ವೆಂಕಟೇಶ್‌ ಕಲಿಪಿ

ಬೆಂಗಳೂರು(ಜೂ.11): ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಕೆಲ ಜಮೀನುಗಳ ವರ್ಗಾವಣೆ ನಿಷೇಧ) ಕಾಯ್ದೆ-1978 ಅಡಿಯಲ್ಲಿ ಸರ್ಕಾರದಿಂದ ಮಂಜೂರಾದ ಜಮೀನಿನ ವರ್ಗಾವಣೆ, ಮಾರಾಟ ಮತ್ತು ಸ್ವಾಧೀನಕ್ಕೆ ಮೂಲ ಮಂಜೂರುದಾರ ಅಥವಾ ಅವರ ಕಾನೂನಾತ್ಮಕ ವಾರಸುದಾರ ಸಲ್ಲಿಸಿದ ಅರ್ಜಿಯನ್ನು ಮಾತ್ರ ಪರಿಗಣಿಸಬೇಕು ಎಂದು ಹೈಕೋರ್ಟ್‌ ಆದೇಶಿಸಿದೆ.

ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ 82 ವರ್ಷಗಳ ಹಿಂದೆ ನಡೆಸಿದ್ದ ಭೂ ಮಂಜೂರಾತಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಆರ್‌. ದೇವದಾಸ್‌ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ. ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಕೆಲ ಜಮೀನುಗಳ ವರ್ಗಾವಣೆ ನಿಷೇಧ) ಕಾಯ್ದೆ-1978ರ ಸೆಕ್ಷನ್‌ 4(2)ರ ಪ್ರಕಾರ, ಸರ್ಕಾರದಿಂದ ಮಂಜೂರಾದ ಜಮೀನನ್ನು ರಾಜ್ಯ ಸರ್ಕಾರದ ಪೂರ್ವಾನುಮತಿ ಇಲ್ಲದೆ ವರ್ಗಾವಣೆ, ಮಾರಾಟ ಮತ್ತು ಸ್ವಾಧೀನ ಮಾಡಿಕೊಳ್ಳುವಂತಿಲ್ಲ. ಒಂದೊಮ್ಮೆ ವರ್ಗಾವಣೆ, ಮಾರಾಟ ಮತ್ತು ಸ್ವಾಧೀನಕ್ಕೆ ಅನುಮತಿ ಕೋರಿ ಈ ಸೆಕ್ಷನ್‌ 4(2)ರ ಅಡಿಯಲ್ಲಿ ಅರ್ಜಿ ಸಲ್ಲಿಕೆಯಾದ ಸಂದರ್ಭದಲ್ಲಿ ಮೂಲ ಮಂಜೂರುದಾರರು ಅಥವಾ ಅವರ ಕಾನೂನಾತ್ಮಕ ವಾರಸುದಾರರು ಅರ್ಜಿ ಸಲ್ಲಿಸಿದ್ದಾರೋ ಅಥವಾ ಇಲ್ಲವೋ ಎಂಬುದನ್ನು ಸರ್ಕಾರ ಮೊದಲು ಪರಿಶೀಲಿಸಬೇಕು ಎಂದು ಆದೇಶಿಸಿದೆ.

ಅಲ್ಲದೆ, ಸೆಕ್ಷನ್‌ 4(2)ರ ಅಡಿಯಲ್ಲಿ ಮೂಲ ಮಂಜೂರುದಾರ ಅಥವಾ ಕಾನೂನಾತ್ಮಕ ವಾರಸುದಾರ ಸಲ್ಲಿಸಿದರೆ ಮಾತ್ರ ಪರಿಗಣಿಸಬೇಕು. ಅರ್ಜಿ ಸಲ್ಲಿಸಿದವರನ್ನು ಕರೆದು ವಾಸ್ತವಾಂಶ ಪರಿಶೀಲಿಸಬೇಕು. ಅರ್ಜಿ ಸಲ್ಲಿಕೆಯಾದ ಸಂದರ್ಭದಲ್ಲಿ ಮೂಲ ಮಂಜೂರುದಾರ ಅಥವಾ ಆತನ ಕಾನೂನಾತ್ಮಕ ವಾರಸುದಾರರನ್ನು ಸಂಬಂಧಪಟ್ಟ ಅಧಿಕಾರಿಯು ಖುದ್ದಾಗಿ ಕರೆಯಬೇಕು. ಆತನ ಕ್ಲೇಮಿನ ವಾಸ್ತವತೆ ಮತ್ತು ನಿಖರತೆಯ ಪರೀಕ್ಷೆ ನಡೆಸಬೇಕು ಎಂದು ನ್ಯಾಯಪೀಠ ಆದೇಶಿಸಿದೆ.

ರೋಹಿಣಿ ಸಿಂಧೂರಿ ನಿಯೋಜನೆ ರದ್ದು ಕೋರಿ ಹೈಕೋರ್ಟ್‌ಗೆ ಶರತ್‌ ಅರ್ಜಿ

ಒಂದೊಮ್ಮೆ ಪೂರ್ವಾನುಮತಿ ಮಂಜೂರು ಮಾಡಿದರೆ, ಹಣ ಪಾವತಿ ಚೆಕ್‌ ಅಥವಾ ಡಿಮ್ಯಾಂಡ್‌ ಡ್ರಾಫ್ಟ್‌ ಮೂಲಕವೇ ಮಾಡಬೇಕು ಎಂದು ಷರತ್ತು ವಿಧಿಸಬೇಕು. ಇದು ಹಣಕಾಸು ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಸಹಕಾರಿಯಾಗುತ್ತದೆ. ಈ ಸಂಬಂಧ ರಾಜ್ಯ ಸರ್ಕಾರವು ಅಗತ್ಯ ಆದೇಶ ಅಥವಾ ಸುತ್ತೋಲೆ ಹೊರಡಿಸಿ ನ್ಯಾಯಾಲಯಕ್ಕೆ ಎಂಟು ವಾರಗಳಲ್ಲಿ ಸಲ್ಲಿಸಬೇಕು ಎಂದು ನ್ಯಾಯಪೀಠ ಆದೇಶಿಸಿದೆ.

ಪ್ರಕರಣದ ವಿವರ:

ಬೆಂಗಳೂರು ದಕ್ಷಿಣ ತಾಲೂಕಿನ ವರ್ತೂರು ಹೋಬಳಿಯ ರಾಮಗೊಂಡನಹಳ್ಳಿ ಗ್ರಾಮದ ಸರ್ವೇ ನಂಬರ್‌ 114ರಲ್ಲಿ 2 ಎಕರೆ 4 ಗುಂಟೆ ಜಮೀನನ್ನು 20 ವರ್ಷ ಯಾರಿಗೂ ಹಸ್ತಾಂತರ ಮಾಡಬಾರದು ಎಂಬ ಷರತ್ತಿನೊಂದಿಗೆ ಪೂಜಿಗ ಎಂಬುವರಿಗೆ 1939ರಲ್ಲಿ ಸ್ಥಳೀಯ ವಲಯಾಧಿಕಾರಿ ಮಂಜೂರು ಮಾಡಿದ್ದರು. ಆದರೆ ಪೂಜಿಗ 1951ರ ಸೆ.24ರಂದು ಗೋವಿಂದಪ್ಪ ಎಂಬುವರಿಗೆ ಮಾರಾಟ ಮಾಡಿದ್ದರು. ತದನಂತರ ಮೂವರಿಗೆ ಈ ಜಮೀನು ಬದಲಾವಣೆಯಾಗಿ ಕೊನೆಯದಾಗಿ 1980ರ ನ.17ರಂದು ಈ ಜಮೀನನ್ನು ಎನ್‌.ರವಿಕಿರಣ್‌ ಮತ್ತು ಎನ್‌.ಕುಮಾರ್‌ ಅವರು ಖರೀದಿಸಿದ್ದರು.

ಪೂಜಿಗ ಅವರು ತದನಂತರ ಉಪವಿಭಾಗಾಧಿಕಾರಿಯ ಮುಂದೆ ಕಾಯ್ದೆ ಸೆಕ್ಷನ್‌ 4 ಮತ್ತು 5ರ ಪ್ರಕಾರ ಅರ್ಜಿ ಸಲ್ಲಿಸಿ ಈ ಜಮೀನನ್ನು ತಮ್ಮ ಸ್ವಾಧೀನಕ್ಕೆ ನೀಡಲು ಕೋರಿದ್ದರು. ಅದರಂತೆ 1983ರ ಡಿ.31ರಂದು ಪೂಜಿಗ ಅವರ ಅರ್ಜಿ ಪುರಸ್ಕರಿಸಿ, ಮೊದಲ ಮಾರಾಟ ಪ್ರಕ್ರಿಯೆ ಸೇರಿದಂತೆ ಎಲ್ಲವೂ ಕಾನೂನು ಬಾಹಿರ ಎಂದು ಘೋಷಿಸಿ 1985ರ ಸೆ.11ರಂದು ಪೂಜಿಗ ಹೆಸರಿಗೆ ಜಮೀನನ್ನು ಪುನರ್‌ಸ್ಥಾಪಿಸಲಾಯಿತು. 1988ರಲ್ಲಿ ಪೂಜಿಗ ಸಾವನ್ನಪ್ಪಿದರು.

ಈ ಆದೇಶ ಪ್ರಶ್ನಿಸಿ ಎನ್‌.ಕುಮಾರ್‌ ಮತ್ತು ರವಿಕಿರಣ್‌ ಹಲವು ಹಂತದಲ್ಲಿ ಕಾನೂನು ಹೋರಾಟ ನಡೆಸಿದ್ದರೂ ಸೋಲು ಅನುಭವಿಸಿದರು. ಈ ಮಧ್ಯೆ ಪೂಜಿಗ ಅವರ ಪತ್ನಿ ತಮ್ಮ ದತ್ತುಪುತ್ರ ವೆಂಕಟೇಶ್‌ಗೆ ಈ ಜಮೀನಿನ ವಿಲ್‌ ಬರೆದಿದ್ದರು. ವೆಂಕಟೇಶ್‌ ಅವರು ಪಿ.ಶ್ರೀನಿವಾಸ್‌ ಎಂಬುವರಿಗೆ ಜಿಪಿಓ ನೀಡಿದ್ದರು. ಅವರು 2008ರ ಮಾ.24ರಲ್ಲಿ ಜಮೀನನ್ನು ಎ.ವಿಜಯ್‌ ಕುಮಾರ್‌ ಎಂಬುವರಿಗೆ ಮಾರಾಟ ಮಾಡಿದ್ದರು. ಆದರೆ, ವೆಂಕಟೇಶ್‌ ಪೂಜಿಗ ದಂಪತಿಯ ಕಾನೂನಾತ್ಮಕ ವಾರಸುದಾರ ಅಲ್ಲ ಎಂದು ಸಿವಿಲ್‌ ನ್ಯಾಯಾಲಯ ಘೋಷಿಸಿತ್ತು.