ಸ್ಯಾನ್‌ ಫ್ರಾನ್ಸಿಸ್ಕೋ[ಅ.18]: ಕರ್ನಾಟಕ ಮೂಲದ ಐಟಿ ಉದ್ಯೋಗಿಯೊಬ್ಬ ಅಮೆರಿಕದಲ್ಲಿ ನಾಲ್ಕು ಮಂದಿಯನ್ನು ಕೊಲೆ ಮಾಡಿ, ಪೊಲೀಸರಿಗೆ ಶರಣಾದ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಶಂಕರ್‌ ನಾಗಪ್ಪ ಹುನ್‌ಗಡ್‌ (53) ಎಂಬಾತ ತನ್ನ ಅಪಾರ್ಟ್‌ಮೆಂಟ್‌ನಲ್ಲಿದ್ದ ನಾಲ್ಕು ಮಂದಿಯನ್ನು ಕೊಂದಿದ್ದು, ನಾಲ್ಕನೇ ಕೊಲೆ ಮಾಡಿ ಶವವನ್ನು ಕಾರಿನಲ್ಲಿರಿಸಿಕೊಂಡು ಹೋಗಿ ದಕ್ಷಿಣ ಕ್ಯಾಲಿಫೋರ್ನಿಯಾ ಪೊಲೀಸರಿಗೆ ಶರಣಾಗತನಾಗಿದ್ದಾನೆ.

ಕೊಲೆಯಾದ ನಾಲ್ಕೂ ಮಂದಿ ಆರೋಪಿಯ ಸಂಬಂಧಿಕರಾಗಿದ್ದಾರೆ. ಸ್ಕ್ರಮೆಂಟೋ ಬಳಿಯಿರುವ ಆತನ ಅಪಾರ್ಟ್‌ಮೆಂಟ್‌ನಲ್ಲಿ ಉಳಿದ ಮೂವರ ಶವಗಳು ಪತ್ತೆಯಾಗಿದ್ದು, ಹತ್ಯೆಗೆ ನಿಖರ ಕಾರಣ ಏನೆಂದು ತಿಳಿದಿಲ್ಲ. ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ 1.26 ಕೋಟಿ ತೆರಿಗೆ ಬಾಕಿ ಇರುವುದು ತಿಳಿದು ಬಂದಿದೆ.

ಕೊಲೆಯಾದವರ ಬಗ್ಗೆ ತನಿಖೆ ಮಾಡಲಾಗುತ್ತಿದ್ದು, ಪೂರ್ಣ ವಿಚಾರಣೆ ಬಳಿಕವಷ್ಟೇ ಅವರ ಬಗ್ಗೆ ತಿಳಿಯಲಿದೆ. ಈ ಘಟನೆಯಿಂದಾಗಿ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಅಮೆರಿಕದಲ್ಲಿ ದತ್ತಾಂಶ ತಜ್ಞನಾಗಿರುವ ನಾಗಪ್ಪ, ಕಳೆದ ಹಲವು ವರ್ಷಗಳಿಂದ ಕ್ಯಾಲಿಫೋರ್ನಿಯಾ, ಕ್ಯಾಪಿಟಲ್‌ ಮಾಲ್‌, ಡಲ್ಲಾಸ್‌, ಟೆಕ್ಸಾಸ್‌ ಹಾಗೂ ನ್ಯೂ ಜೆರ್ಸಿ ಸೇರಿದಂತೆ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡಿದ್ದ.