟುಗಳ ಸಾಧನೆಗೆ ಮೆಚ್ಚುಗೆ.
ಬೆಂಗಳೂರು (ಆ.28): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕ ವಿಜೇತ ಕ್ರೀಡಾಪಟುಗಳಿಗೆ ನಗದು ಪುರಸ್ಕಾರವನ್ನು ಹೆಚ್ಚಿಸುವುದಾಗಿ ಘೋಷಿಸಿದ್ದಾರೆ. ಚಿನ್ನ ಗೆದ್ದವರಿಗೆ ₹7 ಲಕ್ಷ, ಬೆಳ್ಳಿ ಪದಕಕ್ಕೆ ₹5 ಲಕ್ಷ ಮತ್ತು ಕಂಚು ಪದಕಕ್ಕೆ ₹3 ಲಕ್ಷ ನೀಡಲಾಗುವುದು ಎಂದು ತಿಳಿಸಿದ್ದಾರೆ. ಜೊತೆಗೆ, ನಮ್ಮ ರಾಜ್ಯದವರು ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದರೆ ₹5 ಕೋಟಿ ನಗದು ಕೊಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.
ರಾಜ್ಯದ ಸಾಧನೆಗೆ ಮೆಚ್ಚುಗೆ:
ಉತ್ತರಖಂಡದಲ್ಲಿ ನಡೆದ 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕದ ಕ್ರೀಡಾಪಟುಗಳು 34 ಚಿನ್ನ, 18 ಬೆಳ್ಳಿ ಮತ್ತು 28 ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ 5ನೇ ಸ್ಥಾನ ಪಡೆದಿದ್ದಾರೆ. ಈ ಸಾಧನೆಗಾಗಿ ಮುಖ್ಯಮಂತ್ರಿಗಳು ಕ್ರೀಡಾಪಟುಗಳನ್ನು ಅಭಿನಂದಿಸಿದರು. 'ಮುಂದಿನ ಕ್ರೀಡಾಕೂಟದಲ್ಲಿ ನಮ್ಮ ರಾಜ್ಯ ಮೊದಲ ಸ್ಥಾನಕ್ಕೆ ಬರಲಿ' ಎಂದು ಆಶಯ ವ್ಯಕ್ತಪಡಿಸಿದರು.
ನಗದು ಪುರಸ್ಕಾರ ಹೆಚ್ಚಳ:
2015ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಚಿನ್ನಕ್ಕೆ ₹5 ಲಕ್ಷ, ಬೆಳ್ಳಿಗೆ ₹3 ಲಕ್ಷ ಮತ್ತು ಕಂಚಿಗೆ ₹2 ಲಕ್ಷ ನೀಡುವ ಘೋಷಣೆ ಮಾಡಿದ್ದನ್ನು ಸಿದ್ದರಾಮಯ್ಯ ಸ್ಮರಿಸಿಕೊಂಡರು. ಈಗ ಕ್ರೀಡಾಪಟುಗಳ ಸಾಧನೆಗೆ ಇನ್ನಷ್ಟು ಪ್ರೋತ್ಸಾಹ ನೀಡುವ ಉದ್ದೇಶದಿಂದ, ಮುಂದಿನ ಬಾರಿ ಪದಕ ಗೆದ್ದವರಿಗೆ ಹೆಚ್ಚುವರಿ ನಗದು ಪುರಸ್ಕಾರ ನೀಡುವುದಾಗಿ ಘೋಷಿಸಿದರು. ಪ್ರತಿ ಪದಕ ವಿಜೇತ ಕ್ರೀಡಾಪಟುವಿಗೆ, ಅವರ ತರಬೇತುದಾರ ಮತ್ತು ವ್ಯವಸ್ಥಾಪಕರಿಗೂ ನಗದು ಬಹುಮಾನ ನೀಡುವುದಾಗಿ ತಿಳಿಸಿದರು.
ಒಲಿಂಪಿಕ್ಸ್ ಸ್ಪರ್ಧಿಗಳಿಗೆ ವಿಶೇಷ ಪ್ರೋತ್ಸಾಹ:
ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೂ ವಿಶೇಷ ತರಬೇತಿ ಮತ್ತು ಪ್ರೋತ್ಸಾಹ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ರಾಜ್ಯದ 60 ಒಲಿಂಪಿಕ್ ಕ್ರೀಡಾಪಟುಗಳ ತರಬೇತಿಗಾಗಿ ತಲಾ ₹10 ಲಕ್ಷ ನೀಡಲಾಗುವುದು. ಇನ್ನು 'ಒಲಿಂಪಿಕ್‌ನಲ್ಲಿ ಚಿನ್ನ ಗೆದ್ದವರಿಗೆ ₹5 ಕೋಟಿ, ಬೆಳ್ಳಿ ಗೆದ್ದವರಿಗೆ ₹3 ಕೋಟಿ ಮತ್ತು ಕಂಚು ಗೆದ್ದವರಿಗೆ ₹2 ಕೋಟಿ ನೀಡುತ್ತೇವೆ. ಈ ನಗದು ಬಹುಮಾನವನ್ನು ನೇರವಾಗಿ ಅವರ ಖಾತೆಗೆ ವರ್ಗಾವಣೆ ಮಾಡಲಾಗುವುದು' ಎಂದು ತಿಳಿಸಿದರು.
ಕ್ರೀಡಾ ಇಲಾಖೆ ಏನು ಕೇಳಿದರೂ ಕೊಟ್ಟಿದ್ದೇನೆ ಮತ್ತು ಮುಂದೆಯೂ ಕೊಡುತ್ತೇನೆ. ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು, ಅದರ ಜೊತೆಗೆ ಓದು ಕೂಡ ಮುಖ್ಯ' ಎಂದರು. ಪದಕ ಗೆದ್ದ ಖುಷಿಯ ಮುಂದೆ ಬೇರೆ ಯಾವುದೇ ಖುಷಿ ಇಲ್ಲ' ಎಂದು ಅವರು ಹೇಳುವ ಮೂಲಕ ಕ್ರೀಡಾ ಸಾಧನೆಯ ಮಹತ್ವವನ್ನು ಒತ್ತಿ ಹೇಳಿದರು.
