ಸರಳವಾಸ್ತು ಗುರೂಜಿ ಸಹಸ್ರಾರು ಕೋಟಿ ಒಡೆಯ: ಸಿಂಗಾಪುರಕ್ಕೆ ತೆರಳಿ ವಾಸ್ತುಶಾಸ್ತ್ರಜ್ಞರಾದರು
ಮೂಲತಃ ಬಾಗಲಕೋಟೆಯವರಾದ ಡಾ.ಚಂದ್ರಶೇಖರ ಅಂಗಡಿ ನಾಡಿನಾದ್ಯಂತ ಸರಳ ವಾಸ್ತು ಹೆಸರಿನಲ್ಲಿ ‘ಚಂದ್ರಶೇಖರ ಗುರೂಜಿ’, ‘ಮಾನವ ಗುರು’ ಎಂದೇ ಖ್ಯಾತರಾದವರು. ಸೈನ್ಯ ಸೇರಲು ನಿರ್ಧರಿಸಿದ್ದ ಅವರು ವಾಸ್ತುಶಾಸ್ತ್ರದ ಕಡೆ ಹೊರಳಿದ್ದು ವಿಶೇಷ.
ಬಾಗಲಕೋಟೆ/ಹುಬ್ಬಳ್ಳಿ (ಜು.06): ಮೂಲತಃ ಬಾಗಲಕೋಟೆಯವರಾದ ಡಾ.ಚಂದ್ರಶೇಖರ ಅಂಗಡಿ ನಾಡಿನಾದ್ಯಂತ ಸರಳ ವಾಸ್ತು ಹೆಸರಿನಲ್ಲಿ ‘ಚಂದ್ರಶೇಖರ ಗುರೂಜಿ’, ‘ಮಾನವ ಗುರು’ ಎಂದೇ ಖ್ಯಾತರಾದವರು. ಸೈನ್ಯ ಸೇರಲು ನಿರ್ಧರಿಸಿದ್ದ ಅವರು ವಾಸ್ತುಶಾಸ್ತ್ರದ ಕಡೆ ಹೊರಳಿದ್ದು ವಿಶೇಷ. ಮಧ್ಯಮವರ್ಗದ ಕುಟುಂಬದಿಂದ ಬಂದ ಗುರೂಜಿ ಸಾವಿರಾರು ಕೋಟಿ ರು. ಒಡೆಯ ಆಗಿದ್ದು ಕೂಡ ದೊಡ್ಡ ಯಶೋಗಾಥೆಯೇ ಸರಿ.
ಬಾಗಲಕೋಟೆಯ ಮೋಟಗಿ ಗಲ್ಲಿಯ ವಿರೂಪಾಕ್ಷಪ್ಪ ಹಾಗೂ ನೀಲಮ್ಮ ಅಂಗಡಿ ದಂಪತಿಯ ಪುತ್ರ ಇವರು. ತೆಂಗಿನಕಾಯಿ ವ್ಯಾಪಾರಸ್ಥರಾದ ಅವರ ತಂದೆ ಪ್ರತಿಷ್ಠಿತ ಬಸವೇಶ್ವರ ವಿದ್ಯಾವರ್ಧಕ ಸಂಘ(ಬಿವಿವಿ) ಸಂಘದ ಸದಸ್ಯರೂ ಆಗಿದ್ದರು. ಹಾಗಾಗಿ ಚಂದ್ರಶೇಖರ ಅವರು ಬಿವಿವಿ ಸಂಘದ ಬಸವೇಶ್ವರ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪಿಯುಸಿ ಕಾಲೇಜುಗಳಲ್ಲಿ ಅಧ್ಯಯನ ಮಾಡಿದ್ದರು. ಅದೇ ಸಂಸ್ಥೆಯ ಕಾಲೇಜಲ್ಲೇ ಬಿಇ ಸಿವಿಲ್ ಎಂಜಿನಿಯರಿಂಗ್ ಪದವಿಯನ್ನೂ ಪಡೆದಿದ್ದರು.
Chandrashekhar Guruji Murder: ಗುರೂಜಿ ಹಂತಕರನ್ನು ಬಂಧಿಸಿದ ಹುಬ್ಬಳ್ಳಿ ಪೊಲೀಸರು
ವಿದ್ಯಾಭ್ಯಾಸದ ಬಳಿಕ 1986ರಲ್ಲಿ ಬಾಗಲಕೋಟೆ ಬಿಟ್ಟು ಮಹಾರಾಷ್ಟ್ರದ ಪುಣೆ ಸೇರಿದ ಮೇಲೆ ಚಂದ್ರಶೇಖರ ಅಂಗಡಿ ಹಿಂದಿರುಗಿ ನೋಡಲೇ ಇಲ್ಲ. ಆರಂಭಿಕ ಹಂತದಲ್ಲಿ ಬೇರೊಬ್ಬರ ಬಳಿ ಸಣ್ಣಪುಟ್ಟಗುತ್ತಿಗೆ ಕೆಲಸ ಮಾಡಿದರು. ನಂತರ ಹಲವಾರು ತೊಂದರೆಗಳ ನಡುವೆ ಸ್ವಂತದ್ದಾದ ಗುತ್ತಿಗೆ ಸಂಸ್ಥೆ ಆರಂಭಿಸಿ ಹಲವಾರು ಕಟ್ಟಡಗಳನ್ನು ನಿರ್ಮಿಸುವ ಜೊತೆಗೆ ತಮ್ಮ ಹತ್ತಾರು ಸಹಪಾಠಿಗಳಿಗೂ ಉದ್ಯೋಗ ನೀಡುವ ಮೂಲಕ ನೆರವಾಗಿದ್ದರು.
ಕೈಹಿಡಿದ ಸರಳವಾಸ್ತು: 1995-96ರವರೆಗೆ ಮಹಾರಾಷ್ಟ್ರದಲ್ಲಿ ಗುತ್ತಿಗೆದಾರರಾಗಿ ಕಾರ್ಯನಿರ್ವಹಿಸಿದ್ದ ಚಂದ್ರಶೇಖರ ಅಂಗಡಿಯವರು ಪುಣೆ ಮತ್ತು ಮುಂಬೈನಲ್ಲಿ ಹಲವು ಕಟ್ಟಡಗಳನ್ನು ನಿರ್ಮಿಸಿದರು. ಸಿಂಗಾಪುರಕ್ಕೆ ತೆರಳಿ, ಅಲ್ಲಿ ಚೈನೀಸ್ ವಾಸ್ತುವಿನ ಒಳಹೊರಗಳನ್ನು ಅಭ್ಯಸಿಸಿದರು. ನಂತರ ಭಾರತದ ಸಾಂಪ್ರದಾಯಿಕ ವಾಸ್ತುಶಾಸ್ತ್ರಕ್ಕೆ ತಕ್ಕಂತೆ ಅದನ್ನು ಒಗ್ಗಿಸಿಕೊಂಡು ಸರಳವಾಸ್ತು ಎಂಬ ಪರಿಕಲ್ಪನೆಯನ್ನು ಅನುಷ್ಠಾನಕ್ಕೆ ತಂದು 1996ರಲ್ಲಿ ಅದೇ ಹೆಸರಿನ ಸಂಸ್ಥೆ ಸ್ಥಾಪಿಸಿದರು. ಇದು ಅವರ ಬದುಕಿನ ದಿಕ್ಕನ್ನೇ ಬದಲಿಸಿತು. ಜೊತೆಗೆ ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಮೊದಲಾದೆಡೆಗಳಲ್ಲೂ ಸಾವಿರಾರು ಮಂದಿಗೆ ಉದ್ಯೋಗವನ್ನು ನೀಡಿತು.
ಮೊದಲು ಮುಂಬೈನಲ್ಲಿ ಸರಳವಾಸ್ತು ಕೇಂದ್ರ ಆರಂಭಿಸಿದ್ದ ಚಂದ್ರಶೇಖರ ಅಂಗಡಿ ನಂತರ ತಮ್ಮ ವಾಸ್ತುಪ್ರಚಾರಕ್ಕಾಗಿ ಬೆಂಗಳೂರು ಸೇರಿದಂತೆ ಕೆಲವೆಡೆ ಉಪನ್ಯಾಸ ಆರಂಭಿಸಿದರು. ಸರಳವಾಸ್ತು ಎಂಬ ಶಬ್ದವೇ ಅವರಿಗೆ ಶಕ್ತಿ ನೀಡಿತು. ಸರಳವಾಸ್ತು ರಾಜ್ಯ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲೂ ಜನಪ್ರಿಯವಾಗಿತ್ತು. ಹೀಗಾಗಿ ಸರಳವಾಸ್ತುವಿಗೆ ಸಂಬಂಧಿಸಿದ ನೂರಾರು ಕೇಂದ್ರಗಳು ಹೊರರಾಜ್ಯಗಳಲ್ಲೂ ತಲೆ ಎತ್ತಿದ್ದವು.
Chandrashekhar Guruji Murder: 40 ಸೆಕೆಂಡ್‌ನಲ್ಲಿ 60 ಬಾರಿ ಚುಚ್ಚಿ ಕೊಲೆ, CCTVಯಲ್ಲಿ ಸೆರೆಯಾಯ್ತು ದೃಶ್ಯ
ಅಂಗಡಿ ಗುರೂಜಿಯಾದರು: ಬೆಂಗಳೂರು, ಹುಬ್ಬಳ್ಳಿ, ಮುಂಬೈ, ಅಹ್ಮದಾಬಾದ್ ಸೇರಿದಂತೆ ವಿವಿಧೆಡೆ ಆರಂಭಗೊಂಡ ಸರಳವಾಸ್ತು ಕೇಂದ್ರಗಳಲ್ಲಿ ಸಾವಿರಾರು ಜನರಿಗೆ ಉದ್ಯೋಗ ಸಿಕ್ಕಿತು. ಹೋದಲ್ಲಿ, ಬಂದಲ್ಲಿ ಸರಳವಾಸ್ತು ಕುರಿತು ನೀಡುವ ಉಪನ್ಯಾಸ, ನೊಂದ ಜನರಿಗೆ ಭರವಸೆ ನೀಡುವ ಕಾರಣ ಚಂದ್ರಶೇಖರ ಅಂಗಡಿ ಆಗಿದ್ದವರು ಚಂದ್ರಶೇಖರ ಗುರೂಜಿ ಎಂದೇ ಜನರಿಂದ ಗುರುತಿಸಿಕೊಂಡರು. ಜತೆಗೆ ಸರಳ ಹೆಸರಿನಲ್ಲಿ ಟಿವಿ ವಾಹಿನಿಯನ್ನು ಆರಂಭಿಸಿ, ನಂತರ ಅದನ್ನು ಹಲವು ಕಾರಣಗಳಿಂದ ಸ್ಥಗಿತಗೊಳಿಸಿದ್ದರು. ಅಪಾರ ಹಣ ಸಂಗ್ರಹಗೊಂಡಿದ್ದರಿಂದ ಮುಂಬೈ, ಪುಣೆ, ಹುಬ್ಬಳ್ಳಿ, ಬೆಂಗಳೂರು ಮಹಾನಗರಗಳಲ್ಲಿ ಆಸ್ತಿಗಳನ್ನು ಸಂಪಾದಿಸುವ ಮೂಲಕ ಚಂದ್ರಶೇಖರ ಸ್ಥಿತಿವಂತರಾಗಿದ್ದರು.