ಬೆಂಗಳೂರು(ಮೇ.14): ಕೊರೋನಾ ನಿರ್ವಹಣೆ ಸಂಬಂಧ ನ್ಯಾಯಾಲಯದ ನೀಡುತ್ತಿರುವ ಆದೇಶಗಳಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನೀಡಿರುವ ಹೇಳಿಕೆಗಳ ವಿಡಿಯೋ ತುಣುಕನ್ನು ವಕೀಲ ಜಿ.ಆರ್‌.ಮೋಹನ್‌, ಹೈಕೋರ್ಟ್‌ ರಿಜಿಸ್ಟ್ರಾರ್‌ ಜುಡಿಷಿಯಲ್‌ ಅವರಿಗೆ ಇ-ಮೇಲ್‌ ಮೂಲಕ ರವಾನಿಸಿದ್ದಾರೆ.

ರಾಜ್ಯದ ಜನ ಪ್ರತಿನಿಧಿಗಳಾಗಿರುವ ಈ ಇಬ್ಬರು ನಾಯಕರು ನೀಡಿರುವ ಹೇಳಿಕೆಗಳಿಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯನ್ಯಾಯಮೂರ್ತಿಗಳಲ್ಲಿ ಮನವಿ ಮಾಡುತ್ತಿರುವುದಾಗಿ ಅವರು ಇ-ಮೇಲ್‌ನಲ್ಲಿ ತಿಳಿಸಿದ್ದಾರೆ.

'ಲಸಿಕೆ ಉತ್ಪತ್ತಿ ಆಗದಿದ್ದರೆ ನೇಣು ಹಾಕಿಕೊಳ್ಳಬೇಕಾ'  ಗೌಡ ಅಸಮಾಧಾನ

ವಕೀಲರ ಸಂಘ ಆಕ್ಷೇಪ: ಕೊರೋನಾ ನಿರ್ವಹಣೆ ಸಂಬಂಧ ಹೈಕೋರ್ಟ್‌ ನೀಡುತ್ತಿರುವ ಸೂಚನೆ, ಆದೇಶದ ಸಂಬಂಧ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹಾಗೂ ‘ನ್ಯಾಯಾಧೀಶರು ಸರ್ವಜ್ಞರಲ್ಲ’ ಎಂದು ಹೇಳಿಕೆ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ನೀಡಿರುವ ಹೇಳಿಕೆಗಳಿಗೆ ಬೆಂಗಳೂರು ವಕೀಲರ ಸಂಘ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ವಕೀರ ಸಂಘದ ಅಧ್ಯಕ್ಷ ಎ.ಪಿ ರಂಗನಾಥ್‌, ತನ್ನ ಪಾಲಿನ ಶಾಸನಬದ್ದ ಕೆಲಸವನ್ನು ಅರಿಯದೆ ಮೈಮರೆತ ಕಾರ್ಯಾಂಗಕ್ಕೆ ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ನ ಮಧ್ಯಂತರ ಆದೇಶಗಳನ್ನು ನೀಡುತ್ತಿವೆ. ಅಲ್ಲದೆ, ಸಾಂವಿಧಾನಿಕ ಹಕ್ಕುಗಳ ರಕ್ಷಣೆಗೆ ಮೀಸಲಾಗಿರುವ ಉನ್ನತ ನ್ಯಾಯಾಲಯಗಳು ನಾಗರಿಕರ ಬದುಕುವ ಹಕ್ಕನ್ನು ಎತ್ತಿ ಹಿಡಿಯುತ್ತಿರದ್ದು, ಸೂಕ್ತ ಆದೇಶಗಳನ್ನು ನೀಡುತ್ತಿವೆ. ಇದನ್ನು ಸರಿಯಾಗಿ ಗ್ರಹಿಸದೆ ನ್ಯಾಯಾಲಯಗಳು ಮತ್ತು ನ್ಯಾಯಾಧೀಶರನ್ನು ಗುರಿಯಾಗಿಸಿಕೊಂಡು ಈ ರೀತಿಯ ಹೇಳಿಕೆ ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.