ದೇಶಮುಖ್‌ ರಾಜೀನಾಮೆ ಮಾತೇ ಇಲ್ಲ: ಪವಾರ್‌| ಘಟನೆ ನಡೆದಾಗ ಅವರು ಆಸ್ಪತ್ರೆಯಲ್ಲಿದ್ದರು: ಶರದ್‌| ಇಲ್ಲ ಅವರು ಸುದ್ದಿಗೋಷ್ಠಿ ನಡೆಸಿದ್ದರು: ಫಡ್ನವೀಸ್‌

ಮುಂಬೈ(ಮಾ.23): ಮಹಾರಾಷ್ಟ್ರ ಗೃಹ ಸಚಿವ ಅನಿಲ್‌ ದೇಶಮುಖ್‌ ವಿರುದ್ಧದ 100 ಕೋಟಿ ರು. ಹಫ್ತಾ ವಸೂಲಿ ಆರೋಪವನ್ನು ಅಲ್ಲಗಳೆದಿರುವ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌, ಗೃಹ ಮಂತ್ರಿಯ ರಾಜೀನಾಮೆ ಪಡೆಯುವುದಿಲ್ಲ ಎಂದು ಹೇಳಿದ್ದಾರೆ.

ಬಾರ್‌ ಹಾಗೂ ಹೋಟೆಲ್‌ಗಳಿಂದ ಮಾಸಿಕ 100 ಕೋಟಿ ರು. ಹಫ್ತಾ ವಸೂಲಿಗೆ ಫೆಬ್ರವರಿ ಮಧ್ಯಭಾಗದಲ್ಲಿ ಮುಂಬೈನಲ್ಲಿ ಪೊಲೀಸರಿಗೆ ಅನಿಲ್‌ ದೇಶಮುಖ್‌ ಸೂಚನೆ ನೀಡಿದ್ದರು ಎಂದು ಮಾಜಿ ಪೊಲೀಸ್‌ ಆಯುಕ್ತ ಪರಮ್‌ ಬೀರ್‌ ಸಿಂಗ್‌ ಆಪಾದಿಸಿದ್ದಾರೆ. ಆದರೆ ದೇಶಮುಖ್‌ ಅವರು ಕೊರೋನಾ ಸೋಂಕಿಗೆ ತುತ್ತಾಗಿ ಫೆ.5ರಿಂದ 15ರವರೆಗೆ ನಾಗಪುರದ ಆಸ್ಪತ್ರೆಯಲ್ಲಿದ್ದರು. ಫೆ.15ರಿಂದ ಫೆ.17ರವರೆಗೆ ಆರೈಕೆಯಲ್ಲಿದ್ದರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಪವಾರ್‌ ಅವರು ಈ ಕುರಿತ ವೈದ್ಯಕೀಯ ಪ್ರಮಾಣಪತ್ರವನ್ನು ಓದಿದರು.

ಈ ನಡುವೆ, ಪವಾರ್‌ ಆರೋಪಕ್ಕೆ ತಿರುಗೇಟು ನೀಡಿರುವ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್‌, ಫೆ.15ರಂದು ದೇಶಮುಖ್‌ ಅವರು ಭದ್ರತಾ ಸಿಬ್ಬಂದಿ ಜತೆ ಪತ್ರಿಕಾಗೋಷ್ಠಿ ನಡೆಸಿದ್ದರು ಎಂದು ದೇಶಮುಖ್‌ ಅವರೇ ಟ್ವೀಟ್‌ ಮಾಡಿದ್ದ ವಿಡಿಯೋವೊಂದನ್ನು ತಮ್ಮ ಖಾತೆಯಲ್ಲಿ ಟ್ವೀಟ್‌ ಮಾಡಿದ್ದಾರೆ. ತನ್ಮೂಲಕ ಪವಾರ್‌ ವಾದ ಸುಳ್ಳು ಎಂದು ಸಾಬೀತಿಗೆ ಯತ್ನಿಸಿದ್ದಾರೆ.