ಉತ್ತರ ಕನ್ನಡ: ಗಡಿಭಾಗದ ಮಹಿಳೆಯರಿಗಿಲ್ಲ ಶಕ್ತಿಯೋಜನೆಯ ಸೌಲಭ್ಯ!
ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ಚುನಾವಣೆ ಪೂರ್ವ ನೀಡಿದ್ದ ಐದು ಗ್ಯಾರೆಂಟಿಗಳ ಪೈಕಿ 'ಶಕ್ತಿ ಯೋಜನೆ'ಗೆ ಈಗಾಗಲೇ ಚಾಲನೆ ನೀಡಿದೆ. ಆದರೆ, ಯೋಜನೆಯ ಷರತ್ತು ಒಂದೆಡೆ ಗಡಿ ಜಿಲ್ಲೆಗಳ ಮಹಿಳೆಯರು ಉಚಿತ ಪ್ರಯಾಣದಿಂದ ವಂಚಿತರಾಗುವಂತೆ ಮಾಡಿದ್ರೆ, ಮತ್ತೊಂದೆಡೆ ಸೂಕ್ತ ಬಸ್‌ಗಳ ಕೊರತೆ ಎದ್ದು ಕಾಣುವಂತಾಗಿದೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ....
ಉತ್ತರ ಕನ್ನಡ (ಜೂ.12) : ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ಚುನಾವಣೆ ಪೂರ್ವ ನೀಡಿದ್ದ ಐದು ಗ್ಯಾರೆಂಟಿಗಳ ಪೈಕಿ 'ಶಕ್ತಿ ಯೋಜನೆ'ಗೆ ಈಗಾಗಲೇ ಚಾಲನೆ ನೀಡಿದೆ. ಆದರೆ, ಯೋಜನೆಯ ಷರತ್ತು ಒಂದೆಡೆ ಗಡಿ ಜಿಲ್ಲೆಗಳ ಮಹಿಳೆಯರು ಉಚಿತ ಪ್ರಯಾಣದಿಂದ ವಂಚಿತರಾಗುವಂತೆ ಮಾಡಿದ್ರೆ, ಮತ್ತೊಂದೆಡೆ ಸೂಕ್ತ ಬಸ್‌ಗಳ ಕೊರತೆ ಎದ್ದು ಕಾಣುವಂತಾಗಿದೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ....
ಹೌದು, ರಾಜ್ಯ ಸರಕಾರದ 'ಶಕ್ತಿ ಯೋಜನೆ'ಯ ಪ್ರಕಾರ ರಾಜ್ಯದ ಸೆಮಿ ಡಿಲಕ್ಸ್ ಮತ್ತು ಡಿಲಕ್ಸ್ ಬಸ್ ಗಳನ್ನ ಹೊರತುಪಡಿಸಿ ಎಲ್ಲಾ ಬಸ್ ಗಳಲ್ಲೂ ರಾಜ್ಯದ ಮಹಿಳೆಯರಿಗೆ ಪ್ರಯಾಣ ಉಚಿತವಿದೆ. ಆದರೆ, ಈ ಯೋಜನೆಯಲ್ಲಿ ಷರತ್ತೊಂದು ವಿಧಿಸಿದ್ದು, ಮಿರಜ್ ಮತ್ತು ಕೊಲ್ಲಾಪುರ ಸಾರಿಗೆಗಳನ್ನು ಹೊರತುಪಡಿಸಿ ಉಳಿದ ಯಾವುದೇ ಅಂತರರಾಜ್ಯ ಬಸ್ ಗಳಲ್ಲಿ ಮಹಿಳೆಯರಿಗೆ ಪ್ರಯಾಣ ಉಚಿತವಿಲ್ಲ. ಉತ್ತರಕನ್ನಡ, ಬೆಳಗಾವಿ ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳು ಗೋವಾ, ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಹೀಗಾಗಿ ಗಡಿ ಜಿಲ್ಲೆಗಳಿಗೆ ಬರುವ ಬಹುತೇಕ ಬಸ್ ಗಳು ಗಡಿ ರಾಜ್ಯಗಳ ಪ್ರಮುಖ ನಿಲ್ದಾಣಗಳಲ್ಲಿ ಕೊನೆಯ ನಿಲುಗಡೆಯನ್ನು ಹೊಂದಿವೆ. 'ಶಕ್ತಿ ಯೋಜನೆ'ಯ ಪ್ರಕಾರ ಇಂಥ ಬಸ್ ಗಳನ್ನು ಅಂತರರಾಜ್ಯ ಬಸ್ ಗಳೆಂದು ಪರಿಗಣಿಸಿದ್ದು, ಈ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾವಿಲ್ಲದಾಗಿದೆ. ಉತ್ತರಕನ್ನಡ, ಬೆಳಗಾವಿ ಭಾಗದಿಂದ ಹೆಚ್ಚಿನ ಜನರು ಉದ್ಯೋಗಕ್ಕಾಗಿ ಗಡಿ ರಾಜ್ಯಗಳಾದ ಗೋವಾ, ಮಹಾರಾಷ್ಟ್ರಕ್ಕೆ ತೆರಳುತ್ತಾರೆ. ಹೀಗೆ ತೆರಳುವವರು 'ಶಕ್ತಿ ಯೋಜನೆ'ಯಿಂದ ವಂಚಿತರಾಗುತ್ತಿದ್ದಾರೆ. ರಾಜ್ಯದ ಗಡಿಭಾಗದಲ್ಲಿ ನೆಲೆಸಿರುವ ಸಾವಿರಾರು ಹೆಣ್ಣುಮಕ್ಕಳು ಹಾಗೂ ಮಹಿಳೆಯರು ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಗೋವಾ ಹಾಗೂ ಮಹಾರಾಷ್ಟ್ರಕ್ಕೆ ತೆರಳುವುದರಿಂದ ಈ ಮಹಿಳೆಯರಿಗೂ ಯೋಜನೆಯ ಫಲಾನುಭವ ದೊರಕುವಂತೆ ಮಾಡಬೇಕಾದ ಹಿನ್ನೆಲೆ ಯೋಜನೆಯನ್ನು ಕೊಂಚ ಸಡಿಲಿಸಬೇಕೆಂದು ಜನರು ಆಗ್ರಹಿಸಿದ್ದಾರೆ.
'ಶಕ್ತಿ' ಯೋಜನೆಗೆ ಉತ್ತರ ಕರ್ನಾಟಕ ಆಟೋ ಚಾಲಕರ ಸಂಘ ವಿರೋಧ!
ಇನ್ನು ಯೋಜನೆ ಪ್ರಾರಂಭವಾಗಿ ಎರಡು ದಿನಗಳಾಗಿಲ್ಲ, ಆಗಲೇ ಬಸ್‌ಗಳ ಕೊರತೆ ಕಾಣಿಸಿಕೊಂಡಿದೆ. ರಿಕ್ಷಾ, ಟೊಂಪೋಗಳಲ್ಲಿ ತೆರಳುತ್ತಿದ್ದ ಜನರು ಇದೀಗ ಬಸ್‌ಗಳಲ್ಲಿ ಉಚಿತ ಸೇವೆಯಾಗಿರುವದರಿಂದ ಹೆಚ್ಚಿನ ಜನರು ಬಸ್‌ಗಳಲ್ಲೇ ಪ್ರಯಾಣ ಬೆಳೆಸಲಾರಂಭಿಸಿದ್ದಾರೆ. ಈ ಕಾರಣದಿಂದ ಎಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲೇ ಬಸ್‌ಗಳು ಜನರಿಂದ ಭರ್ತಿಯಾಗತೊಡಗಿವೆ. ವೃದ್ಧರು, ಅನಾರೋಗ್ಯ ಪೀಡಿತರಿಗೆ ಇದರಿಂದ ಸೀಟುಗಳು ದೊರಕದಂತಾಗಿದ್ದು, ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಎದುರಾಗುತ್ತಿದೆ. ಮಹಿಳೆಯೋರ್ವರಂತೂ ಒಂದು ಬಸ್‌ಗಾಗಿ ನಾಲ್ಕು ಗಂಟೆಗಳ ಕಾಲ ಕಾದು ಹೈರಾಣಾದ ಘಟನೆಯೂ ಕಾರವಾರದಲ್ಲಿ ನಡೆದಿದ್ದು, ಕೇವಲ ಯೋಜನೆ ನೀಡಿದರೆ ಸಾಲದು ಬಸ್ ವ್ಯವಸ್ಥರ ಕೂಡಾ ಮಾಡಿಕೊಡಬೇಕೆಂದು ಜನರು ಒತ್ತಾಯಿಸಿದ್ದಾರೆ. ಇನ್ನು ಈ ಸಂಬಂಧ ಪ್ರತಿಕ್ರಯಿಸಿರುವ ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಮಾಧ್ಯಮದವರನ್ನೇ ಪ್ರಶ್ನಿಸಿ ಹಾರಿಕೆ ಉತ್ತರ ನೀಡಿದ್ದಾರೆ.
ಬಸ್ ಕೊರತೆಯಾಗಲು ಬಿಜೆಪಿ ಕಾರಣವಾಗಿದ್ದು, ಅದನ್ನು ಕಾಂಗ್ರೆಸ್ ಸರಿಪಡಿಸುತ್ತೇವೆ. ಉಚಿತ ಸೇವೆಯನ್ನು ದೇಶದಾದ್ಯಂತ ಪ್ರಾರಂಭಿಸಲು ಮಾಧ್ಯಮದವರಿಗೆ ಹತ್ತಿರವಿರುವ ಬಿಜೆಪಿಯವರ ಮೂಲಕ ಮೋದಿಯವರಿಗೆ ಒತ್ತಡ ತನ್ನಿ ಎಂದು ವಿಷಯವನ್ನು ಅರ್ಥ ಮಾಡಿಕೊಳ್ಳದೆ ಬೇಜವಾಬ್ದಾರಿ ಉತ್ತರ ನೀಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಉಚಿತ ಬಸ್ ಸೇವೆಗೆ ಭರ್ಜರಿ ರೆಸ್ಪಾನ್ಸ್, 10ಸಾವಿರಕ್ಕೂ ಅಧಿಕ ಮಹಿಳೆಯರ ಪ್ರಯಾಣ
ಒಟ್ಟಿನಲ್ಲಿ ಸರಕಾರದ 'ಶಕ್ತಿ ಯೋಜನೆ' ಸಾಕಷ್ಟು ಮಹಿಳೆಯರು ವಂಚಿತರಾಗುತ್ತಿದ್ದು, ಗೋವಾ, ಮಹಾರಾಷ್ಟ್ರದತ್ತ ಶಿಕ್ಷಣ ಹಾಗೂ ಕೆಲಸಕ್ಕೆ ತೆರಳುವ ಹೆಣ್ಣುಮಕ್ಕಳು ಮತ್ತು ಮಹಿಳೆಯರಿಗೂ ಈ ಸೌಲಭ್ಯ ದೊರಕುವಂತಾಗಬೇಕಿದೆ. ಅಲ್ಲದೇ, ಹೆಚ್ಚಿನ ಬಸ್ ಸೌಲಭ್ಯ ಒದಗಿಸಿ ಜನರಿಗೆ ಪ್ರಯಾಣಕ್ಕೂ ಹೆಚ್ಚಿನ ವ್ಯವಸ್ಥೆಗಳನ್ನು ಕಲ್ಪಿಸಬೇಕಿದೆ.
ಭರತ್‌ರಾಜ್ ಕಲ್ಲಡ್ಕ ಜತೆ ಕ್ಯಾಮೆರಾಮ್ಯಾನ್ ಗಿರೀಶ್ ನಾಯ್ಕ್, ಏಷಿಯಾನೆಟ್ ಸುವರ್ಣ ನ್ಯೂಸ್ ಕಾರವಾರ