ಬೊಮ್ಮಾಯಿ ಸರ್ಕಾರಕ್ಕೆ ಸೂಸೈಡ್ ಇಕ್ಕಟ್ಟು: ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ
* ಸಚಿವ ಈಶ್ವರಪ್ಪ ಹೆಸರು ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
* ಉಡುಪಿ ಲಾಡ್ಜ್‌ನಲ್ಲಿ ಸಾವಿಗೆ ಶರಣು
* ಸಂತೋಷ್ ನನಗೆ ಗೊತ್ತಿಲ್ಲ: ಈಶ್ವರಪ್ಪ ಸ್ಪಷ್ಟನೆ
ಬೆಂಗಳೂರು(ಏ.13): ರಸ್ತೆ ಕಾಮಗಾರಿ ಹಣ ಬಿಡುಗಡೆ ಆಗಿಲ್ಲದ್ದಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪKS Eshwarappa) ಹೆಸರನ್ನು ಬರೆದಿಟ್ಟು ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್(Santosh Patil) ಎಂಬವರು ಮಂಗಳವಾರ ಆತ್ಮಹತ್ಯೆ(Suicide) ಮಾಡಿಕೊಂಡಿದ್ದು, ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ತೈಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿ, ಹಿಜಾಬ್-ಹಲಾಲ್ ಸೇರಿದಂತೆ ಅನೇಕ ರೀತಿಯ ಕೋಮು ವಿವಾದಗಳನ್ನು ನಿರ್ವಹಿಸಬೇಕಾದ ಇಕ್ಕಟ್ಟಿನಲ್ಲಿದ್ದ ಸರ್ಕಾರವನ್ನು ‘ಆತ್ಮಹತ್ಯೆ ಪ್ರಕರಣ’ ತೀವ್ರ ಮುಜುಗರಕ್ಕೆ ಸಿಲುಕಿಸಿದೆ.
ಇದೇ ವೇಳೆ, ಪ್ರತಿಪಕ್ಷ ಕಾಂಗ್ರೆಸ್‌ಗೆ(Congress) ಸರ್ಕಾರವನ್ನು ಹಣಿಯಲು ಪ್ರಬಲ ವಿಷಯವೊಂದು ದೊರೆತಂತಾಗಿದ್ದು, ಸಚಿವರ ತಲೆದಂಡಕ್ಕೆ ಆಗ್ರಹಿಸಿ ಉಗ್ರ ಹೋರಾಟಕ್ಕೆ ಮುಂದಾಗಿದೆ. ಅಲ್ಲದೆ, ಬುಧವಾರ ರಾಜ್ಯಪಾಲರನ್ನು ಭೇಟಿ ಮಾಡಿ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಮಾಡುವ ಜೊತೆಗೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಲು ನಿರ್ಧರಿಸಿದೆ. ಆದರೆ, ರಾಜೀನಾಮೆ ಆಗ್ರಹಕ್ಕೆ ಸಚಿವ ಈಶ್ವರಪ್ಪ ಜಗ್ಗಿಲ್ಲ. ಸಂತೋಷ್ ಆತ್ಮಹತ್ಯೆಯಲ್ಲಿ ತಮ್ಮ ಪಾತ್ರವನ್ನು ತಳ್ಳಿಹಾಕಿರುವ ಅವರು, ಸಂತೋಷ್ ಪರಿಚಯವೇ ತಮಗೆ ಇಲ್ಲ ಎಂದು ಹೇಳಿದ್ದು, ಆತನ ವಿರುದ್ಧ ತಾವು ನಡೆಸಿರುವ ಕಾನೂನು ಹೋರಾಟವನ್ನು ಗುರಾಣಿಯಾಗಿ ಹಿಡಿಯಲು ಮುಂದಾಗಿದ್ದಾರೆ. ಈ ಬಗ್ಗೆ ಹೈಕಮಾಂಡ್‌ನ ಹಿರಿಯರಿಗೂ ಅವರು ವಿವರಣೆಯನ್ನು ನೀಡಿದ್ದಾರೆ.
'ಈಶ್ವರಪ್ಪ ತಪ್ಪು ಮಾಡಿದ್ದಾರೆ, ಶಿಕ್ಷೆಯಾಗಲೇ ಬೇಕು' ಸಂತೋಷ್ ಪತ್ನಿ ಆಕ್ರೋಶ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಈಶ್ವರಪ್ಪ ಪರ ನಿಂತಿದ್ದು, ಸಂತೋಷ್ ಆತ್ಮಹತ್ಯೆ ಏಕೆ ಮಾಡಿಕೊಂಡರು ಎಂಬುದು ತನಿಖೆಯಿಂದ ಪತ್ತೆಯಾಗಬೇಕಿದೆ. ತಮ್ಮ ವಿರುದ್ಧದ ಆರೋಪಗಳಿಗೆ ಈಗಾಗಲೇ ಈಶ್ವರಪ್ಪ ಅವರು ನ್ಯಾಯಾಲಯದಲ್ಲಿ(Court) ಮಾನನಷ್ಟ ಮೊಕದ್ದಮೆ(Defamation Case) ಹಾಕಿದ್ದಾರೆ. ಈ ಹಿಂದೆ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಾಗ ಆಗ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದರಾ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯ(BJP) ಸಚಿವರ ದಂಡು ಸಹ ಈಶ್ವರಪ್ಪ ಪರ ನಿಂತಿದ್ದು, ಈಶ್ವರಪ್ಪ ಅವರ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ ಎಂದು ಆರೋಪಿಸಿದೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರಂತೂ ಇಡೀ ಘಟನೆಯ ಹಿಂದೆ ಕಾಂಗ್ರೆಸ್ ಪಿತೂರಿಯಿದೆ. ಈಶ್ವರಪ್ಪ ವಿರುದ್ಧ ಸಂತೋಷ್ ಮಾಡಿದ್ದ ಆರೋಪದ ಡ್ರಾಫ್‌್ಟಅನ್ನು ಕಾಂಗ್ರೆಸ್ ನಾಯಕರ ಮನೆಯಲ್ಲಿ ರೂಪಿಸಲಾಗಿತ್ತು. ಈ ಬಗ್ಗೆಯೂ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಬಿಜೆಪಿ ಕಾರ್ಯಕರ್ತನೇ ಆತ್ಮಹತ್ಯೆ, ಬಿಜೆಪಿ ಯಾರನ್ನು ಸಾಯಿಸುತ್ತೋ, ಯಾರನ್ನೋ ಉಳಿಸುತ್ತೋ, ಎಂದ ಕುಮಾರಸ್ವಾಮಿ!
ಆದರೆ, ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ(Rahul Gandhi) ಅವರು ಈ ವಿಚಾರದ ಬಗ್ಗೆ ಟ್ವೀಟ್ ಮಾಡಿ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸುತ್ತಿದ್ದಂತೆಯೇ ಬಿಜೆಪಿ ಹೈಕಮಾಂಡ್ ಕೂಡ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಘಟನೆಯ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ರಾಜ್ಯ ಬಿಜೆಪಿ ನಾಯಕರಿಗೆ ಸೂಚನೆ ನೀಡಿದೆ.
ಈಶ್ವರಪ್ಪರನ್ನ ಸಂಪುಟದಿಂದ ವಜಾಗೊಳಿಸಿ, ಒಳಗೆ ಹಾಕಿ: ಪ್ರಿಯಾಂಕ್ ಖರ್ಗೆ ಆಗ್ರಹ
ಕಲಬುರಗಿ: ಗುತ್ತಿಗೆದಾರ ಸಂತೋಷ ಆತ್ಮಹತ್ಯೆಗೆ ಸರ್ಕಾರವೇ ನೇರ ಹೊಣೆ. ಡೆತ್ ಮೆಸೆಜ್ ನಲ್ಲಿ ಸಚಿವ ಈಶ್ವರಪ್ಪನವರ ಹೆಸರು ಉಲ್ಲೇಖವಿರುವುದರಿಂದ ಅವರನ್ನ ಕೂಡಲೇ ವಜಾ ಮಾಡಿ ಒಳಗೆ ಹಾಕಿ ಎಂದು ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಪ್ರೀಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.
ಕಲಬುರಗಿಯಲ್ಲಿಯ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಕರಣದ ಬಗ್ಗೆ ನಿವೃತ್ತ ನ್ಯಾಯಾಧೀಶರಿಂದ ಸಮಗ್ರ ತನಿಖೆ ನಡೆಸಬೇಕು ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು. ಗುತ್ತಿಗೆದಾರರು ಈ ಮುಂಚೆ ಸರ್ಕಾರ 40 % ಕಮಿಷನ್ ಬೇಡಿಕೆ ಇಟ್ಟಿದೆ ಎಂದು ಆರೋಪಿಸಿದ್ದರು. ಈ ಕುರಿತು ಅವರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು. ಆದರೂ ಕೂಡಾ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಪ್ರತಿಯೊಂದಕ್ಕೂ ಸರ್ಕಾರ ದಾಖಲೆ ಕೇಳುತ್ತಿದೆ ಈಗ ಒಂದು ಜೀವ ಹೋಗಿದೆ ಇದಕ್ಕಿಂದ ಪ್ರೂಫ್ ಬೇಕಾ? ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.