Greater Bengaluru road development :ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಮುಖ್ಯ ಮತ್ತು ಉಪಮಖ್ಯ ರಸ್ತೆಗಳ ಡಾಂಬರೀಕರಣಕ್ಕಾಗಿ ರೂಪಿಸಲಾದ 1,241.57 ಕೋಟಿ ರು. ಮೊತ್ತದ ಕ್ರಿಯಾ ಯೋಜನೆಗೆ ನಗರಾಭಿವೃದ್ಧಿ ಇಲಾಖೆ ಅನುಮೋದನೆ ನೀಡಿದೆ. 

ಬೆಂಗಳೂರು (ನ.4): ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ ವ್ಯಾಪ್ತಿಯ ಮುಖ್ಯ ಮತ್ತು ಉಪಮಖ್ಯ ರಸ್ತೆಗಳ ಡಾಂಬರೀಕರಣ ಕಾಮಗಾರಿ ಕೈಗೊಳ್ಳಲು ರೂಪಿಸಿರುವ ಸುಮಾರು 1,241.57 ಕೋಟಿ ರು. ಮೊತ್ತದ ಕ್ರಿಯಾ ಯೋಜನೆಗೆ ನಗರಾಭಿವೃದ್ಧಿ ಇಲಾಖೆ ಅನುಮೋದನೆ ನೀಡಿದೆ.

ವಿಶೇಷ ಮೂಲಭೂತ ಸೌಕರ್ಯಕ್ಕೆ ಬಂಡವಾಳ

ಈ ಕಾಮಗಾರಿಗಳ ಕ್ರಿಯಾ ಯೋಜನೆಗೆ ತಗಲುವ ವೆಚ್ಚವನ್ನು ‘ವಿಶೇಷ ಮೂಲಭೂತ ಸೌಕರ್ಯಕ್ಕೆ ಬಂಡವಾಳ ಬೆಂಬಲ ಯೋಜನೆ’ಯಡಿ ರಾಜ್ಯ ಸರ್ಕಾದಿಂದ ಒದಗಿಸುವ ಅನುದಾನದಲ್ಲಿ ಭರಿಸಲು ಸೂಚಿಸಲಾಗಿದೆ.

ಹೈ ಡೆನ್ಸಿಟಿ ಕಾರಿಡಾರ್‌ ಕ್ರಿಯಾ ಯೋಜನೆ

ಜಿಬಿಎ ಮುಖ್ಯ ಆಯುಕ್ತರು ವೈಟ್ ಟಾಪಿಂಗ್‌ ಯೋಜನೆಗಳಡಿ, ಹೈ ಡೆನ್ಸಿಟಿ ಕಾರಿಡಾರ್‌ ಕ್ರಿಯಾ ಯೋಜನೆಗಳಡಿ ಹಾಗೂ ಬ್ಲಾಕ್‌ ಟಾಪಿಂಗ್‌ ಆದೇಶ ಸೇರಿದಂತೆ ಇತರೆ ಯಾವುದೇ ಕ್ರಿಯಾ ಯೋಜನೆಗಳಡಿ ಕೈಗೆತ್ತಿಕೊಳ್ಳದೇ ಇರುವ ಹಾಗೂ ಡಿಫ್ಯಾಕ್ಟ್‌ ಲಯಾಬಿಲಿಟಿ ಪಿರಿಯಡ್‌(ಡಿಎಲ್‌ಪಿ) ಮುಕ್ತಾಯಗೊಂಡಿರುವ ಮುಖ್ಯ ಮತ್ತು ಉಪಮುಖ್ಯ ರಸ್ತೆಗಳು ಈ ಕ್ರಿಯಾ ಯೋಜನೆಯಿಂದ ಕೈಬಿಟ್ಟು ಹೋಗಿದ್ದಲ್ಲಿ ಅಂತಹ ಪ್ರತಿಯೊಂದು ಮುಖ್ಯ ಮತ್ತು ಉಪಮುಖ್ಯ ರಸ್ತೆಗಳನ್ನು ಸಂಬಂಧಪಟ್ಟವರಿಂದ ಮತ್ತೊಮ್ಮೆ ದೃಢೀಕರಣ ಪಡೆದು ಸರ್ಕಾರಕ್ಕೆ ಸಲ್ಲಿಸಿ ಅಂತಿಮ ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯಬೇಕು.

ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸುವ ಸಂದರ್ಭದಲ್ಲಿ 1,241.57 ಕೋಟಿ ರು. ಮಿತಿಯೊಳಗೆ ಸಲ್ಲಿಸುವುದು ಹಾಗೂ ಯಾವ ರಸ್ತೆಗಳನ್ನು ಕೈಬಿಟ್ಟು/ ಯಾವ ರಸ್ತೆಗಳನ್ನು ಕೈಗೆತ್ತಿಕೊಳ್ಳಬೇಕು ಎಂಬುದನ್ನು ವಿಧಾನಸಭಾ ಕ್ಷೇತ್ರವಾರು ಸರಿದೂಗಿಸಿ ಸಲ್ಲಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.