Asianet Suvarna News Asianet Suvarna News

Dr Kamala Hemmige: ಹಿರಿಯ ಲೇಖಕಿ, ಸಂಶೋಧಕಿ ಡಾ.ಕಮಲಾ ಹೆಮ್ಮಿಗೆ ನಿಧನ

ಹಿರಿಯ ಲೇಖಕಿ, ಸಂಶೋಧಕಿ ಡಾ. ಕಮಲಾ ಹೆಮ್ಮಿಗೆ (71) ಭಾನುವಾರ ಸಂಜೆ ನಿಧನರಾದರು. ಮೈಸೂರಿನ ಹೆಮ್ಮಿಗೆಯಲ್ಲಿ ಹುಟ್ಟಿದ ಅವರು ಧಾರವಾಡ ಮತ್ತು ಮಂಗಳೂರು ಆಕಾಶವಾಣಿಗಳಲ್ಲಿ ಕೆಲಸ ಮಾಡಿದ್ದರು. 

Senior author researcher Dr Kamala Hemmige passed away gvd
Author
First Published Sep 25, 2023, 7:23 AM IST

ಬೆಂಗಳೂರು (ಸೆ.25): ಹಿರಿಯ ಲೇಖಕಿ, ಸಂಶೋಧಕಿ ಡಾ. ಕಮಲಾ ಹೆಮ್ಮಿಗೆ (71) ಭಾನುವಾರ ಸಂಜೆ ನಿಧನರಾದರು. ಮೈಸೂರಿನ ಹೆಮ್ಮಿಗೆಯಲ್ಲಿ ಹುಟ್ಟಿದ ಅವರು ಧಾರವಾಡ ಮತ್ತು ಮಂಗಳೂರು ಆಕಾಶವಾಣಿಗಳಲ್ಲಿ ಕೆಲಸ ಮಾಡಿದ್ದರು. ತಿರುವನಂತಪುರ ಮತ್ತು ಬೆಂಗಳೂರು ದೂರದರ್ಶನದಲ್ಲಿ ಸೇವೆ ಸಲ್ಲಿಸಿದ್ದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಜಾನಪದದಲ್ಲಿ ಎಂಎ ಪದವಿ ಪಡೆದಿದ್ದ ಕಮಲಾ ಹೆಮ್ಮಿಗೆ, ಸವದತ್ತಿ ಎಲ್ಲಮ್ಮ ಮತ್ತು ದೇವದಾಸಿ ಪದ್ಧತಿಯ ಮೇಲೆ ಮಹಾಪ್ರಬಂಧ ರಚಿಸಿದ್ದರು.

ಪಲ್ಲವಿ, ವಿಷಕನ್ಯೆ, ಮುಂಜಾನೆ ಬಂದವನು, ನೀನೆ ನನ್ನ ಆಕಾಶ, ಮರ್ಮರ, ಕರುಳ ಸಂವಾದ ಕವನ ಸಂಕಲನ, ಬದುಕೆಂಬ ದಿವ್ಯ, ಆಖ್ಯಾನ, ಕಿಚ್ಚಿಲ್ಲದ ಬೇಗೆ ಕಾದಂಬರಿ ಹಾಗೂ ಮಾಘ ಮಾಸದ ದಿನ, ಬಿಸಿಲು ಮತ್ತು ಬೇವಿನ ಮರ, 'ನಾನು , ಅವನು ಮತ್ತು ಅವಳು', ಹನ್ನೊಂದು ಕಥೆಗಳು, ತ್ರಿಭಂಗಿ ಮುಂತಾದ ಕಥಾ ಸಂಕಲನವನ್ನು ಬರೆದಿದ್ದ ಹೆಮ್ಮಿಗೆ ಅನುವಾದಕರಾಗಿಯೂ ಹೆಸರಾಗಿದ್ದರು.

ಜ್ಞಾನಪೀಠ ಪುರಸ್ಕೃತ ಸೀತಾಕಾಂತ ಮಹಾಪಾತ್ರರ 'ಶಬ್ದಗರ್ಭಿತ ಆಕಾಶ' , ಶಶಿ ದೇಶಪಾಂಡೆಯವರ 'ಕತ್ತಲಲ್ಲಿ ಭಯವಿಲ್ಲ', ಮಲಯಾಳೀ ಲೇಖಕಿಯರ ಸಣ್ಣ ಕಥೆಗಳ ಅನುವಾದ 'ಮಾಯಾ ಕನ್ನಡಿ', ಮಲಯಾಳದ ಲೇಖಕಿಯರ ಕಥೆಗಳ ಸಂಕಲನ 'ಪೆಣ್' , ಗ್ರೇಸಿ ಅವರ ಮಲಯಾಳದ ಕಥೆಗಳ ಅನುವಾದ 'ಮೆಟ್ಟಿಲಿಳಿದು ಹೋದ‍ ಪಾರ್ವತಿ' , ಮಲಯಾಳಂ ಕತೆಗಳ ಸಂಕಲನ 'ಕೇರಳದ ಕಾಂತಾಸಮ್ಮಿತ', ಅವರ ಪ್ರಮುಖ ಅನುವಾದಗಳು.

ಇಂದು ರಾಜ್ಯಾದ್ಯಂತ ಏಕಕಾಲಕ್ಕೆ ಸಚಿವರ ಜನತಾದರ್ಶನ: ಸಾರ್ವಜನಿಕರ ಅಲೆದಾಟ ತಪ್ಪಿಸುವ ಕಾರ್ಯಕ್ರಮ

ಕಮಲಾ ಹೆಮ್ಮಿಗೆ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೆ.ಎಸ್.ಎನ್. ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಂತಾರಾಷ್ಟ್ರೀಯ ಮಹಿಳಾ ವರ್ಷದ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ರಾಜ್ಯ ಸರ್ಕಾರದ ಕಿತ್ತೂರು ಚೆನ್ನಮ್ಮ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಾಹಿತ್ಯಶ್ರೀ ಪ್ರಶಸ್ತಿ, ಮಾಸ್ತಿ ಕಾದಂಬರಿ ಪುರಸ್ಕಾರ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.

Follow Us:
Download App:
  • android
  • ios