ಕೋವಿಡ್ ಸಂಕಷ್ಟದಿಂದ ಕಳೆದೆರಡು ವರ್ಷಗಳಲ್ಲಿ ಶಾಲಾ ಮಕ್ಕಳಿಗೆ ಕಲಿಕೆಯಲ್ಲಿ ಆಗಿರುವ ಕೊರತೆಯನ್ನು ಸರಿದೂಗಿಸಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 2022-23ನೇ ಶೈಕ್ಷಣಿಕ ಸಾಲಿನಲ್ಲಿ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ‘ಕಲಿಕೆ ಚೇತರಿಕೆ’ ಎಂಬ ವಿಶೇಷ ಕಾರ್ಯಕ್ರಮ ರೂಪಿಸಲು ಮಂದಾಗಿದೆ.
ಲಿಂಗರಾಜು ಕೋರಾ
ಬೆಂಗಳೂರು (ಫೆ.14): ಕೋವಿಡ್ (Covid19) ಸಂಕಷ್ಟದಿಂದ ಕಳೆದೆರಡು ವರ್ಷಗಳಲ್ಲಿ ಶಾಲಾ ಮಕ್ಕಳಿಗೆ (School Childrens) ಕಲಿಕೆಯಲ್ಲಿ ಆಗಿರುವ ಕೊರತೆಯನ್ನು ಸರಿದೂಗಿಸಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 2022-23ನೇ ಶೈಕ್ಷಣಿಕ ಸಾಲಿನಲ್ಲಿ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ‘ಕಲಿಕೆ ಚೇತರಿಕೆ’ ಎಂಬ ವಿಶೇಷ ಕಾರ್ಯಕ್ರಮ ರೂಪಿಸಲು ಮಂದಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಈ ವಿಶೇಷ ಕಾರ್ಯಕ್ರಮ ರೂಪಿಸುತ್ತಿರುವ ಶಿಕ್ಷಣ ಇಲಾಖೆ ನಿಗದಿಗಿಂತ ಹದಿನೈದು ದಿನ ಮೊದಲೇ ಮುಂದಿನ ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.
ಕೋವಿಡ್‌ನಿಂದಾಗಿ ಕಳೆದ ಎರಡು ವರ್ಷಗಳಲ್ಲಿ ಸಮರ್ಪಕವಾಗಿ ತರಗತಿ ಬೋಧನಾ ಚಟುವಟಿಕೆಗಳು ನಡೆದಿಲ್ಲ. 2020-21ರಲ್ಲಿ ಶಾಲೆಗಳೇ ಆರಂಭವಾಗದೆ ಬಹುತೇಕ ವಿದ್ಯಾಗಮ, ಆನ್‌ಲೈನ್ ತರಗತಿ ಮೂಲಕ ತಕ್ಕಷ್ಟುಪಠ್ಯ ಬೋಧನೆ ನಡೆಸಲಾಗಿದೆ. ಆದರೆ, ಯಾವುದೇ ಪರೀಕ್ಷೆಗಳಿಲ್ಲದೆ 1ರಿಂದ 9ನೇ ತರಗತಿ ಮಕ್ಕಳನ್ನು ಮುಂದಿನ ತರಗತಿಗೆ ಬಡ್ತಿ ನೀಡಲಾಗಿದೆ. ಪ್ರಸಕ್ತ 2021-22ನೇ ಸಾಲಿನಲ್ಲಿ ಕೆಲ ತಿಂಗಳಿಂದ ಈಚೆಗೆ ಭೌತಿಕ ತರತಿಗಳು ನಡೆದಿವೆ.
ಆದರೂ ಕೋವಿಡ್ ಪೂರ್ವ ವರ್ಷಕ್ಕೆ ಹೋಲಿಸಿದರೆ ಸಮರ್ಪಕ ರೀತಿಯಲ್ಲಿ ತರಗತಿ ಚಟುವಟಿಕೆಗಳು ನಡೆದಿಲ್ಲ. ಅದರಲ್ಲೂ ಸರ್ಕಾರಿ ಶಾಲಾ ಮಕ್ಕಳಿಗಂತೂ ಆನ್‌ಲೈನ್ ಶಿಕ್ಷಣವೂ ಇಲ್ಲ, ಮೊಬೈಲ್, ನೆಟ್‌ವರ್ಕ್, ಇಂಟರ್ನೆಟ್ ಮತ್ತಿತರ ತಾಂತ್ರಿಕ ಉಪಕರಣಗಳ ಕೊರತೆಯಿಂದ ಟೀವಿ, ರೇಡಿಯೋ ಪಾಠಗಳೂ ಕೂಡ ಸರಿಯಾಗಿ ತಲುಪಿಲ್ಲ. ಹೀಗಾಗಿ ಈ ವಿದ್ಯಾರ್ಥಿಗಳು ಸಾಕಷ್ಟುಕಲಿಕಾ ಕೊರತೆ ಎದುರಿಸುತ್ತಿದ್ದಾರೆ. ಅಥವಾ ಕಲಿಕೆಯಲ್ಲಿ ಹಿಂದುಳಿದಂತಾಗಿದೆ.
ತರಗತಿಯಲ್ಲಿ ವಿವಾದ ಸೃಷ್ಟಿಸಿದ ಶಿಕ್ಷಕಿಯನ್ನು ಅಮಾನತು ಮಾಡಿದ ಶಾಲಾ ಮಂಡಳಿ
ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಮಕ್ಕಳನ್ನು ಮುಂದಿನ ಶೈಕ್ಷಣಿಕ ವರ್ಷದ ತರಗತಿಗೆ ಸಮರ್ಥರನ್ನಾಗಿಸಲು ವಿಶೇಷ ಕಲಿಕಾ ತರಗತಿಗಳನ್ನು ನಡೆಸಲು ಶಿಕ್ಷಣ ಇಲಾಖೆ ‘ಕಲಿಕೆ ಚೇತರಿಕೆ’ ಎಂಬ ವಿಶೇಷ ಕಾರ್ಯಕ್ರಮಕ್ಕೆ ಅಣಿಯಾಗುತ್ತಿದೆ. ಈ ಸಂಬಂಧ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಕಳೆದ ಎರಡು ವರ್ಷಗಳಲ್ಲಿ ಶಾಲೆಗಳು ಸರಿಯಾಗಿ ನಡೆಯದೆ ವಂಚಿತರಾಗಿರುವ ಬೋಧನೆಯನ್ನು ಮಕ್ಕಳಿಗೆ ಹೇಗೆ ಕಲಿಸುವುದು? ಅದರ ಮೌಲ್ಯಮಾಪನ ಹೇಗೆ ಮಾಡುವುದು ಎಂಬ ಬಗ್ಗೆ ಶಿಕ್ಷಕರಿಗೂ ವಿಶೇಷ ಕೈಪಿಡಿ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕೇಂದ್ರದ ಮಾರ್ಗಸೂಚಿ: ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಸಚಿವ ಬಿ.ಸಿ.ನಾಗೇಶ್ ಅವರ ನಿರ್ದೇಶನದ ಮೇಲೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಆಯುಕ್ತ ವಿಶಾಲ್ ಅವರ ನೇತೃತ್ವದಲ್ಲಿ ಅಧಿಕಾರಿಗಳು ‘ಕಲಿಕೆ ಚೇತರಿಕೆ’ ಕಾರ್ಯಕ್ರಮದ ರೂಪರೇಷೆ ಸಿದ್ಧಪಡಿಸುತ್ತಿದ್ದಾರೆ.
ಏನಿದು ಕಲಿಕೆ ಚೇತರಿಕೆ?: ‘ಕಲಿಕೆ ಚೇತರಿಕೆ’ ಮೂಲಕ ಮೊದಲ ಮೂರು ತಿಂಗಳು ವಿಶೇಷವಾಗಿ ಅಕ್ಷರಾಭ್ಯಾಸದ ಬುನಾದಿ, ಸಂಖ್ಯಾಜ್ಞಾನ ಮತ್ತು ಮೂಲ ಗಣಿತ ವಿಷಯಗಳ ಕಲಿಕಾ ತರಗತಿಗೆ ಒತ್ತು ನೀಡಲಾಗುವುದು. ನಂತರದ ಮೂರು ತಿಂಗಳು ಕೋವಿಡ್ ವರ್ಷದಲ್ಲಿನ ತರಗತಿಗಳಿಗೆ ಸಂಬಂಧಿಸಿದ ಪಠ್ಯ ಬೋಧನೆ ಆಧಾರಿತ ಕಲಿಕಾ ಚಟುವಟಿಕೆ ನಡೆಸಲಾಗುವುದು. ನಂತರದ ನಾಲ್ಕು ತಿಂಗಳು ಆ ವರ್ಷದ ಶೈಕ್ಷಣಿಕ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುತ್ತದೆ. ಮೊದಲ ಆರು ತಿಂಗಳು ಸಂಬಂಧಪಟ್ಟವರ್ಷದ ತರಗತಿಯ ಶೈಕ್ಷಣಿಕ ಚಟುವಟಿಕೆಗಳ ಜತೆಗೆ ವಿಶೇಷ ತರಗತಿಗಳನ್ನು ನಡೆಸಲಾಗುತ್ತದೆ. ಇದಕ್ಕೆ ಸಮಯಾವಕಾಶ ಹೇಗೆ ಹೊಂದಿಸುವುದು ಎಂಬ ಬಗ್ಗೆ ರೂಪರೇಷೆ ಸಿದ್ಧತೆ ನಡೆಯುತ್ತಿದೆ ಎಂದು ಶಿಕ್ಷಣ ಸಚಿವ ನಾಗೇಶ್ ತಿಳಿಸಿದ್ದಾರೆ.
ಸರ್ಕಾರಿ ಶಾಲೆ ಅಭಿವೃದ್ಧಿಗೆ ‘ನಮ್ಮ ಶಾಲೆ, ನನ್ನ ಕೊಡುಗೆ’ ಆ್ಯಪ್: ಸಚಿವ ನಾಗೇಶ್
3 ಹಂತದಲ್ಲಿ ಕಲಿಕೆ ಸಾಮರ್ಥ್ಯ ವೃದ್ಧಿ: ಕಳೆದ ಎರಡು ವರ್ಷದಲ್ಲಿ ಮಕ್ಕಳಿಗೆ ಕಲಿಕೆಯಲ್ಲಾಗಿರುವ ಕೊರತೆಯನ್ನು ಸರಿದೂಗಿಸಲು ‘ಕಲಿಕೆ ಚೇತರಿಕೆ’ ಒಂದು ಒಳ್ಳೆಯ ಪ್ರಯತ್ನವಾಗಲಿದೆ ಎಂದು ಭಾವಿಸಿದ್ದೇವೆ. ನಮ್ಮ ಅಧಿಕಾರಿಗಳು ಇದರ ರೂಪರೇಷೆ ತಯಾರಿಸುತ್ತಿದ್ದಾರೆ. 2022-23ನೇ ಸಾಲಿನಲ್ಲಿ ಮೂರು ಹಂತದಲ್ಲಿ ಈ ವಿಶೇಷ ಕಾರ್ಯಕ್ರಮ ನಡೆಸಿ 1ರಿಂದ 10ನೇ ತರಗತಿ ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿಸಲಾಗುವುದು.
- ಬಿ.ಸಿ.ನಾಗೇಶ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ
