Asianet Suvarna News Asianet Suvarna News

ಸಿಮೆಂಟ್ ಚೀಲದಂತೆಯೇ ಮರಳು ಚೀಲ ಮಾರುಕಟ್ಟೆಗೆ: ರಾಜ್ಯದಲ್ಲಿ ವಿನೂತನ ಯೋಜನೆ

* ದೇಶದಲ್ಲೇ ವಿನೂತನ ಯೋಜನೆ 
* ಸಿಮೆಂಟ್ ಚೀಲದಂತೆಯೇ ಮರಳು ಚೀಲಗಳನ್ನೂ ಮಾರುಕಟ್ಟೆಗೆ ಬಿಡಲು ಗಣಿ ಇಲಾಖೆ ತೀರ್ಮಾನ
* ಪ್ರಾಯೋಗಿಕವಾಗಿ 5 ಕಡೆ ಘಟಕ ಆರಂಭ
* ಸಾರ್ವಜನಿಕರಿಗೆ ಗುಣಮಟ್ಟದ ಮರಳು ವಿತರಣೆ
* ರಾಜ್ಯಾದ್ಯಂತ ಮರಳು ಬ್ಲಾಕ್ ಗುರುತಿಸಲು ಸೂಚನೆ
 

sand to be sold in bags as cement says mining minister murugesh nirani rbj
Author
Bengaluru, First Published Jun 30, 2021, 10:05 PM IST

ಬೆಂಗಳೂರು, (ಜೂನ್.30):  ದೇಶದಲ್ಲೇ ಪ್ರಪ್ರಥಮ ಬಾರಿಗೆ ಗ್ರಾಹಕರಿಗೆ ಸುಲಭವಾಗಿ ಸಿಗುವಂತೆ ಅನುಕೂಲವಾಗಲು ಇನ್ನು ಮುಂದೆ ಬ್ಯಾಗ್ ಗಳಲ್ಲಿ ಮರಳು ಮಾರಾಟ ಮಾಡುವ ವಿನೂತನ ಯೋಜನೆಯನ್ನು ಗಣಿ  ಮತ್ತು ಭೂ ವಿಜ್ಞಾನ ಇಲಾಖೆ ಆರಂಭಿಸಲಿದೆ.

ಬ್ಯಾಗ್ ಗಳಲ್ಲಿ ಮಾರಾಟ ಮಾಡುವ ಉದ್ದೇಶವೇನೆಂದರೆ ಸರಕಾರದ ವತಿಯಿಂದಲೇ ಕೈಗೆಟುಕವ ದರದಲ್ಲಿ ಜನಸಾಮಾನ್ಯರು ಹಾಗೂ ಎಲ್ಲಾ ವರ್ಗದವರಿಗೂ ಮರಳು ಸಿಗಲಿದ್ದು ಇದರ ಪ್ರಸ್ತಾವನೆಯು ಸಹಾ ಸಿದ್ದವಾಗಿದೆ. ಇದರಿಂದಾಗಿ ಮನೆ ಕಟ್ಟುವವರು ಹಾಗೂ ಇತರರಿಗೆ ಸುಲಭ ಮಾರ್ಗದಲ್ಲಿ ಮರಳು ಲಭ್ಯವಾಗಲಿದೆ.

ಏಪ್ರಿಲ್ 30 ರಿಂದ ರಾಜ್ಯದಲ್ಲಿ 100 ರು.ಗೆ ಒಂದು ಟನ್ ಮರಳು

ಬುಧವಾರ  ವಿಕಾಸಸೌಧದಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರು ಕಲ್ಲು ಗಣಿಗಾರಿಕೆ ಮರಳು ಕುರಿತು ಜಿಲ್ಲಾಧಿಕಾರಿಗಳು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಸೇರಿದಂತೆ ಮತ್ತಿತರ ಅಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ಮದ್ಯವನ್ನು ಯಾವ ರೀತಿ ಕರ್ನಾಟಕ  ರಾಜ್ಯ ಪಾನೀಯ ನಿಗಮದ ಮೂಲಕ ಮಾರಾಟ ಮಾಡುತ್ತಿದಿಯೋ ಅದೇ ಮಾದರಿಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ತನ್ನದೇಯಾದ ಸಂಸ್ಥೆಯ ಮೂಲಕ ಬ್ಯಾಗ್ ಗಳಲ್ಲಿ  ಮರಳು ಮಾರಾಟ ಮಾಡಲು ಉದ್ದೇಶಿಸಿದೆ  ಎಂದು ಪ್ರಕಟಿಸಿದರು.

ಮರಳು ಸಾಗಾಣಿಕೆ ಮಾಡುವ ವೇಳೆ ಕನಿಷ್ಟ ಶೇ.25 ರಿಂದ 30ರಷ್ಟು ಮರಳು ಅನುಪಯುಕ್ತವಾಗುತ್ತಿತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ 50 ಕೆಜಿಯ ಬ್ಯಾಗ್,  1 ಟನ್ ಹಾಗೂ ಅದಕ್ಕಿಂತ ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕರು ಮರಳನ್ನು ಖರೀದಿಸಬಹುದು ಎಂದು ಹೇಳಿದರು.

ಪ್ರಾಯೋಗಿಕವಾಗಿ ರಾಜ್ಯದ ಐದು ಕಡೆ ಈ ಘಟಕಗಳನ್ನು ಪ್ರಾರಂಭ ಮಾಡಲಾಗುವುದು. ಮರಳು ಮಾರಾಟ ಮಾಡಲು ಬ್ಯಾಗ್‍ಗಳನ್ನು ಸಿದ್ಧಪಡಿಸುವುದು, ಸಾಗಾಣಿಕೆ ಸೇರಿದಂತೆ ಎಲ್ಲ ರೀತಿಯ ತರಬೇತಿಯನ್ನು ಸಂಬಂಧಪಟ್ಟವರಿಗೆ ನೀಡಲಿದ್ದೇವೆ ಎಂದು ತಿಳಿಸಿದರು.

ಬ್ಯಾಗ್ ಮೂಲಕ ಮಾರಾಟ ಮಾಡುವಾಗ ಎ, ಬಿ ಮತ್ತು ಸಿ ಶ್ರೇಣಿ ಎಂದು ವರ್ಗೀಕರಣ ಮಾಡುತ್ತೇವೆ. ಮೊದಲು ಸ್ಟಾಕ್ ಯಾರ್ಡ್‍ಗಳಲ್ಲಿ ಪ್ರತ್ಯೇಕಗೊಳಿಸಿ ನಂತರ ಅದನ್ನು ಕೈಗೆಟಕುವ ದರದಲ್ಲಿ ವಿತರಣೆ ಮಾಡಲಿದ್ದೇವೆ ಎಂದು ತಿಳಿಸಿದರು. 

ಮರಳುಗಾರಿಕೆಯನ್ನು ಕೇವಲ ಆರು ತಿಂಗಳು ಮಾತ್ರ ನಡೆಸಬಹುದು. ನದಿಗಳಲ್ಲಿ ನೀರು ಸಂಗ್ರಹಣೆಯಾದರೆ ಮರಳು ತೆಗೆಯಲು ಅವಕಾಶವಿರುವುದಿಲ್ಲ.  ಬ್ಯಾಗ್‍ಗಳಲ್ಲಿ  ಮರಳು ಸಂಗ್ರಹಿಸಿಟ್ಟುಕೊಂಡರೆ, ವರ್ಷ ಪೂರ್ತಿ ಬಳಕೆ ಮಾಡಬಹುದು ಎಂದು ಸಲಹೆ ಮಾಡಿದರು.

ಬ್ಯಾಗ್ ಗಳಲ್ಲಿ ಮರಳು  ಸಂಗ್ರಹಣೆಯಾದರೆ 
ಸಾರ್ವಜನಿಕರಿಗೆ ಗುಣಮಟ್ಟದ ಮರಳು ಸಿಗಲಿದೆ. ತಮ್ಮ ವಾಹನಗಳಲ್ಲಿ ಎಲ್ಲಿಗೆ ಬೇಕಾದರೂ ಸುಲಭವಾಗಿ ಸಾಗಿಸಬಹುದು.ಇದರಿಂದ ಸಾಗಾಣಿಕೆ ವೆಚ್ಚವು ಕಡಿಮೆಯಾಗಲಿದೆ ಎಂದರು. 

ವರ್ಷಪೂರ್ತಿ ಮರಳು ಸಿಗದ ಕಾರಣ ಮಾರುಕಟ್ಟೆಯಲ್ಲಿ ಮರಳಿನ ದರವು ದುಪ್ಪಟ್ಟಾಗುತ್ತಿತ್ತು. ಈಗ ಇಂತಹುದನ್ನು ತಪ್ಪಿಸಲು ಈ ಮಾರ್ಗೋಪಾಯ ಕಂಡುಕೊಳ್ಳಲಾಗಿದೆ ಎಂದು ಹೇಳಿದರು. ಬ್ಯಾಗ್‍ಗಳಲ್ಲಿ ಮರಳನ್ನು ಸಂಗ್ರಹಿಸಿಟ್ಟರೆ ಯಾವಾಗ ಬೇಕಾದರೂ ವಿತರಣೆ ಮಾಡಬಹುದು. ಇದಕ್ಕೆ ದರ ಕಡಿಮೆ ಇರುತ್ತದೆ. ಇದಕ್ಕೆ 50ರೂ. ಖರ್ಚಾಗಬಹುದು ಎಂದರು.

5 ಲಕ್ಷಕ್ಕಿಂತ ಕಡಿಮೆ ದರದಲ್ಲಿ ಮನೆ ಕಟ್ಟಿಸಿಕೊಳ್ಳುವವರಿಗೆ ಯಾವುದೇ ರೀತಿಯ ರಾಜಧನ ಕಟ್ಟಿಸಿಕೊಳ್ಳುವುದಿಲ್ಲ. ಬಡವರು, ಬಡತನ ರೇಖೆಗಿಂತ ಕೆಳಗಿನವರು ಗ್ರಾಪಂ ಮಟ್ಟದಲ್ಲಿ ಆಶ್ರಯ ಮನೆ ಕಲ್ಪಿಸಿಕೊಳ್ಳುವವರಿಗೆ ಉಚಿತ ಮರಳನ್ನು ವಿತರಿಸಿದ್ದೇವೆ ಎಂದು ತಿಳಿಸಿದರು. 

ಬ್ಲಾಕ್‍ಗಳನ್ನು ಗುರುತಿಸಿ
ಇದಕ್ಕೂ ಮುನ್ನ ಜಿಲ್ಲಾಧಿಕಾರಿಗಳು ಮತ್ತು ಅರಣ್ಯ ಉಪಸಂರಕ್ಷಣಾಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿದ ಸಚಿವ ಮುರುಗೇಶ್ ನಿರಾಣಿ ಅವರು ತತ್‍ಕ್ಷಣವೇ ನದಿ ಪಾತ್ರಗಳಲ್ಲಿ ಒಂದು, ಎರಡು, ಮೂರನೆ ಶ್ರೇಣಿಯ ಮರಳು ಬ್ಲಾಕ್‍ಗಳನ್ನು ಗುರುತಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ಕೊಟ್ಟರು.

ಕೆಎಸ್‍ಎಂಸಿಎಲ್, ಹೆಚ್‍ಜಿಎಂಎಲ್ ವತಿಯಿಂದ ನಾಲ್ಕು, ಐದು ಮತ್ತು ಆರನೆ ಶ್ರೇಣಿಯ ನದಿ ಪಾತ್ರಗಳಲ್ಲಿ ಮರಳು ಗಣಿಗಾರಿಕೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು. ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಮರಳು ಬ್ಲಾಕ್‍ಗಳನ್ನು ಗುರುತಿಸಿ ಅಧಿಸೂಚನೆ ಹೊರಡಿಸಿ ಕಾರ್ಯಾದೇಶ ನೀಡಲಾಗಿದೆ. ಬೇರೆ ಜಿಲ್ಲೆಗಳಲ್ಲಿ ಇದು ಏಕೆ ಸಾಧ್ಯವಾಗಿಲ್ಲ. ಕೂಡಲೇ ಬ್ಲಾಕ್ ಗುರುತಿಸುವ ಕಾರ್ಯ ಮಾಡಿ ಎಂದು ಸೂಚಿಸಿದರು.

ಡ್ರೋಣ್ ಮೂಲಕ ಸಮೀಕ್ಷೆ ನಡೆಸಬೇಕು. ಹೊಸದಾಗಿ ಟೆಂಡರ್ ಕರೆಯುವುದು ಅಥವಾ ಮರು ಟೆಂಡರ್ ಕರೆದಾದರೂ ಬ್ಲಾಕ್‍ಗಳನ್ನು ಗುರುತಿಸಬೇಕು. ಇಲ್ಲಸಸಲ್ಲದ ಸಬೂಬು ಹೇಳಬೇಡಿ ಎಂದು ನಿರಾಣಿ ತಾಕೀತು ಮಾಡಿದರು.

ಈಗಾಗಲೇ ನೂತನ ಮರಳು ನೀತಿ ಸಿದ್ದವಾಗಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚೆಸಿ ಅದಷ್ಟು ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದೇವೆ. ಇದು ದೇಶಕ್ಕೆ ಮಾದರಿಯಾದ ನೀತಿ ಇದಾಗಲಿದೆ ಎಂದು ಅಭಿಪ್ರಾಯಪಟ್ಟರು.
 

Follow Us:
Download App:
  • android
  • ios