ಶಿವಮೊಗ್ಗ ಏರ್‌ಪೋರ್ಟ್ ಶೀಘ್ರ ಲೋಕಾರ್ಪಣೆ: ಸಚಿವ ವಿ ಸೋಮಣ್ಣ
ನಾಗರಿಕ ವಿಮಾನಯನ ಕ್ಷೇತ್ರದಲ್ಲಿ ರಾಷ್ಟ್ರದಲ್ಲಿಯೇ ಮುಂಚೂಣಿಯಲ್ಲಿರುವ ನಮ್ಮ ರಾಜ್ಯಕ್ಕೆ ಸಮರ್ಥ ವಿಮಾನಯಾನ ನೀತಿ ರೂಪಗೊಂಡರೆ ಕ್ಷೇತ್ರದ ಸಾಮರ್ಥ್ಯವನ್ನು ಬಳಸಿಕೊಂಡು ಆರ್ಥಿಕ ಪ್ರಗತಿಗೆ ಹೊಸ ದಿಸೆಯನ್ನು ನೀಡಬಹುದಾಗಿದೆ ಎಂದು ಸಚಿವ ವಿ ಸೋಮಣ್ಣ ಅಭಿಪ್ರಾಯ ಪಟ್ಟಿದ್ದಾರೆ.
ಮಾನ್ಯ ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರು ಇಂದು ಬೆಳಗ್ಗೆ 9:30 ಗಂಟೆಗೆ ಬೆಂಗಳೂರು ನಗರದ ಜೆ ಡಬ್ಲ್ಯೂ ಮ್ಯಾರಿಟ್ ಹೋಟೆನಲ್ಲಿ ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ಸಮಗ್ರ ನಾಗರಿಕ ವಿಮಾನಯಾನ ನೀತಿಯ ಕುರಿತಂತೆ ಮೊದಲನೇ ರಾಜ್ಯಮಟ್ಟದ ಸಮಾಲೋಚನ ಕಾರ್ಯಗಾರದ ಉದ್ಘಾಟನೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡುತ್ತಾ ಮಾನ್ಯ ಸಚಿವರು ದೇಶದಲ್ಲಿ ಮೊದಲಿನಿಂದಲೂ ಕರ್ನಾಟಕ ರಾಜ್ಯವು ನಾಗರೀಕ ವಿಮಾನಯಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಜಾಗತಿಕ ಮಟ್ಟದಲ್ಲಿ ಖ್ಯಾತಿಯನ್ನು ಪಡೆದುಕೊಂಡಿದೆ. ಇದಲ್ಲದೆ ಕಲಬುರ್ಗಿ ಬೀದರ್ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಿ ನಾಗರೀಕರಿಗೆ ವಿಮಾನಯಾನ ಸೌಲಭ್ಯವನ್ನು ಒದಗಿಸಲಾಗಿದೆ.
ಪ್ರಸ್ತುತ ಶಿವಮೊಗ್ಗ ವಿಜಯಪುರ ಮತ್ತು ಹಾಸನ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಅಲ್ಲದೆ ರಾಯಚೂರಿನಲ್ಲಿ 320 ಎಕರೆ ಪ್ರದೇಶದಲ್ಲಿ 186 ಕೋಟಿ ರೂಗಳ ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ ಎಂದರು. ಮೈಸೂರು ವಿಮಾನ ನಿಲ್ದಾಣದ ರನ್ ವೆ ವಿಸ್ತರಣೆ ಮತ್ತು ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಸಲುವಾಗಿ ಸುಮಾರು 240 ಎಕರೆ ಜಮೀನನ್ನು ಭೂಸ್ವಾದಿನ ಪಡಿಸಿಕೊಂಡು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಮಡಿಕೇರಿ ಚಿಕ್ಕಮಂಗಳೂರು ಮತ್ತು ಹಂಪಿಯಲ್ಲಿ ಹೆಲಿಪೋರ್ಟ್ ಗಳನ್ನು ಸ್ಥಾಪಿಸಲು ಕಾರ್ಯ ಸಾದ್ಯತಾ ಮತ್ತು ವಿಸೃತ ಯೋಜನಾ ವರದಿ ತಯಾರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದಲ್ಲದೆ ಚಿಕ್ಕಮಗಳೂರು ಹರಿಹರ ಕುಶಾಲನಗರ ಮತ್ತು ಅಥಣಿಯಲ್ಲಿ ಕಿರು ವಿಮಾನ ನಿಲ್ದಾಣ ಕಾಳಿ ನದಿ ಬೈಂದೂರು ಮಲ್ಪೆ ಮಂಗಳೂರು ತುಂಗಭದ್ರಾ ಕೆಆರ್ ಎಸ್ ಲಿಂಗನಮಕ್ಕಿ ಆಲಮಟ್ಟಿ ಮತ್ತು ಹಿಡಕಲ್ ಜಲಾಶಯಗಳಲ್ಲಿ ವಾಟರ್ ಏರೋಡ್ರೂಮ್ಸ್ ಅಭಿವೃದ್ಧಿಪಡಿಸಲು ಸಂಭಾವ್ಯ ಸ್ಥಳಗಳನ್ನಾಗಿ ಗುರುತಿಸಲಾಗಿದೆ.
ಇದನ್ನೂ ಓದಿ: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕೆಳದಿ ಚೆನ್ನಮ್ಮನ ಹೆಸರಿಡಲು ವಚನಾನಂದ ಶ್ರೀ ಆಗ್ರಹ
ರಾಜ್ಯದ ಜನತೆಯ ಸರ್ವತೋಮುಖ ಅಭಿವೃದ್ಧಿಗಾಗಿ ಸಮಗ್ರ ನಾಗರಿಕ ವಿಮಾನಯಾನ ನೀತಿ ರೂಪಿಸುವುದು ಅಗತ್ಯ ಇಂತಹ ನೀತಿಯು ರಾಜ್ಯದ ವಿವಿಧ ಭಾಗಗಳ ಸಂಪರ್ಕ ವ್ಯವಸ್ಥೆ ವಾಣಿಜ್ಯ ಕೈಗಾರಿಕೆ ಪ್ರವಾಸೋದ್ಯಮ ತೋಟಗಾರಿಕೆ ಹಾಗೂ ಕೃಷಿ ಉತ್ಪನ್ನಗಳ ರಫ್ತು ತುರ್ತು ವೈದ್ಯಕೀಯ ಸೇವೆಗಳು ಶೈಕ್ಷಣಿಕ ಹಾಗು ತಾಂತ್ರಿಕ ವಲಯಗಳ ಸಂಪರ್ಕ ಅಭಿವೃದ್ಧಿ ಇಂತಹ ಅನೇಕ ವಲಯಗಳಿಗೆ ನಾಗರಿಕ ವಿಮಾನಯಾನವು ಉತ್ತೇಜನ ನೀಡುತ್ತದೆ ಈ ನಿಟ್ಟಿನಲ್ಲಿ ರಾಜ್ಯಮಟ್ಟದ ಸಮಾಲೋಚನಾ ಕಾರ್ಯಗಾರವನ್ನು ಇಂದು ಹಮ್ಮಿಕೊಳ್ಳಲಾಗಿದೆ.
ನಾಗರಿಕ ವಿಮಾನಯನ ಕ್ಷೇತ್ರದಲ್ಲಿ ರಾಷ್ಟ್ರದಲ್ಲಿಯೇ ಮುಂಚೂಣಿಯಲ್ಲಿರುವ ನಮ್ಮ ರಾಜ್ಯಕ್ಕೆ ಸಮರ್ಥ ವಿಮಾನಯಾನ ನೀತಿ ರೂಪಗೊಂಡರೆ ಕ್ಷೇತ್ರದ ಸಾಮರ್ಥ್ಯವನ್ನು ಬಳಸಿಕೊಂಡು ಆರ್ಥಿಕ ಪ್ರಗತಿಗೆ ಹೊಸ ದಿಸೆಯನ್ನು ನೀಡಬಹುದಾಗಿದೆ ನಾಗರೀಕ ವಿಮಾನಯಾನ ಅವಲಂಬಿತ ಕ್ಷೇತ್ರಗಳ ಪ್ರಗತಿ ರಾಜ್ಯದ ವಿವಿಧ ಪ್ರಾಂತ್ಯಗಳ ಸಂಪರ್ಕ ವ್ಯವಸ್ಥೆ ವಾಣಿಜ್ಯ ಕೃಷಿ ಉತ್ಪನ್ನಗಳ ತುರಿತಗತಿಯ ಸಾಗಾಣಿಕೆ ಇವುಗಳಿಂದ ರಾಜ್ಯದ ಸಾಮಾಜಿಕ ಆರ್ಥಿಕ ವಲಯಗಳ ಅಮೂಲಾಗ್ರ ಬೆಳವಣಿಗೆಗೆ ಹೊಸ ಆಯಾಮ ದೊರಕಲಿದೆ. ಈ ದಿಶೆಯಲ್ಲಿ ಇಂದು ಹಮ್ಮಿಕೊಂಡಿರುವ ಕಾರ್ಯಗಳಿಂದ ಬರುವಂತಹ ಸಲಹೆಗಳು ಮತ್ತು ಅಭಿಪ್ರಾಯಗಳು ನಾಗರಿಕ ವಿಮಾನಯಾನ ನೀತಿಯನ್ನು ರೂಪಿಸಲು ಪೂರಕ ಅಂಶಗಳಾಗಲಿ ಎಂದು ಆಶಿಸುತ್ತಾ ಕಾರ್ಯಗಾರಕ್ಕೆ ಚಾಲನೆ ನೀಡಿದರು.
ಇದನ್ನೂ ಓದಿ: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಬೇಡ, ಸಿಎಂಗೆ ಪತ್ರ ಬರೆದ ಬಿಎಸ್‌ವೈ
ಈ ಸಂದರ್ಭದಲ್ಲಿ ಭಾರತ ಸರ್ಕಾರದ ವಿಮಾನಯಾನ ಮಂತ್ರಾಲಯದ ಜಂಟಿ ಕಾರ್ಯದರ್ಶಿಗಳಾದ ಶ್ರೀಮತಿ ಉಷಾ ಪದಿ, ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ಗೌರವ ಗುಪ್ತ, ಕರ್ನಾಟಕದ FICCI ಅಧ್ಯಕ್ಷರಾದ ಶ್ರೀ ಉಲ್ಲಾಸ್ ಕಾಮತ್, ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಾ. ಶೈಲೇಂದ್ರ ಬೆಲ್ದಾಳೆ, ಕರ್ನಾಟಕ ಕೈಗಾರಿಕಾ ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎಂ ಆರ್ ರವಿ, ವಿಮಾನಯಾನ ಸಂಸ್ಥೆಗಳ ಮುಖ್ಯಸ್ಥರು, ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಇತರ ಮುಖ್ಯಸ್ಥರು ಭಾಗವಹಿಸಿದ್ದರು.