ಬೆಂಗಳೂರಿನಲ್ಲೂ ಹಾಹಾಕಾರ| 300 ಟನ್‌ ಆಕ್ಸಿಜನ್‌ ಬೇಕು, ಶೇ.40 ಕೂಡ ಸಿಗುತ್ತಿಲ್ಲ| ಕೆಲ ಆಸ್ಪತ್ರೆಗಳಲ್ಲಿ ರೋಗಿಗಳ ದಾಖಲು ಸ್ಥಗಿತ: ಫನಾ

ಬೆಂಗಳೂರು(ಮೇ.04): ಬೆಂಗಳೂರಿನಲ್ಲೂ ಚಾಮರಾಜನಗರಕ್ಕಿಂತ ಭೀಕರ ಆಕ್ಸಿಜನ್‌ ಕೊರತೆ ಇದೆ. ಸಣ್ಣ ಮತ್ತು ಮಧ್ಯಮ ಆಸ್ಪತ್ರೆಗಳಿಗಂತೂ ತೀವ್ರ ಕೊರತೆ ಉಂಟಾಗಿದೆ. ಸರ್ಕಾರಕ್ಕೆ ನಿರ್ವಹಣೆ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹಲವು ಆಸ್ಪತ್ರೆಗಳಲ್ಲಿ ರೋಗಿಗಳ ದಾಖಲಾತಿಯನ್ನೇ ಸ್ಥಗಿತಗೊಳಿಸಿದ್ದೇವೆ ಎಂದು ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್‌ ಹೋಂಗಳ ಸಂಘ (ಫನಾ) ಸ್ಪಷ್ಟಪಡಿಸಿದೆ.

ಬೆಂಗಳೂರಿನಲ್ಲಿ ಆಕ್ಸಿಜನ್‌ ತೀವ್ರ ಕೊರತೆ ಮುಂದುವರೆದಿದೆ. ಬೆಂಗಳೂರಿನಲ್ಲಿ ಈಗಾಗಲೇ ಆಕ್ಸಿಜನ್‌, ಐಸಿಯು ಬೆಡ್‌ ಸಿಗದೆ ಹಲವರು ಮನೆ, ರಸ್ತೆಗಳಲ್ಲೇ ಪ್ರಾಣ ತೆತ್ತುತ್ತಿದ್ದಾರೆ. ಇರುವ ಆಕ್ಸಿಜನ್‌ ಬೆಡ್‌ಗಳಿಗೂ ಆಕ್ಸಿಜನ್‌ ಪೂರಐಕೆ ಆಗುತ್ತಿಲ್ಲ. ನಿತ್ಯ 300 ಟನ್‌ ಆಕ್ಸಿಜನ್‌ ಅಗತ್ಯವಿದ್ದರೆ ಶೇ.30ರಿಂದ 40ರಷ್ಟುಸಹ ಸರಬರಾಜು ಆಗುತ್ತಿಲ್ಲ ಎಂದು ಫನಾ ಆತಂಕ ವ್ಯಕ್ತಪಡಿಸಿದೆ.

ಈ ಬಗ್ಗೆ ಸೋಮವಾರ ‘ಕನ್ನಡಪ್ರಭ’ ಜತೆ ಮಾತಾಡಿ ಫನಾ ಅಧ್ಯಕ್ಷ ಪ್ರಸನ್ನ, ‘ಚಾಮರಾಜನಗರದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಇಲ್ಲದೆ ರೋಗಿಗಳು ಮೃತಪಟ್ಟಿದ್ದಾರೆ. ಅಂತಹ ದುರಂತಹ ಖಾಸಗಿ ಆಸ್ಪತ್ರೆಗಳಲ್ಲಿ ನಡೆದಿದ್ದರೆ ನಮ್ಮ ಮೇಲೆ ದಾಳಿ ಮಾಡುವುದಲ್ಲದೆ ಸರ್ಕಾರವೂ ಕಠಿಣ ಕ್ರಮ ಕೈಗೊಳ್ಳುತ್ತದೆ. ಹೀಗಾಗಿ ಅನಗತ್ಯ ಅಪಾಯಗಳಿಗೆ ಆಹ್ವಾನ ನೀಡದೆ ಸೋಮವಾರವೂ ಎರಡು ಆಸ್ಪತ್ರೆಗಳಲ್ಲಿ ದಾಖಲಾತಿ ನಿಲ್ಲಿಸುವಂತೆ ಸೂಚಿಸಿದ್ದೇವೆ. ಜತೆಗೆ ಆಕ್ಸಿಜನ್‌ ಲಭ್ಯತೆ ಇದ್ದಷ್ಟೇ ಮಂದಿಯನ್ನು ದಾಖಲಿಸಿಕೊಳ್ಳುವಂತೆ ಬೇರೆ ಆಸ್ಪತ್ರೆಗಳಿಗೂ ಸೂಚಿಸಿದ್ದೇವೆ’ ಎಂದರು.

"

ಸರಬರಾಜು ಸರಣಿಯೇ ಸರಿ ಇಲ್ಲ:

ಅಂತಿಮ ಬಳಕೆದಾರರವರೆಗೆ ತಲುಪುವವರೆಗೂ ಮಾನಿಟರ್‌ ಆಗಬೇಕು. ಅದನ್ನು ಸರ್ಕಾರ ಸರಿಯಾಗಿ ಮಾಡುತ್ತಿಲ್ಲ. ಬಳ್ಳಾರಿಯಿಂದ ಹೊರಟ ಲಿಕ್ವಿಡ್‌ ಆಕ್ಸಿಜನ್‌ ಟ್ಯಾಂಕರ್‌ನ ರಿಯಲ್‌ ಟೈಂ ಮಾನಿಟರ್‌ ಆಗಬೇಕು. ಬಂದ ಆಕ್ಸಿಜನ್‌ ಯಾವ್ಯಾವ ಆಸ್ಪತ್ರೆಗೆ ನೀಡಲಾಯಿತು ಎಂಬ ಬಗ್ಗೆ ಆಡಿಟ್‌ ಮಾಡಬೇಕು. ಇಲ್ಲದಿದ್ದರೆ ಈ ಅಕ್ರಮಗಳಿಗೆ ಕಡಿವಾಣ ಸಾಧ್ಯವಿಲ್ಲ ಎಂದು ಹೇಳಿದರು.

ಬೆಂಗಳೂರಿನ ಸಣ್ಣ, ಮಧ್ಯಮ ಆಸ್ಪತ್ರೆಗಳಿಗೆ ಆಕ್ಸಿಜನ್‌ ಸಿಗುತ್ತಿಲ್ಲ. ಆಸ್ಪತ್ರೆಗಳೇ ಸಿಲಿಂಡರ್‌ ತೆಗೆದುಕೊಂಡು ಹೋದರೂ ತುಂಬಿ ಕೊಡುತ್ತಿಲ್ಲ. ರಾಜ್ಯ ಸರ್ಕಾರವು ಕೆಪಿಎಂಇ ಪೋರ್ಟಲ್‌ ನಲ್ಲಿ ಆಕ್ಸಿಜನ್‌ ಬೇಡಿಕೆ ಬಗ್ಗೆ ಆಕ್ಸಿಜನ್‌ ಇಂಡೆಂಟ್‌ ನಮೂನೆ ನೀಡುತ್ತೇವೆ. ಅದನ್ನು ಭರ್ತಿ ಮಾಡಿ ಮನವಿ ಮಾಡಿದರೆ ಅಗತ್ಯವಿದ್ದಷ್ಟು ಆಕ್ಸಿಜನ್‌ ಪೂರೈಸುತ್ತೇವೆ ಎಂದು ಹೇಳಿತ್ತು. ಮೂರು ದಿನ ಕಳೆದರೂ ಇಂಡೆಂಟ್‌ ಫಾಮ್‌ರ್‍ ನೀಡಿಲ್ಲ. ಅಲ್ಲಿಯವರೆಗೂ ರೋಗಿಗಳು ಸಾಯದೇ ಬದುಕಿರುತ್ತಾರೆಯೇ ಎಂದು ಕಿಡಿಕಾರಿದರು.

ಗ್ರೌಂಡ್‌ ರಿಯಾಲಿಟಿ ನೋಡಿ:

‘ಆರೋಗ್ಯ ಸಚಿವ ಸುಧಾಕರ್‌ ಅವರು ಯಾವಾಗ ನೋಡಿದರೂ ಆಕ್ಸಿಜನ್‌ ಕೊರತೆ ಇಲ್ಲ, ರೆಮ್‌ಡೆಸಿವಿರ್‌ ಔಷಧ ಕೊರತೆ ಇಲ್ಲ ಎನ್ನುತ್ತಾರೆ. ವಿಧಾನಸೌಧದಲ್ಲಿ ಸಭೆ ಮಾಡುವುದು, ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಹೋಗುವುದಲ್ಲ. ಸಣ್ಣ, ಪುಟ್ಟಆಸ್ಪತ್ರೆಗಳಿಗೆ ಹೋಗಿ ಗ್ರೌಂಡ್‌ ರಿಯಾಲಿಟಿ ಪರಿಶೀಲಿಸಲಿ. 30 ರಿಂದ 100 ಹಾಸಿಗೆಗಳ ಆಸ್ಪತ್ರೆಗಳ ಸ್ಥಿತಿ ಪರಿಶೀಲಿಸಲಿ’ ಎಂದು ಅಳಲು ತೋಡಿಕೊಂಡರು.

ಈಗಾಗಲೇ ಬೇಡಿಕೆ ಹಾಗೂ ಸರಬರಾಜು ನಡುವಿನ ವ್ಯತ್ಯಾಸ. ಇದರಿಂದ ರೋಗಿಗಳಿಗೆ ಆಗುತ್ತಿರುವ ತೊಂದರೆ ಬಗ್ಗೆ ಸಂಪೂರ್ಣ ವಿವರಗಳನ್ನು ಸರ್ಕಾರಕ್ಕೆ ನೀಡಿದ್ದೇವೆ.

ಅಕ್ಸಿಜನ್‌ ಇಲ್ದೇ 200 ಜನರ ಜೀವನ್ಮರಣ ಹೋರಾಟ: ಫನಾ

‘ಕೇವಲ ಸಣ್ಣ, ಮಧ್ಯಮ ಆಸ್ಪತ್ರೆಗಳಿಗೆ ಮಾತ್ರವಲ್ಲ. ಸೋಮವಾರ ಬೆಂಗಳೂರಿನ ರಾಜರಾಜೇಶ್ವರಿನಗರ ಆಸ್ಪತ್ರೆಯಲ್ಲಿ 200 ಮಂದಿಗೆ ಆಕ್ಸಿಜನ್‌ ಕೊರತೆಯಾಗಿ ಜೀವನ್ಮರಣ ಹೋರಾಟ ನಡೆಸಿದ್ದಾರೆ. ಆರ್‌.ಟಿ. ನಗರದ ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲೂ ಇದೇ ಸ್ಥಿತಿ. ಎರಡು ದಿನಗಳ ಹಿಂದೆ ಬನ್ನೇರುಘಟ್ಟರಸ್ತೆ ಅಪೋಲೋ ಆಸ್ಪತ್ರೆಯಲ್ಲೇ ಆಕ್ಸಿಜನ್‌ ಖಾಲಿಯಾಗಿತ್ತು. ಅಲ್ಲಿನ ಸಿಇಓ ರೋಗಿಗಳ ಸ್ಥಿತಿ ನೆನೆದು ಕಣ್ಣೀರು ಹಾಕಿದ್ದರು’ ಎಂದು ಫನಾ ಅಧ್ಯಕ್ಷ ಪ್ರಸನ್ನ ಅವರು ಬೇಸರ ವ್ಯಕ್ತಪಡಿಸಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona