ಮಾರ್ಷಲ್‌ಗಳ ನಡುವೆ ನಡೆದ ಹಾಸ್ಯಪ್ರಸಂಗ, ಕಂಪನಿಯ ಡೈರಿಯಲ್ಲಿ ಸಾಹಿತಿಗಳು, ಪತ್ರಕರ್ತರ ಹೆಸರುಗಳು ವೈರಲ್, ರೋಣ ಶಾಸಕರಿಗೆ ಮಂತ್ರಿ ಪಟ್ಟಕ್ಕೆ ಕಂಟಕವೇನು ಎಂಬ ಪ್ರಶ್ನೆ - ಇವೆಲ್ಲವೂ ಈ ವಾರದ ಕುತೂಹಲಕಾರಿ ಘಟನೆಗಳು.

ಛಾಯಾಗ್ರಾಹಕನೊಬ್ಬ, ಏನ್ರಿ ಮಾರ್ಷಲ್‌ಗಳು ಹೊತ್ತುಕೊಂಡು ಹೋಗುವಾಗ ಆ ಪರಿ ನಕ್ಕೊಂತ ಹೋದ್ರಿ.. ನಿಮ್ಮ ಫೋಟೋ ಬರೋದು ಡೌಟು ಎಂದು ಬಿಡೋದೆ! ಇದರಿಂದ ಕಂಗಾಲಾದ ಆ ಸದಸ್ಯ ಮಾರ್ಷಲ್‌ಗಳ ಬಳಿ ತೆರಳಿ ಮತ್ತೊಮ್ಮೆ ಹೊತ್ತುಕೊಂಡು ಹೋಗಿ ಎಂದು ಹೇಳಿಬಿಟ್ಟ. ಆಗಲೇ ಎತ್ತಿ ಸುಸ್ತಾಗಿದ್ದ ಮಾರ್ಷಲ್‌ಗಳು ಅದರತ್ತ ಲಕ್ಷ್ಯ ಕೊಡಲಿಲ್ಲ ಅನ್ನೋದು ಮಾತ್ರ ಭಾರಿ ಬ್ಯಾಸರದ ಸಂಗತಿ. ಡೈರಿ ಅಂದಾಕ್ಷಣ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಲವರು ಬೆಚ್ಚಿ ಬಿದ್ದರೆ, ಮತ್ತೆ ಕೆಲವರು ಪೆಚ್ಚು ಮೋರೆ ಹಾಕಿಕೊಳ್ಳುತ್ತಾರೆ. ಕೆಲವರಿಗೆ ಡೈರಿ ಸಂತಸವನ್ನೂ ತಂದಿದೆ. ಡೈರಿ ವಿದ್ಯಮಾನ ಮಾತ್ರ ತೀವ್ರ ಕುತೂಹಲಕರವಾಗಿದೆ.

ಅಂಕೋಲಾ ತಾಲೂಕಿನ ಕೇಣಿಯಲ್ಲಿ ಉದ್ದೇಶಿತ ವಾಣಿಜ್ಯ ಬಂದರು ನಿರ್ಮಾಣಕ್ಕೆ ಜೆಎಸ್‌ಡಬ್ಲ್ಯು ಕಂಪನಿ ಗುತ್ತಿಗೆ ಪಡೆದಿದೆ. ಹೀಗಿರುವಾಗ ಕಾರವಾರದ ಪತ್ರಿಕಾ ಭವನಕ್ಕೆ ಬಂದ ಕಂಪನಿ ಮುಖ್ಯಸ್ಥರೊಬ್ಬರ ಡೈರಿ ಕುರ್ಚಿ ಮೇಲೆ ವಿರಾಜಮಾನವಾಗಿತ್ತು. ಡೈರಿಯನ್ನು ಅವರು ಕುರ್ಚಿಯಲ್ಲೇ ಮರೆತು ಬಿಟ್ಟು ಹೊರಟಿದ್ದರು. ನಂತರ ಆ ಡೈರಿಯಲ್ಲಿನ ಒಂದೊಂದೇ ಪುಟಗಳು ವೈರಲ್ ಆಗತೊಡಗಿದವು. ಅದರಲ್ಲಿ ಸಾಹಿತಿಗಳು, ಪತ್ರಕರ್ತರು, ಗುತ್ತಿಗೆದಾರರ ಹೆಸರು ಬರೆಯಲಾಗಿತ್ತು.

ಜಿಲ್ಲಾ ಅಭಿವೃದ್ಧಿ ಒಕ್ಕೂಟ ಎಂಬ ಹೆಸರು ಅದರಲ್ಲಿತ್ತು. ಕೆಲ ಪದವೀಧರರ ಹೆಸರೂ ಇತ್ತು. ಈ ಕಂಪನಿಗೂ ಇವರೆಲ್ಲರಿಗೂ ಯಾವ ಸಂಬಂಧ? ಎಂದು ವಿವಿಧ ಊಹಾಪೋಹಗಳು ಹುಟ್ಟಿಕೊಂಡವು.

ಕೆಲವರು ಡೈರಿಯಲ್ಲಿ ತಮ್ಮ ಹೆಸರಿದೆಯಾ ಎಂದು ಗಾಬರಿಯಿಂದ ಪ್ರಶ್ನಿಸುತ್ತಿದ್ದುದು ಕಂಡುಬಂತು. ಜನತೆ ಮಾತ್ರ ಕಂಪನಿಯ ಡೈರಿಯಲ್ಲಿ ಇವರೆಲ್ಲರ ಹೆಸರು ನೋಡಿ ಖುಷಿಗೊಂಡಿದ್ದರು. ತಮಗೂ ಬಂದರು ನಿರ್ಮಾಣ ಕಂಪನಿಗೂ ಯಾವುದೇ ಸಂಬಂಧ ಇಲ್ಲ ಎಂದು ಡೈರಿಯಲ್ಲಿ ಹೆಸರಿರುವವರು ನಿರಾಕರಿಸುತ್ತಿದ್ದರೂ ಬಂದರು ನಿರ್ಮಾಣ ವಿರೋಧಿಸಿ, ಸ್ಥಳೀಯ ಮೀನುಗಾರರ ಹಿತಾಸಕ್ತಿ ಕಾಪಾಡಲು ಇವರು ಕೊಟ್ಟಿರುವ ಕೊಡುಗೆ ಏನು? ಹಿಂದೆಲ್ಲ ಬಂದರು ವಿರುದ್ಧ ಬೀದಿಗಿಳಿದವರು ಈಗೇಕೆ ಸುಮ್ಮನಿದ್ದಾರೆ ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ.

ನಮ್ಮನ್ನೂ ಹೊರಹಾಕ್ರಿ ಮೇಡಂ!

ಇದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ವಿಪಕ್ಷ ಕಾಂಗ್ರೆಸ್‌ ಸದಸ್ಯರು ಹೇಳುತ್ತಿದ್ದ ಮಾತು. ಆಗಿದ್ದೇನಪ್ಪ ಅಂದ್ರೆ ನೂತನ ಮೇಯರ್‌ ಜ್ಯೋತಿ ಪಾಟೀಲ ಇತ್ತೀಚೆಗೆ ಪಾಲಿಕೆಯ ಸಾಮಾನ್ಯ ಸಭೆ ಕರೆದಿದ್ದರು. ಅವರು ಮೊದಲ ಭಾಷಣ ಮಾಡಬೇಕು ಎಂದು ಹುಮ್ಮಸ್ಸಿನಿಂದ ಬಂದಿದ್ದರೆ, ಹೇಗಾದರೂ ಮಾಡಿ ಅದಕ್ಕೆ ಅಡ್ಡಿ ಮಾಡಿ ಮುಜುಗರ ಮಾಡಬೇಕು ಎಂಬ ಇರಾದೆ ವಿಪಕ್ಷ ಸದಸ್ಯರದ್ದಾಗಿತ್ತು.

ಹೀಗಾಗಿ ಸಭೆ ಆರಂಭವಾಗುತ್ತಿದ್ದಂತೆ ಸಿಎಂ ವಿವೇಚನೆಯಡಿ ನೀಡಿರುವ ಹತ್ತು ಕೋಟಿ ರು. ಕ್ರಿಯಾ ಯೋಜನೆಯ ವಿಷಯವನ್ನು ಹೆಚ್ಚುವರಿ ಪಟ್ಟಿಯಲ್ಲಿ ಸೇರಿಸಬೇಕು ಎಂಬ ಬೇಡಿಕೆಯನ್ನಿಟ್ಟುಕೊಂಡು ಕಾಂಗ್ರೆಸ್‌ ಸದಸ್ಯರು ಪ್ರತಿಭಟನೆ ಶುರು ಹಚ್ಚಿಕೊಂಡಿದ್ದರು. ಎಷ್ಟೇ ಸಮಾಧಾನ ಪಡಿಸಿದರೂ ಪ್ರತಿಭಟನೆ ಮಾತ್ರ ಶಾಂತವಾಗಲೇ ಇಲ್ಲ. ಕೊನೆಗೆ ಮೇಯರ್‌ ಜ್ಯೋತಿ ಪಾಟೀಲರು, ನೀವು ಹೀಗೆ ಮಾಡುತ್ತಿದ್ದರೆ ಸಭೆಯಿಂದ ಹೊರಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರೂ ಪ್ರತಿಭಟನೆ ಹಿಂಪಡೆಯಲಿಲ್ಲ. ಕೊನೆಗೆ ಮೂವರು ಸದಸ್ಯರನ್ನು ಸಭೆಯಿಂದ ಅಮಾನತು ಮಾಡಿ ಸಭೆಯಿಂದ ಹೊರಹಾಕುವಂತೆ ಮಾರ್ಷಲ್‌ಗಳಿಗೆ ಮೇಯರ್‌ ಸೂಚಿಸಿದರು.

ಇಲ್ಲೇ ಬಂದಿದ್ದು ಸಮಸ್ಯೆ. ಅಮಾನತು ಮಾಡಿದವರನ್ನಷ್ಟೇ ಹೊರಹಾಕಲು ಮಾರ್ಷಲ್‌ಗಳು ಮುಂದಾಗುತ್ತಿದ್ದಂತೆ ಎಲ್ಲ ಮಾಧ್ಯಮಗಳ ಕ್ಯಾಮೆರಾಮನ್‌ಗಳು ಅಲರ್ಟ್‌ ಆಗಿ ಮಾರ್ಷಲ್‌ ಹಾಗೂ ಸದಸ್ಯರತ್ತ ಕ್ಯಾಮೆರಾ ಜೂಮ್‌ ಮಾಡಿಕೊಂಡು ನಿಂತರು. ಇದನ್ನು ನೋಡುತ್ತಿದ್ದಂತೆ ಅಷ್ಟರವರೆಗೆ ಪ್ರತಿಭಟನೆ ಹಿಂದಿನ ಸಾಲಿನಲ್ಲಿ ಸುಮ್ಮನೆ ನಿಂತಿದ್ದ ಸದಸ್ಯರೂ ‘ನಮ್ಮನ್ನು ಹೊರಹಾಕಿ..’ ಎಂದು ಮುಂದೆ ಬಂದು ಮಾರ್ಷಲ್‌ ಬಳಿ ತಾವೇ ಹೊರಟರು. ಕೆಲವರನ್ನು ಮಾರ್ಷಲ್‌ಗಳು ಎತ್ತಿಕೊಂಡು ಹೊರ ಹೋದರು. ಹೀಗೆ ಹೊರ ಹೋದವರ ಕಣ್ಣುಗಳು ಕ್ಯಾಮೆರಾಗಳ ಕಡೆಗೆ ನೆಟ್ಟವು. ಹೊರಹೋದ ಒಬ್ಬ ಸದಸ್ಯ ಇನ್ನೊಂದು ಡೋರ್‌ನಿಂದ ಮತ್ತೆ ಒಳಗೆ ಬಂದು ನಮ್ಮ ಫೋಟೋ ಚಲೋ ಬಂದಾವ್‌.. ಟೀವ್ಯಾಗ, ಪೇಪರನ್ಯಾಗ ಬರತಾವ್‌ ಅಲ್ರೀ..ಅಂತ ಕ್ಯಾಮೆರಾಮನ್‌ಗಳ ಬಳಿ ಕೇಳಿದ.

ಆದರೆ ಛಾಯಾಗ್ರಾಹಕನೊಬ್ಬ, ಏನ್ರಿ ಮಾರ್ಷಲ್‌ಗಳು ಹೊತ್ತುಕೊಂಡು ಹೋಗುವಾಗ ಆ ಪರಿ ನಕ್ಕೊಂತ ಹೋದ್ರಿ.. ನಿಮ್ಮ ಫೋಟೋ ಬರೋದು ಡೌಟು ಎಂದು ಬಿಡೋದೆ!

ಇದರಿಂದ ಕಂಗಾಲಾದ ಆ ಸದಸ್ಯ ಮಾರ್ಷಲ್‌ಗಳ ಬಳಿ ತೆರಳಿ ಮತ್ತೊಮ್ಮೆ ಹೊತ್ತುಕೊಂಡು ಹೋಗಿ ಎಂದು ಹೇಳಿಬಿಟ್ಟ. ಆಗಲೇ ಎತ್ತಿ ಸುಸ್ತಾಗಿದ್ದ ಮಾರ್ಷಲ್‌ಗಳು ಅದರತ್ತ ಲಕ್ಷ್ಯ ಕೊಡಲಿಲ್ಲ ಅನ್ನೋದು ಮಾತ್ರ ಭಾರಿ ಬ್ಯಾಸರದ ಸಂಗತಿ.

ಮಂತ್ರಿ ಆಗಾಕ್‌ ಕಂಟಕ!

ರೋಣ ಶಾಸಕ ಜಿ.ಎಸ್‌.ಪಾಟೀಲ್ರೂ ಮಂತ್ರಿ ಆಗಾಕ್‌ ಕಂಟಕ ಐತಿ, ಅದ್‌ ನನಗ್‌ ಗೊತ್ತೈತಿ, ನಿಮಗೂ ಗೊತ್ತಿರಬಹುದು, ಆ ಕಂಟಕ ದೂರಾದ್ರ ಮಾತ್ರ ಮಂತ್ರಿ ಆಗ್ತಾರ. ಹೀಗೆ ಭವಿಷ್ಯ ನುಡಿದವರು ರಾಜಕಾರಣಿ ಅಲ್ಲ, ಕುದರಿಮೋತಿ ಮೈಸೂರ ಮಠದ ವಿಜಯ ಮಹಾಂತ ಸ್ವಾಮೀಜಿ. ಗದಗ ಜಿಲ್ಲೆಯ ರೋಣದ ರಾಜೀವ್‌ ಗಾಂಧಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಮಾತೋಶ್ರೀ ಬಸಮ್ಮ ಎಸ್.ಪಾಟೀಲ ಪುಣ್ಯಸ್ಮರಣೋತ್ಸವ ಸಮಿತಿಯಿಂದ ಜರುಗಿದ ಮಾತೋಶ್ರೀ ಬಸಮ್ಮ ಪಾಟೀಲ ಅವರ 21ನೇ ಪುಣ್ಯ ಸ್ಮರಣೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಸ್ವಾಮೀಜಿ ಹೀಗೆ ಮಾತು ಆರಂಭಿಸಿದಾಗ ವೇದಿಕೆ ಸೇರಿ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಒಂದು ಕ್ಷಣ ಸ್ತಬ್ಧ.

ಶಾಸಕ ಜಿ.ಎಸ್‌.ಪಾಟೀಲ್‌ 5 ದಶಕಗಳ ರಾಜಕೀಯ ಅನುಭವ ಹೊಂದ್ಯಾರ, ಸಚಿವರಾಗಬೇಕಿತ್ತು, ಅಭಿಮಾನಿಗಳು, ಕಾರ್ಯಕರ್ತರು ಸುಮ್ಮನ ಇದ್ರ ಸಾಲೂದಿಲ್ಲ, ಇದರ ಸಲುವಾಗಿ ಹೋರಾಟ ಮಾಡಬೇಕ್ರಿ ಎಂದು ಹುರಿದುಂಬಿಸಿಬಿಟ್ಟರು.

'ನಿಮ್ಮ ಹೋರಾಟ ಹೈಕಮಾಂಡ್‌ ಗಮನ ಸೆಳೆಯುವಂಗ್‌ ಇರಬೇಕು' ಎಂದು ರಾಜಕಾರಣಿ ಥರಾ ಸ್ವಾಮೀಜಿ ಹೇಳಿದ್ದು ಪಾಟೀಲರ ಅಭಿಮಾನಿಗಳು, ಕಾರ್ಯಕರ್ತರನ್ನು ಕ್ಷಣಕಾಲ ಚಿಂತನೆಗೆ ದೂಡಿತು.

  • -ವಸಂತಕುಮಾರ್ ಕತಗಾಲ
  • -ಶಿವಾನಂದ ಗೊಂಬಿ
  • - ಪಿ.ಎಸ್‌.ಪಾಟೀಲ್‌