ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲೂಕಿನಲ್ಲಿ ಕಾರು ಅಪಘಾತದಲ್ಲಿ ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಚನ್ನಕೃಷ್ಣಪ್ಪ ಮೃತಪಟ್ಟಿದ್ದಾರೆ. ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದಿತ್ತು. ಇತರ ವಕೀಲರು ಗಾಯಗೊಂಡಿದ್ದಾರೆ. ಮಗನ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಚಿಕ್ಕಬಳ್ಳಾಪುರ (ಮೇ 1): ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ವರ್ಲಕೊಂಡ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಸಮತಾ ಸೈನಿಕ ದಳ ಕರ್ನಾಟಕ ಘಟಕದ ರಾಜ್ಯಾಧ್ಯಕ್ಷ ಚನ್ನಕೃಷ್ಣಪ್ಪ ಅವರು ದಾರುಣವಾಗಿ ಸಾವನ್ನಪ್ಪಿದ್ದಾರೆ.

ಘಟನೆ ಕುರಿತಂತೆ ಲಭಿಸಿದ ಮಾಹಿತಿ ಪ್ರಕಾರ, ಚನ್ನಕೃಷ್ಣಪ್ಪ ಅವರು ಬಾಗೇಪಲ್ಲಿ ತಾಲೂಕಿನಲ್ಲಿ ತಮ್ಮ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದ ಕೆಲಸ ಮುಗಿಸಿಕೊಂಡು, ತಮ್ಮ ವಕೀಲ ಸ್ನೇಹಿತರೊಂದಿಗೆ ಬೆಂಗಳೂರು ಕಡೆಗೆ ವಾಪಸ್ ಬರುತ್ತಿದ್ದರು. ಈ ವೇಳೆ, ವರ್ಲಕೊಂಡ ಗ್ರಾಮದ ಸಮೀಪದ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಇನ್ನೋವಾ ಕಾರು ತಾಂತ್ರಿಕ ದೋಷದಿಂದ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ರಸ್ತೆಯ ಬದಿಯ ಹಳ್ಳಕ್ಕೆ ಉರುಳಿತು. ಹಠಾತ್ ಸಂಭವಿಸಿದ ಅಪಘಾತದಲ್ಲಿ ಚನ್ನಕೃಷ್ಣಪ್ಪ ಅವರು ಸ್ಥಳದಲ್ಲಿಯೇ ಪ್ರಾಣ ಬಿಟ್ಟರು.

ಈ ಘಟನೆಯಲ್ಲಿ ಕಾರಿನಲ್ಲಿದ್ದ ಇತರ ವಕೀಲರು ಗಾಯಗೊಂಡಿದ್ದು, ದುರ್ಘಟನೆಯ ನಂತರ ಪ್ರಾಣಾಪಾಯದಿಂದ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಗಾಯಗೊಂಡವರನ್ನು ಅಲ್ಲಿಯ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಇನ್ನು ಮೃತದೇಹವನ್ನು ಕೂಡಲೇ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ, ಅವರು ಯಾವ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿಯೂ ಸಿಕ್ಕಿಲ್ಲ. ಪೊಲೀಸರು ಗಾಯಾಳುಗಳಿಗೆ ಶೋಧ ಕಾರ್ಯ ಮುಂದುವರೆಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.

ಈ ಘಟನೆ ನಿನ್ನೆ ಸಂಜೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಶೇಷವೆಂದರೆ, ಈ ಅಪಘಾತದ ಬಗ್ಗೆ ಚನ್ನಕೃಷ್ಣಪ್ಪ ಅವರ ಮಗ ಹಲವು ಅನುಮಾನಗಳನ್ನು ವ್ಯಕ್ತಪಡಿಸಿ ಅಧಿಕೃತವಾಗಿ ದೂರು ಸಲ್ಲಿಸಿದ್ದಾರಂತೆ. ಇದರಿಂದಾಗಿ ಈ ಅಪಘಾತದ ಹಿಂದೆ ಯಾವುದೇ ಶಡ್ಯಂತ್ರವಿದೆಯೇ ಎಂಬ ಅನುಮಾನಗಳು ಹೆಚ್ಚು ಗಂಭೀರ ಸ್ವರೂಪಕ್ಕೆ ತಿರುಗುತ್ತಿವೆ.

ಪ್ರಸ್ತುತ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸಮಗ್ರ ತನಿಖೆ ಕೈಗೊಂಡಿದ್ದು, ಶೀಘ್ರದಲ್ಲೇ ಅಧಿಕೃತ ವರದಿ ಹೊರಬರುವ ನಿರೀಕ್ಷೆಯಿದೆ. ಚನ್ನಕೃಷ್ಣಪ್ಪ ಅವರ ಅಗಲಿಕೆ ಸಮಾಜ ಸೇವಾ ಕ್ಷೇತ್ರಕ್ಕೆ ಭಾರೀ ನಷ್ಟವಾಗಿದೆ ಎಂದು ಅವರ ಅನುಯಾಯಿಗಳು ಹಾಗೂ ಸಹಚರರು ಶೋಕ ವ್ಯಕ್ತಪಡಿಸಿದ್ದಾರೆ.

ರಾಜಕೀಯ ಕಾರಣಗಳಿಂದ ಕೊಲೆ ಅನುಮಾನ:
ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷನಾಗಿ ಹಲವು ರಾಜಕೀಯ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗುದ್ದರು. ಜೊತೆಗೆ, ಸಮಾಜದಲ್ಲಿ ಯಾವುದೇ ಅನ್ಯಾಯಗಳು ಕಂಡುಬಂದಲ್ಲಿ ಅವುಗಳನ್ನು ಪ್ರಭಲವಾಗಿ ವಿರೋಧಿಸುವ ಜೊತೆಗೆ ಸಂಬಂಧಪಟ್ಟ ಸಂತ್ರಸ್ತರಿಗೆ ನ್ಯಾಯ ಕೊಡಿಸುವ ಕೆಲಸವನ್ನೂ ಮಾಡುತ್ತಿದ್ದರು. ಇನ್ನು ಭೂ ಕಬಳಿಕೆ, ರಿಯಲ್ ಎಸ್ಟೇಟ್ ಹಾಗೂ ಬಡ್ಡಿ ವ್ಯವಹಾರ ಮಾಡುತ್ತಾ ಹಣ ವಸೂಲಿ ಮಾಡುವವರನ್ನು ಚನ್ನಕೃಷ್ಣಪ್ಪ ವಿರೋಧಿಸುತ್ತಿದ್ದರು. ಇನ್ನು ರಾಜಕೀಯವಾಗಿಯೂ ಕೆಲವರಿಗೆ ಪ್ರಬಲ ಪೈಪೋಟಿಯನ್ನೂ ನೀಡುತ್ತಿದ್ದರು ಎಂದು ಕೇಳಿಬಂದಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಚನ್ನಕೃಷ್ಣಪ್ಪ ಅವರನ್ನು ಸುಸಜ್ಜಿತವಾಗಿ ಪ್ಲಾನ್ ಮಾಡಿ ಕೊಲೆ ಮಾಡುವುದಕ್ಕೆಂದೇ ಅಪಘಾತವನ್ನು ಮಾಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇಲ್ಲವೆಂದರೆ ಇನ್ನೋವಾ ಕಾರು ಅಪಘಾತದಲ್ಲಿ ಚನ್ನಕೃಷ್ಣಪ್ಪ ಅವರೊಬ್ಬರೇ ಸಾವನ್ನಪ್ಪಲು ಹೇಗೆ ಸಾಧ್ಯ ಎಂದು ಅನುಮಾನ ವ್ಯಕ್ತವಾಗಿದೆ.

ಮರಣೋತ್ತರ ಪರೀಕ್ಷೆಯಿಂದ ಸುಳಿವು ಸಾಧ್ಯತೆ:
ಇನ್ನು ಚನ್ನಕೃಷ್ಣಪ್ಪ ಅವರ ಮೃತದೇಹವನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಕುಟುಂಬಸ್ಥರು ಗುರುತಿಸಿದ ನಂತರ ಮರಣೋತ್ತರ ಪರೀಕ್ಷೆಗೆ ಕಳಿಸಲಾಗುತ್ತದೆ. ಆಗ ಮರಣೋತ್ತರ ಪರೀಕ್ಷೆಯಲ್ಲಿ ಅವರ ಮೇಲೆ ಹಲ್ಲೆ ಮಾಡಲಾಗಿದೆಯೇ ಅಥವಾ ಬೇರೆ ಯಾವುದಾದರೂ ಕಾರಣಗಳಿಂದ ಕೊಲೆ ಮಾಡಿ ಅಪಘಾತವೆಂಬಂತೆ ಬಿಂಬಿಸಲಾಗಿದೆಯೇ ಎಂಬ ಸತ್ಯಾಂಶಗಳು ಹೊರಬರಲಿವೆ. ಕುಟುಂಬಸ್ಥರ ದೂರನ್ನು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.