ಯಾದಗಿರಿ ಜಿಲ್ಲೆಯ ಕೆಂಭಾವಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಭವ್ಯ ಪಥ ಸಂಚಲನ ನಡೆಯಲಿದ್ದು, ಪಟ್ಟಣವು ಕೇಸರಿ ಧ್ವಜಗಳಿಂದ ಅಲಂಕೃತಗೊಂಡಿದೆ. ಸಾವಿರಕ್ಕೂ ಹೆಚ್ಚು ಸ್ವಯಂಸೇವಕರು ಭಾಗವಹಿಸಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ 300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.
ಯಾದಗಿರಿ (ನ.4): ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಸ್ವಕ್ಷೇತ್ರ ಚಿತ್ತಾಪುರ ಬಳಿಕ ಈಗ ಪಕ್ಕದ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯಲ್ಲೂ ಆರ್‌ಎಸ್‌ಎಸ್ ಪಥಸಂಚಲನ ನಡೆಯಲಿದ್ದು, ಕೆಂಭಾವಿ ಪಟ್ಟಣ ಕೇಸರಿಮಯವಾಗಿದೆ.
ರಾರಾಜಿಸುತ್ತಿವೆ ಹನುಮಧ್ವಜಗಳು:
ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ದ ಭವ್ಯ ಪಥ ಸಂಚಲನ ಹಿನ್ನೆಲೆಯಲ್ಲಿ ಭಗವಾಧ್ವಜ, ಹನುಮಂತ ಧ್ವಜ, ಶ್ರೀರಾಮನ ಧ್ವಜಗಳು ರಾರಾಜಿಸುತ್ತಿವೆ. ದೇಶಭಕ್ತರ ಹೆಸರಿನಲ್ಲಿ ನಿರ್ಮಿತ ಮಹಾಧ್ವಾರಗಳು ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಸೇರಿದಂತೆ ಹಲವು ಮಹಾನ್ ವ್ಯಕ್ತಿಗಳ ಹೆಸರಿನಲ್ಲಿ ಕಮಾನ್‌ಗಳು ನಿರ್ಮಿಸಲಾಗಿದೆ.
ಪಥ ಸಂಚಲನ ಎಲ್ಲಿಂದ ಆರಂಭ:
ಮಧ್ಯಾಹ್ನ 3 ಗಂಟೆಗೆ ಕೆಂಭಾವಿ ಪುರಸಭೆ ಕಚೇರಿ ಬಳಿಯಿಂದ ಆರಂಭವಾಗಲಿರುವ ಈ ಪಥ ಸಂಚಲನ, ಬಸವೇಶ್ವರ ವೃತ್ತ, ಅಂಬಿಗರ ಚೌಡಯ್ಯ ವೃತ್ತ, ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದ ಮಾರ್ಗವಾಗಿ ಸಾಗಲಿದೆ. ಸುಮಾರು 1,000ಕ್ಕೂ ಹೆಚ್ಚು ಗಣವೇಷಧಾರಿ ಸ್ವಯಂಸೇವಕರು ಭಾಗವಹಿಸುತ್ತಿದ್ದು, ಕೆಂಭಾವಿ ನಿವಾಸಿಗಳು ಅವರಿಗೆ ಉತ್ಸಾಹದಿಂದ ಸ್ವಾಗತ ನೀಡಲು ಸಿದ್ಧರಾಗಿದ್ದಾರೆ.
ಬಿಗಿ ಭದ್ರತೆ: 300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ!
ಪಥ ಸಂಚಲನ ವೇಳೆ ಯಾವುದೇ ಅಹಿತಕಾರ ಘಟನೆ ನಡೆಯದಂತೆ ಪೊಲೀಸ್ ಇಲಾಖೆಯಿಂದ ಭಾರೀ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಎಸ್‌ಪಿ-1, ಎಎಸ್ಪಿ-1, ಡಿವೈಎಸ್ಪಿ-3, ಸಿಪಿಐ-8, ಪಿಎಸ್‌ಐ-26, ಎಎಸ್‌ಐ-19, HC-PC-147, DAR ತುಕಡಿ-5, KSRP ತುಕಡಿ-2 ಸೇರಿದಂತೆ 300ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದರ ಜೊತೆಗೆ ಡ್ರೋಣ್ ಕ್ಯಾಮರಾ ಮೂಲಕ ನಿಗಾ ಇರಿಸಲಾಗಿದ್ದು, 7 ಜನರ ವಿಡಿಯೋಗ್ರಾಫಿ ತಂಡವು ಪೂರ್ಣ ಪರೇಡ್ ನಡೆಯುವ ಸ್ಥಳದ ವಿಡಿಯೋ ರೆಕಾರ್ಡ್ ಮಾಡಲಿದೆ.
