ಬೆಂಗಳೂರು (ಫೆ. 25):  ಈ ವರ್ಷ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ 91 ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ ಭತ್ತ ಹಾನಿಗೊಳಗಾದ ಬೆನ್ನಲ್ಲೇ ಬೇಸಿಗೆ ಹಂಗಾಮಿನಲ್ಲೂ ಭತ್ತದ ನಾಟಿ ಪ್ರಮಾಣ ಶೇ.16 ಕ್ಕೆ ಕುಸಿದಿದ್ದು, ಕೇವಲ 35 ಸಾವಿರ ಹೆಕ್ಟೇರ್‌ನಲ್ಲಿ ಮಾತ್ರ ಭತ್ತ ನಾಟಿ ಮಾಡಲಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಅಕ್ಕಿಗಾಗಿ ನೆರೆ ರಾಜ್ಯಗಳನ್ನು ಅವಲಂಬಿಸುವ ಪರಿಸ್ಥಿತಿ ಎದುರಾಗಬಹುದು.

ಈ ಬಾರಿಯ ಬೇಸಿಗೆ ಹಂಗಾಮಿನಲ್ಲಿ ಭತ್ತದ ನಾಟಿ ಪ್ರಮಾಣ 2.30 ಲಕ್ಷ ಹೆಕ್ಟೇರ್‌ ಗುರಿ ಹೊಂದಲಾಗಿತ್ತು. ಆದರೆ ಈವರೆಗೆ ಕೇವಲ 35,656 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಭತ್ತದ ನಾಟಿ ಪೂರ್ಣಗೊಂಡಿದೆ. ವಾಡಿಕೆಯಂತೆ ಫೆಬ್ರವರಿ ಎರಡನೇ ವಾರದ ಅವಧಿಗೆ ಶೇ.74ರಷ್ಟುಭತ್ತದ ನಾಟಿ ಆಗಬೇಕಿತ್ತು. ಆದರೆ, ಈವರೆಗೆ ಶೇ.16ರಷ್ಟುಮಾತ್ರ ನಾಟಿ ಮಾಡಲಾಗಿದೆ. ಕೃಷಿ ಇಲಾಖೆ ಮಾಹಿತಿ ಪ್ರಕಾರ ಫೆಬ್ರವರಿ ಅಂತ್ಯದೊಳಗೆ ಭತ್ತದ ನಾಟಿ ಮುಗಿಯಲಿದೆ.

ಪಡಿತರದಾರರೇ ಗಮನಿಸಿ; ಅನ್ನಭಾಗ್ಯ ಅಕ್ಕಿಗೆ ಬೀಳಲಿದೆ ಕತ್ತರಿ!

ಬೇಸಿಗೆ ಹಂಗಾಮಿನಲ್ಲಿ ನೀರಾವರಿ ಪ್ರದೇಶಗಳಲ್ಲಿ ಪ್ರಮುಖವಾಗಿ ಭತ್ತ ಬೆಳೆಯಲಾಗುತ್ತದೆ. ಮುಖ್ಯವಾಗಿ ಶಿವಮೊಗ್ಗ, ಉತ್ತರ ಕನ್ನಡ, ಯಾದಗಿರಿ, ಮೈಸೂರು, ಬೆಳಗಾವಿ, ಗದಗ, ಧಾರವಾಡ, ಹಾವೇರಿ, ರಾಯಚೂರು, ಹಾಸನ, ಬಳ್ಳಾರಿ, ದಾವಣಗೆರೆ ಜಿಲ್ಲೆಗಳಲ್ಲಿ ಭತ್ತ ಪ್ರಮುಖ ಆಹಾರ ಬೆಳೆ. ಪ್ರಸ್ತುತ 35,656 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಇನ್ನುಳಿದ 15 ದಿನಗಳಲ್ಲಿ ಎರಡು ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ನಾಟಿ ಪೂರ್ಣಗೊಳ್ಳಬೇಕು.

ಮಾರ್ಚ್ ವೇಳೆಯಲ್ಲಿ ಬಿತ್ತನೆ ನಡೆದರೂ ಏಪ್ರಿಲ್‌, ಮೇ ತಿಂಗಳಲ್ಲಿ ಪೂರ್ವ ಮುಂಗಾರು ಆರಂಭಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಮಳೆಯಿಂದ ಪುನಃ ಭತ್ತ ಹಾನಿಗೊಳಗಾಗುವ ಸಾಧ್ಯತೆ ಇದೆ ಎಂಬುದು ಕೃಷಿ ತಜ್ಞರ ಲೆಕ್ಕಾಚಾರವಾಗಿದ್ದು, ರೈತರಲ್ಲಿ ಆತಂಕ ಮೂಡಿಸಿದೆ.

ತುಂಗಾಭದ್ರಾ, ಕಬಿನಿ, ಕೆಆರ್‌ಎಸ್‌ ಸೇರಿದಂತೆ ಇತರ ಜಲಾಶಯಗಳಲ್ಲಿ ಸಾಕಷ್ಟುಪ್ರಮಾಣದಲ್ಲಿ ನೀರು ಇದ್ದರೂ ಕೃಷಿ ಚಟುವಟಿಕೆಗೆ ಅಗತ್ಯವಾದಷ್ಟುನೀರನ್ನು ಬಿಡುತ್ತಿಲ್ಲ. ಕೃಷಿ ಇಲಾಖೆ ಮಾಹಿತಿ ಪ್ರಕಾರ 15 ದಿನಗಳಿಗೊಮ್ಮೆ ಈ ಜಲಾಶಯಗಳಿಂದ ನೀರು ಬಿಡುತ್ತಿದ್ದು, ಭತ್ತ ಬೆಳೆಯಲು ನೀರು ಸಾಕಾಗುತ್ತಿಲ್ಲ. ಹೀಗಾಗಿ ಭತ್ತದ ನಾಟಿ ಪ್ರಮಾಣ ಕುಸಿತಕ್ಕೆ ಕಾರಣವಾಗಿದೆ.

ಎರಡು ಬೆಳೆಯೂ ಇಲ್ಲ:

ಪ್ರತಿ ವರ್ಷ ಮುಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಭತ್ತ ನಾಟಿ ಮಾಡಲಾಗುತ್ತದೆ. ಆದರೆ ಈ ಬಾರಿ ಎರಡು ಹಂಗಾಮಿನಲ್ಲೂ ಭತ್ತ ರೈತರಲ್ಲಿ ಕಣ್ಣೀರು ತರಿಸಿದೆ. ಮುಂಗಾರು ಅವಧಿಯಲ್ಲಿ ರೈತರು ಲಕ್ಷಾಂತರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ನಾಟಿ ಮಾಡಿದ್ದರು. ನಂತರ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಎರಡು ಬಾರಿ ಅತಿವೃಷ್ಟಿಯಾದ ಪರಿಣಾಮ ಬರೋಬ್ಬರಿ ಒಂದು ಲಕ್ಷ ಹೆಕ್ಟೇರ್‌ನಲ್ಲಿ ಬೆಳೆಯಲಾದ ಭತ್ತ ಹಾನಿಯಾಗಿತ್ತು.

ಗ್ರಾಹಕರೇ ಗಮನಿಸಿ, ಚಿನ್ನದ ದರದಲ್ಲಿ ಭಾರೀ ಬದಲಾವಣೆ!

ಈಗ ಉತ್ತಮ ಮಳೆಯಿಂದ ಜಲಾಶಯಗಳು ಭರ್ತಿಯಾಗಿವೆ. ಆದರೆ, ಬೇಸಿಗೆ ಬೆಳೆಯಾಗಿಯಾದರೂ ಭತ್ತ ಬೆಳೆಯಬಹುದೆಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ. ಜಲಾಶಯಗಳಲ್ಲಿ ನೀರಿನ ಸಂಗ್ರಹವಿದ್ದರೂ ಬೇಸಿಗೆಯಲ್ಲಿ ಕುಡಿಯಲು ನೀರು ಬೇಕೆಂಬ ಕಾರಣಕ್ಕೆ ಕೃಷಿಗೆ ಸಮರ್ಪಕವಾಗಿ ನೀರು ಕೊಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬೇಸಿಗೆ ಹಂಗಾಮಿನಲ್ಲೂ ಭತ್ತದ ನಾಟಿ ಸಂಪೂರ್ಣ ನೆಲಕಚ್ಚಿದೆ. ರೈತರು ಕೃಷಿಗೆ ನೀರು ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.