ಖಾರ್ಟೂಮ್‌ನಿಂದ 4 ಬಸ್‌ನಲ್ಲಿ ಸೂಡಾನ್‌ ಬಂದರಿನತ್ತ, ‘ಭಾರತ್‌ ಮಾತಾ ಕೀ ಜೈ’ ಘೋಷಣೆ ಕೂಗಿದ ಕನ್ನಡಿಗರು ಆಪರೇಷನ್‌ ಕಾವೇರಿ, 278 ಮಂದಿ ತವರಿನತ್ತ 9. 

ನಾಗರಾಜ ಎಸ್‌.ಬಡದಾಳ್‌

ದಾವಣಗೆರೆ(ಏ.26): ಸಂಘರ್ಷ ಪೀಡಿತ ಸೂಡಾನ್‌ನಲ್ಲಿ ಸಿಲುಕಿದ್ದ ರಾಜ್ಯದ ಹಕ್ಕಿಪಿಕ್ಕಿ ಜನಾಂಗದ 210 ಜನರನ್ನು ರಾಜಧಾನಿ ಖಾರ್ಟೂಮ್‌ನಿಂದ ಪೋರ್ಟ್‌ ಸೂಡಾನ್‌ನತ್ತ ನಾಲ್ಕು ತುಂಬಿದ ಬಸ್ಸುಗಳಲ್ಲಿ ಸಾಮಾನು, ಸರಂಜಾಮು ಸಮೇತ ಕೇಂದ್ರ ಸರ್ಕಾರದ ‘ಆಪರೇಷನ್‌ ಕಾವೇರಿ’ ಕಾರ್ಯಾಚರಣೆಯಡಿ ಸುರಕ್ಷಿತವಾಗಿ ಕರೆದೊಯ್ಯಲಾಗುತ್ತಿದೆ.

ಕಳೆದ ಕೆಲವು ದಿನಗಳಿಂದ ಆಫ್ರಿಕಾದ ಸೂಡಾನ್‌ ದೇಶದಲ್ಲಿ ಸೇನಾಪಡೆ ಹಾಗೂ ಅರೆ ಸೇನಾಪಡೆಗಳ ಮಧ್ಯೆ ಭುಗಿಲೆದ್ದಿರುವ ಘರ್ಷಣೆಯಲ್ಲಿ ಸಿಲುಕಿ ಜನ ಜೀವ ಕೈಯಲ್ಲಿಡಿದು ಕಾಲಹರಣ ಮಾಡಬೇಕಾದ ಸ್ಥಿತಿಯಲ್ಲಿದ್ದ ಭಾರತೀಯರನ್ನು ರಕ್ಷಿಸಿ ತಾಯ್ನಾಡಿಗೆ ಕರೆತರಲು ‘ಆಪರೇಷನ್‌ ಕಾವೇರಿ’ಯನ್ನು ಕೇಂದ್ರ ಆರಂಭಿಸಿದೆ.

ಸೂಡಾನ್‌ನಲ್ಲಿ ಕನ್ನಡಿಗರ ರಕ್ಷಣೆಗೆ ಡೀಸೆಲ್‌ ಕೊರತೆ!

ಖಾರ್ಟೂಮ್‌ ನಗರದಲ್ಲಿ ಅನ್ನಾಹಾರ, ನೀರು ಇಲ್ಲದೆ, ಜೀವ ಕೈಯಲ್ಲಿಡಿದು ತಮ್ಮನ್ನು ಸುರಕ್ಷಿತವಾಗಿ ಭಾರತಕ್ಕೆ ವಾಪಸ್‌ ಕರೆಸಿಕೊಳ್ಳುವಂತೆ ಬೇಡಿಕೊಂಡಿದ್ದ ಹಕ್ಕಿಪಿಕ್ಕಿಗಳು ಸೇರಿದಂತೆ 3 ಸಾವಿರಕ್ಕೂ ಹೆಚ್ಚು ಭಾರತೀಯರ ರಕ್ಷಣೆಗೆ ‘ಆಪರೇಷನ್‌ ಕಾವೇರಿ’ಯಡಿ ಸೂಡಾನ್‌ನ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿ, ಸಿಬ್ಬಂದಿ ಕಾರ್ಯೋನ್ಮುಖರಾಗಿದ್ದಾರೆ.

ಡೀಸೆಲ್‌ ಇಲ್ಲದೇ ತಡವಾಗಿದ್ದ ಬಸ್ಸುಗಳ ಸಂಚಾರ ಮಂಗಳವಾರ ಬೆಳಿಗ್ಗೆಯೇ ಶುರುವಾಗಿದೆ. ನಾಲ್ಕೂ ಬಸ್ಸುಗಳಿಗೆ ಅಗತ್ಯವಾಗಿದ್ದ ಡೀಸೆಲ್‌ ತುಂಬಿದ ನಂತರ ಮನೆಗಳಲ್ಲಿ ಸುರಕ್ಷಿತವಾಗಿದ್ದ ಹಕ್ಕಿಪಿಕ್ಕಿ ಜನಾಂಗದ ಸುಮಾರು 210 ಜನರನ್ನು ಭದ್ರತೆಯಲ್ಲಿ ಬಸ್ಸುಗಳಿಗೆ ಹತ್ತಿಸಲಾಯಿತು. ನಾಲ್ಕೂ ಬಸ್ಸುಗಳಿಗೆ ಭಾರತದ ತ್ರಿವರ್ಣ ಧ್ವಜವನ್ನು ಕಟ್ಟಿ, ನಾಲ್ಕೂ ಬಸ್ಸುಗಳು ಸೂಡಾನ್‌ ಪೋರ್ಚ್‌ನತ್ತ ಹೊರಡುತ್ತಿದ್ದಂತೆಯೇ ಹಕ್ಕಿಪಿಕ್ಕಿ ಜನರು ತಮ್ಮ ದೇವರುಗಳಿಗೆ ನಮಿಸುತ್ತಾ, ‘ಭಾರತ್‌ ಮಾತಾ ಕೀ ಜೈ’ಎಂಬ ಘೋಷಣೆ ಮೊಳಗಿಸಿದರು.

ಅಲ್ಬಶೇರ್‌ ನಗರ ಸೇರಿದಂತೆ ಸುತ್ತಮುತ್ತ ವಾಸವಿರುವ ಸುಮಾರು 800ಕ್ಕೂ ಹೆಚ್ಚು ಹಕ್ಕಿಪಿಕ್ಕಿ ಜನರು ಸೇರಿ, ಸುಮಾರು 3 ಸಾವಿರ ಭಾರತೀಯರ ರಕ್ಷಣೆಗೆ ಸ್ವತಃ ಕೇಂದ್ರ ಸರ್ಕಾರ ವೇ ಮುತುವರ್ಜಿ ವಹಿಸಿದೆ. 2 ವಿಮಾನ, 1 ಹಡಗಿನ ಮೂಲಕ ಆಪರೇಷನ್‌ ಕಾವೇರಿ ಕೈಗೊಂಡಿದೆ. ಕೇಂದ್ರ ಸಚಿವ ಮುರುಳೀಧರನ್‌ ಕಾರ್ಯಾಚರಣೆ ನೇತೃತ್ವ ವಹಿಸಿದ್ದು, ಎಲ್ಲಾ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆ ತರಲು ಕೇಂದ್ರ ಟೊಂಕ ಕಟ್ಟಿನಿಂತಿದೆ.

ಈ ಬಗ್ಗೆ ಕನ್ನಡಪ್ರಭ ವಿಶೇಷ ವರದಿ ಪ್ರಕಟಿಸುವ ಮೂಲಕ ಸರ್ಕಾರಗಳ ಗಮನ ಸೆಳೆದಿತ್ತು. ವಿಪಕ್ಷ ನಾಯಕ ಸಿದ್ದರಾಮಯ್ಯ ಈ ವಿಚಾರದ ಬಗ್ಗೆ ಟ್ವೀಟರ್‌ನಲ್ಲಿ ಹಕ್ಕಿಪಿಕ್ಕಿ ಜನರ ರಕ್ಷಣೆಗೆ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ರಿಗೆ ಮನವಿ ಮಾಡಿದ್ದರು. ದಾವಣಗೆರೆ ಸಂಸದ, ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ಸಹ ಹಕ್ಕಿಪಿಕ್ಕಿ ಜನರು ಸೇರಿದಂತೆ ಸೂಡಾನ್‌ನಲ್ಲಿ ಸಿಲುಕಿರುವ ಜನರ ರಕ್ಷಣೆಗೆ ಮನವಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ದುಡ್ಡಿಲ್ಲ, ಫುಡ್ಡಿಲ್ಲ... ಕಾಪಾಡಿ: ಸೂಡಾನ್ ಕನ್ನಡಿಗರ ಮೊರೆ

ಸೂಡಾನ್‌ನಲ್ಲಿ ಸಿಲುಕಿದ್ದ ದಾವಣಗೆರೆ ಜಿಲ್ಲೆಯ ಗೋಪನಾಳ್‌ ಗ್ರಾಮದ 20 ಜನ, ಅಸ್ತಾಫನಹಳ್ಳಿಯ 13 ಜನರನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆ ತರಲಾಗುತ್ತಿದೆ. ಸೂಡಾನ್‌ನಲ್ಲಿ ಸಿಲುಕಿದ್ದವರಿಗೆ ಅಲ್ಲಿನ ಭಾರತೀಯ ರಾಯಭಾರ ಕಚೇರಿ ಎಲ್ಲಾ ಅಗತ್ಯ ವ್ಯವಸ್ಥೆ ಮಾಡಿದೆ. ಎಲ್ಲರೂ ಸುರಕ್ಷಿತವಾಗಿದ್ದು, ಉಳಿದವರನ್ನೂ ಅಲ್ಲಿಂದ ಕರೆ ತರಲಾಗುತ್ತದೆ ಅಂತ ದಾವಣಗೆರೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ. 

ಎಲ್ಲರಿಗಿಂತ ಮೊದಲೇ ತಿಳಿಯುವುದು ಇಲ್ಲೇ!

ಸೂಡಾನ್‌ನಲ್ಲಿ ಕನ್ನಡಿಗರು ಅತಂತ್ರರಾಗಿರುವ ಕುರಿತು ಮೊದಲು ವರದಿ ಮಾಡಿದ್ದು ‘ಕನ್ನಡಪ್ರಭ’. ಈ ಕುರಿತ ವರದಿ ಏ.18ರಂದು ಪ್ರಕಟವಾಗಿತ್ತು.