ನಂದಿನಿ ಬ್ರ್ಯಾಂಡ್ ರಾಯಭಾರಿಯಾಗಿ ಶಿವ ರಾಜ್‌ಕುಮಾರ್ ಆಯ್ಕೆ: ರಾಜ್‌ಕುಮಾರ್, ಪುನೀತ್ ಬಳಿಕ ಶಿವಣ್ಣ
ಕರ್ನಾಟಕ ಹಾಲು ಮಹಾಮಂಡಳದ ನಂದಿನಿ ಬ್ರ್ಯಾಂಡ್‌ನ ರಾಯಭಾರಿಯಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.
ಬೆಂಗಳೂರು (ಆ.01): ಕರ್ನಾಟಕ ಹಾಲು ಮಹಾಮಂಡಳದ ನಂದಿನಿ ಬ್ರ್ಯಾಂಡ್‌ನ ರಾಯಭಾರಿಯಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕೆಎಂಎಫ್ ಅಧ್ಯಕ್ಷ ಎಸ್. ಭೀಮಾನಾಯ್ಕ ಅವರು ಡಾ. ಶಿವ ರಾಜ್‌ಕುಮಾರ್ ಅವರನ್ನು ಭೇಟಿ ಮಾಡಿ ಹೂಗುಚ್ಛ ನೀಡಿ ಸ್ವಾಗತಿಸಿದ್ದಾರೆ.
ರಾಜ್ಯದ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾಗಿರುವ ಕರ್ನಾಟಕ ಹಾಲು ಮಹಾಮಂಡಳದ ನಂದಿನಿ ಬ್ರಾಂಡ್ ಗೆ ಇನ್ಮುಂದೆ ಡಾ.ಶಿವರಾಜ್ ಕುಮಾರ್ ರಾಯಭಾರಿ ಆಗಿ ಕಾರ್ಯನಿರ್ವಹಿಸಲಿದ್ದಾರೆ. ನಂದಿನಿ ಹಾಲಿಗೆ ರಾಯಭಾರಿಯಾಗಲು ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಒಪ್ಪಿಗೆ ಸೂಚಿಸಿದ್ದಾರೆ. ನಂದಿನಿ ಬ್ರಾಂಡ್ ಗೆ ರಾಯಭಾರಿಯಾಗುವಂತೆ ಕೆಎಂಎಫ್ ಕೇಳಿಕೊಮಡಿತ್ತು. ಕೆಎಂಎಫ್ ಮನವಿಗೆ ರಾಯಭಾರಿಯಾಗಲು ಒಪ್ಪಿದ ಬೆನ್ನಲ್ಲಿಯೇ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್, ಶಿವರಾಜ್‌ಕುಮಾರ್ ಮನೆಗೆ ತೆರಳಿ ಪುಷ್ಪುಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ.
ತಿರುಪತಿ ಲಡ್ಡು ತಯಾರಿಕೆಗೆ ನಂದಿನಿ ತುಪ್ಪ ಪೂರೈಕೆ ಸ್ಥಗಿತ: ಕಾರಣ ಬಿಚ್ಚಿಟ್ಟ ಕೆಎಂಎಫ್
ತಂದೆ, ತಮ್ಮನೂ ರಾಯಭಾರಿ ಆಗಿದ್ದರು: ಇನ್ನು ಈ ಹಿಂದೆ ವರನಟ ಡಾ. ರಾಜ್ ಕುಮಾರ್ ಅವರು ನಂದಿನಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು. ಇದಾದ ನಂತರ ಪುನೀತ್ ರಾಜ್ ಕುಮಾರ್ ಅವರು ಕೂಡ ನಂದಿನಿ ಬ್ರ್ಯಾಂಡ್‌ಗೆ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರು. ಈ ವೇಳೆ ನಂದಿನಿ ಹಾಲಿನ ಉತ್ಪನ್ನಗಳು ಜಾಗತಿಕ ಮಟ್ಟದಲ್ಲಿ ಹೆಚ್ಚು ಮನ್ನಣೆಯನ್ನು ಪಡೆದುಕೊಂಡಿತ್ತು. ಇನ್ನು ರಾಜ್ಯದ ಎಲ್ಲೆಡೆ ನಂದಿನಿ ಬ್ರ್ಯಾಂಡ್ ರಾಯಭಾರಿಯಾಗಿ ಪುನೀತ್ ಆಯ್ಕೆಯಾದ ನಂತರ ಗ್ರಾಹಕರ ಸಂಖ್ಯೆಯಲ್ಲಿಯೂ ಹೆಚ್ಚಳ ಆಗಿತ್ತು ಎಂದು ತಿಳಿದುಬಂದಿತ್ತು. ಈಗ ಕೆಎಂಎಫ್ ಮನವಿ ಮೇರೆಗೆ ರಾಜ್‌ಕುಮಾರ್ ಕುಟುಂಬದ ಶಿವರಾಜ್‌ಕುಮಾರ್ ರಾಯಭಾರಿ ಆಗಲು ಒಪ್ಪಿಕೊಂಡಿದ್ದಾರೆ.
ರೈತರ ಹೊತಾಸಕ್ತಿ ಹೊಂದಿರುವುದು ಅಭಿನಂದನಾರ್ಹ: ಈ ಹಿಂದೆ ಕರ್ನಾಟಕ ರತ್ನ ಡಾ.ಪುನೀತ್ ರಾಜ್‌ಕುಮಾರ್ ರವರು 'ನಂದಿನಿ' ಬ್ರ್ಯಾಂಡ್ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೇ, ದಶಕಗಳ ಹಿಂದಿನಿಂದಲೂ ಕರುನಾಡ ವರನಟ ಡಾ.ರಾಜ್‌ಕುಮಾರ್ ಅವರು ಸಹ ಉಚಿತವಾಗಿ 'ನಂದಿನಿ' ಬ್ರ್ಯಾಂಡ್‌ಗೆ ರಾಯಭಾರಿ ಸೇವೆಯನ್ನು ಒದಗಿಸಿರುತ್ತಾರೆ. ಆನಾದಿ ಕಾಲದಿಂದಲೂ ಸಹ ಕರ್ನಾಟಕ ಪ್ರತಿಷ್ಠಿತ ಡಾ.ರಾಜ್‌ಕುಮಾರ್ ಕುಟುಂಬವು ನಂದಿನಿ ಬ್ರ್ಯಾಂಡ್ ರಾಯಭಾರಿಯಾಗಿ ಪ್ರಚಾರವನ್ನು ಕೈಗೊಂಡು ರಾಜ್ಯದ ರೈತರ ಹಿತಾಸಕ್ತಿಯನ್ನು ಹೊಂದಿರುವುದು ಅಭಿನಂದನಾರ್ಹ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ತಿಳಿಸಿದ್ದಾರೆ.
ತಿರುಪತಿಗೆ ನಂದಿನಿ ತುಪ್ಪ ಪೂರೈಕೆ ಸ್ಥಗಿತ, ಬಿಜೆಪಿ-ಕಾಂಗ್ರೆಸ್ ಆರೋಪ ಪ್ರತ್ಯಾರೋಪಕ್ಕೆ ಹುರುಳೇ ಇಲ್ಲ!
ಹಾಲು, ಹಾಲಿನ ಉತ್ಪನ್ನಗಳ ಪ್ರಚಾರಕ್ಕೆ ಸಮ್ಮತಿ:
ಕರ್ನಾಟಕ ರಾಜ್ಯದ ಹೆಮ್ಮೆಯ ನಂದಿನಿ ಬ್ರ್ಯಾಂಡ್ ರಾಯಭಾರಿಯಾಗಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಪ್ರಚಾರದ ಕಾರ್ಯವನ್ನು ಕೈಗೊಳ್ಳಲು ಒಪ್ಪಿಕೊಂಡಿರುತ್ತಾರೆ. ಡಾ.ಶಿವರಾಜ್ ಕುಮಾರ್ ಅವರು ಕರುನಾಡಿನ ಸಮಸ್ತ ರೈತ ಬಾಂಧವರ ಪರವಾಗಿ ಹಾಗೂ ಕರ್ನಾಟಕ ಹಾಲು ಮಹಾಮಂಡಳದ ಪರವಾಗಿ ಹೃತ್ಫೂರ್ವಕ ಅಭಿನಂದನೆಗಳು.
- ಎಸ್. ಭೀಮಾನಾಯ್ಕ್, ಕೆಎಂಎಫ್ ಅಧ್ಯಕ್ಷ