ಬೆಂಗಳೂರು(ಜು.14): ನಾಲ್ಕು ದಿನದ ಹಿಂದೆ ಬೆಳ್ಳಂದೂರಿನ ಕರಿಯಮ್ಮನ ಅಗ್ರಹಾರದ ಮಂತ್ರಿ ಎಸ್ಪಾನ್‌ ಅರ್ಪಾಟ್‌ಮೆಂಟ್‌ ಹಿಂಭಾಗದ ರಾಜಕಾಲುವೆ ಬಿದ್ದು ಕೊಚ್ಚಿ ಹೋಗಿದ್ದ ಆರು ವರ್ಷದ ಬಾಲಕಿ ಪತ್ತೆಗಾಗಿ ಕೈಗೊಂಡಿದ್ದ ಕಾರ್ಯಾಚರಣೆಯನ್ನು ಸೋಮವಾರ ಸ್ಥಗಿತಗೊಳಿಸಲಾಗಿದೆ.

ಕಳೆದ ಶುಕ್ರವಾರ(ಜು.10) ಬೆಳಗ್ಗೆ 11.30ರ ಸುಮಾರಿಗೆ ಆಟವಾಡುವಾಗ ಆಯ ತಪ್ಪಿ ರಾಜಕಾಲುವೆಗೆ ಬಿದ್ದಿದ್ದ ಅಸ್ಸಾಂ ಮೂಲದ ಭೂಮಿಕಾ ಕುಳಿಗಾಗಿ ಶೋಧ ಕಾರ್ಯ ಕೈಗೊಳ್ಳಲಾಗಿತ್ತು. ರಾಜಕಾಲುವೆಯಲ್ಲಿ ಸುಮಾರು 80 ತಾಸಿನ ಕಾರ್ಯಾಚರಣೆ ಬಳಿಕವೂ ಬಾಲಕಿ ಮೃತದೇಹ ಕುರಿತ ಸಣ್ಣ ಸುಳಿವೂ ಸಿಗದ ಹಿನ್ನೆಲೆಯಲ್ಲಿ ಸೋಮವಾರ ಸಂಜೆ 7ಕ್ಕೆ ಪತ್ತೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.

ಕುತೂಹಲಕ್ಕಾಗಿ ಟೆಸ್ಟ್‌ ಮಾಡಿಸಿದ ಮಾಜಿ ಮೇಯರ್‌ ಕಟ್ಟೆ ಸತ್ಯನಾರಾಯಣಗೆ ಕೊರೋನಾ..!

ಬಾಲಕಿ ಬಿದ್ದ ಜಾಗದಿಂದ ಸುಮಾರು 8 ಕಿ.ಮೀ. ವರೆಗೂ ಶೋಧಿಸಿದರೂ ಬಾಲಕಿ ಪತ್ತೆಯಾಗಿಲ್ಲ. ಬಾಲಕಿ ದೇಹ ನೀರಿನಲ್ಲಿ ಮುಳುಗಿದ್ದರೂ ಮೂರು ದಿನದ ಬಳಿಕ ತೇಲುವ ನಿರೀಕ್ಷೆ ಹುಸಿಯಾಯಿತು. ಆದರೂ ಹೂಳು, ತ್ಯಾಜ್ಯ ಹಾಗೂ ಕೊಳಚೆ ನೀರು ತುಂಬಿರುವ ರಾಜಕಾಲುವೆಯಲ್ಲಿ ಬಾಲಕಿ ಮೃತದೇಹ ಪತ್ತೆಗೆ ಸರ್ವ ಪ್ರಯತ್ನ ನಡೆಸಿ, ಇದೀಗ ಶೋಧ ಕಾರ್ಯ ಕೈಬಿಡಲಾಗಿದೆ.

ನಾಪತ್ತೆ ಪ್ರಕರಣ:

ಪೊಲೀಸರು ಬಾಲಕಿ ಆಯತಪ್ಪಿ ಕಾಲುವೆಗೆ ಬಿದ್ದು ನಾಪತ್ತೆಯಾಗಿರುವ ಬಗ್ಗೆ ಎಫ್‌ಐಆರ್‌ ದಾಖಲಿಸಿ, ಮೃತದೇಹ ಪತ್ತೆಗೆ ಕಾರ್ಯಾಚರಣೆ ಕೈಗೊಳ್ಳಲಿದ್ದಾರೆ. ಈ ಪ್ರಕರಣ ಸಂಬಂಧ ಈಗಾಗಲೇ ಎರಡು ಎಫ್‌ಐಆರ್‌ ದಾಖಲಾಗಿದೆ. ರಾಜಕಾಲುವೆಗೆ ಅಳವಡಿಸಿದ್ದ ತಂತಿ ಬೇಲಿ ಕತ್ತರಿಸಿರುವುದು ಮತ್ತು ರಾಜಕಾಲುವೆ ಬಫರ್‌ ಜೋನ್‌ನಲ್ಲಿ ಅಕ್ರಮವಾಗಿ ಶೆಡ್‌ ನಿರ್ಮಿಸಿದ ಮಾಲೀಕ ಹಾಗೂ ಮಗುವನ್ನು ರಾಜಕಾಲುವೆ ಬಳಿ ಬಿಟ್ಟ ಪೋಷಕರ ವಿರುದ್ಧವೂ ಎಫ್‌ಐಆರ್‌ ದಾಖಲಿಸಲಾಗಿದೆ.