ಬೆಂಗಳೂರು(ಜು.16): ರಾಜ್ಯದಲ್ಲಿ ಇದುವರೆಗೂ ಸುಮಾರು 4000 ಮಂದಿ ಲಕ್ಷಣರಹಿತ ಹಾಗೂ ಕಡಿಮೆ ಲಕ್ಷಣಗಳಿರುವ ಕರೊನಾ ಸೋಂಕಿತರು ಮನೆ ಆರೈಕೆಗೆ (ಹೋಂ ಐಸೋಲೇಷನ್‌) ಒಳಗಾಗಿದ್ದಾರೆ. ಈ ರೀತಿ ಮನೆ ಆರೈಕೆಯಲ್ಲಿರುವವರಿಗೆ ಆರೋಗ್ಯ ಇಲಾಖೆ ಹಲವು ಸುರಕ್ಷತಾ ಕ್ರಮಗಳ ಸಲಹೆ ನೀಡಿದೆ.

ಕಡ್ಡಾಯವಾಗಿ ವೈದ್ಯಕೀಯ ಮಾಸ್ಕ್‌ ಅಥವಾ ಎನ್‌-95 ಮಾಸ್ಕ್‌ ಧರಿಸಬೇಕು. ಪ್ರತಿ 8 ಗಂಟೆಗಳಿಗೆ ಮಾಸ್ಕ್‌ ಅನ್ನು ಸೋಡಿಯಂ ಹೈಪ್ಲೋ-ಕ್ಲೋರೈಡ್‌ ದ್ರಾವಣ ಬಳಸಿ ವಿಲೇವಾರಿ ಮಾಡಬೇಕು. ನಿಗದಿತ ಕೋಣೆಯಲ್ಲಿಯೇ ಉಳಿದು, ಇತರರೊಂದಿಗೆ 2 ಮೀಟರ್‌ ಅಂತರ ಕಾಯ್ದುಕೊಳ್ಳಬೇಕು. ಪ್ರತಿನಿತ್ಯ ಕನಿಷ್ಠ 2 ಲೀಟರ್‌ ಬಿಸಿ ಅಥವಾ ಕಾಯಿಸಿ ಆರಿಸಿದ ನೀರನ್ನು ಕುಡಿಯಬೇಕು. ಕೆಮ್ಮುವಾಗ ಮತ್ತು ಸೀನುವಾಗ ಮೊಣಕೈ ಅಡ್ಡವಿಟ್ಟುಕೊಳ್ಳಬೇಕು. ಕರವಸ್ತ್ರ ಅಥವಾ ಟಿಶ್ಯೂ ಪೇಪರ್‌ ಬಳಸಬೇಕು.

ಎಲ್ಲ ವಾರ್ಡ್‌ನ ಎಲ್ಲ ಮನೆ ಸದಸ್ಯರಿಗೆ ಆ್ಯಂಟಿಜೆನ್‌ ಟೆಸ್ಟ್‌

ಕನಿಷ್ಠ 40 ಸೆಕೆಂಡುಗಳ ಕಾಲ ಸಾಬೂನಿನಿಂದ ಕೈಗಳನ್ನು ಸ್ವಚ್ಛ ಮಾಡಿಕೊಳ್ಳಬೇಕು. ವೈಯಕ್ತಿಕ ವಸ್ತುಗಳಾದ ಟವೆಲ್‌, ಪಾತ್ರೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಕೋಣೆಗಳನ್ನು ಆಗಾಗ ಸೋಂಕು ನಿವಾರಕ ದ್ರಾವಣದಿಂದ ಸ್ವಚ್ಛಪಡಿಸುತ್ತಿರಬೇಕು. ಸ್ನಾನಗೃಹ ಹಾಗೂ ಶೌಚಾಲಯವನ್ನು ದಿನಕ್ಕೆ ಒಮ್ಮೆಯಾದರೂ ಸ್ವಚ್ಛಪಡಿಸಬೇಕು. ಪ್ರತಿದಿನ ಪಲ್ಸ್‌ ಆಕ್ಸಿಮೀಟರ್‌ ಮತ್ತು ಡಿಜಿಟಲ್‌ ಥರ್ಮಾ ಮೀಟರ್‌ನಿಂದ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು. ಆರೋಗ್ಯಕರ ಮತ್ತು ಪೌಷ್ಟಿಕ ಆಹಾರ ಸೇವಿಸಬೇಕು. ಧೂಮಪಾನ, ತಂಬಾಕು, ಮದ್ಯಪಾನ ಸೇವನೆ ಮಾಡಬಾರದು ಎಂದು ಸೂಚಿಸಿದೆ.