Asianet Suvarna News Asianet Suvarna News

ಕರ್ನಾಟಕದಲ್ಲಿ ಮಳೆ ಹಾನಿ: 10 ದಿನದೊಳಗೆ ಕೇಂದ್ರ ಸರ್ಕಾರಕ್ಕೆ ವರದಿ

ಕಲಬುರಗಿ, ವಿಜಯಪುರ, ಧಾರವಾಡ, ಗದಗ, ಕರಾವಳಿಯಲ್ಲಿ ಕೇಂದ್ರ ತಂಡದಿಂದ ನೆರೆ ಹಾನಿ ಪರಿಶೀಲನೆ

Report to Central Government within 10 Days of Rain Damage in Karnataka grg
Author
First Published Sep 9, 2022, 12:00 AM IST

ಬೆಂಗಳೂರು(ಸೆ.09):  ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ಪರಿಶೀಲನೆಗೆ ರಾಜ್ಯಕ್ಕೆ ಕೇಂದ್ರ ಅಧ್ಯಯನ ಸಮಿತಿ ಆಗಮಿಸಿದೆ. ಗುರುವಾರ ಕಲಬುರಗಿ, ಬೆಳಗಾವಿ, ಮತ್ತು ಮಂಗಳೂರು ಕಂದಾಯ ವಿಭಾಗಗಳ ಹಲವು ಗ್ರಾಮಗಳಿಗೆ ವಿವಿಧ ತಂಡಗಳಾಗಿ ಅಧ್ಯಯನ ಸಮಿತಿ ಸದಸ್ಯರು ಭೇಟಿ ನೀಡಿ ಹಾನಿಯ ಪರಿಶೀಲನೆ ನಡೆಸಿತು. ಧಾರವಾಡ ಹಾಗೂ ಗದಗ ಜಿಲ್ಲೆಯ ಪ್ರದೇಶಗಳಿಗೆ ಭೇಟಿ ನೀಡಿದ ಕೇಂದ್ರ ಜಲಶಕ್ತಿ ಮಂತ್ರಾಲಯದ ಅಶೋಕ್‌ಕುಮಾರ ನೇತೃತ್ವದ ಇಬ್ಬರು ಸದಸ್ಯರ ತಂಡವು, 10 ದಿನದಲ್ಲಿ ಕೇಂದ್ರ ಸರ್ಕಾರಕ್ಕೆ ಹಾನಿ ಕುರಿತು ವರದಿ ಸಲ್ಲಿಸುವುದಾಗಿ ಭರವಸೆ ನೀಡಿದೆ.

ಧಾರವಾಡ ಜಿಲ್ಲೆಯ ಬೆಣ್ಣಿಹಳ್ಳ, ಅಗಸನಹಳ್ಳ, ಯರನಾಳ ಹಳ್ಳದ ಪ್ರವಾಹದಿಂದ ಬಾಧಿತವಾಗಿರುವ ಹತ್ತಿ, ಮೆಕ್ಕೆಜೋಳ, ಹೆಸರುಕಾಳು, ಉದ್ದು, ಉಳ್ಳಾಗಡ್ಡಿ ಬೆಳೆಗಳನ್ನು ವೀಕ್ಷಿಸಿತು. ಕಿರೇಸೂರ, ಹೆಬಸೂರ, ಕಾರ್ಲವಾಡ, ಯಮನೂರ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿತು. ಗದಗ ಜಿಲ್ಲೆಯಲ್ಲಿ ಹೊಂಬಳ-ಹಿರೇಹಂದಿಗೋಳ ಸಂಪರ್ಕ ರಸ್ತೆ, ಲಕ್ಷ್ಮೇಶ್ವರ, ಗದಗ ನಗರ, ಕಳಸಾಪುರ, ನಾಗಾವಿ, ಮಾಗಡಿ ಹಾಗೂ ಶೆಟ್ಟಿಕೇರಿಯಲ್ಲಿ ಮಳೆಯಿಂದಾಗಿ ಹಾನಿಗೀಡಾದ ರಸ್ತೆ, ಬೆಳೆ, ಶಾಲೆ, ಮನೆ, ಅಂಗಡಿಗಳ ಹಾನಿ ಪರಿಶೀಲಿಸಿದರು.

Bengaluru Floods: ಕೆರೆಗಳ ಕೋಡಿ; ಐಟಿ ಸಿಟಿಗೆ ಕಣ್ಣೀರ ಕೋಡಿ!

ವಿಜಯಪುರ ಜಿಲ್ಲೆಯಲ್ಲಿ ಕೇಂದ್ರದ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯದ ನಿರ್ದೇಶಕ ಡಾ.ಕೆ.ಮನೋಹರನ್‌ ಹಾಗೂ ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧೀನ ಕಾರ್ಯದರ್ಶಿ ಎಸ್‌.ಬಿ.ತಿವಾರಿ ಅವರನ್ನೊಳಗೊಂಡ ಕೇಂದ್ರ ಅಧ್ಯಯನ ತಂಡ ಪರಿಶೀಲನೆ ನಡೆಸಿತು. ದೇವರಹಿಪ್ಪರಗಿ, ತಾಳಿಕೋಟೆ ಮತ್ತು ಮುದ್ದೆಬಿಹಾಳ ತಾಲೂಕಿನಲ್ಲಿ ತಂಡವು ಬೆಳೆಹಾನಿ ಪರಿಶೀಲಿಸಿತು.

ಕಲಬುರಗಿ ಜಿಲ್ಲೆಗೆ ಕೇಂದ್ರದ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯದ ನಿರ್ದೇಶಕ ಡಾ.ಕೆ.ಮನೋಹರನ್‌ ನೇತೃತ್ವದ ಆಂತರಿಕ ಸಚಿವಾಲಯದ ತ್ರಿಸದಸ್ಯ ತಂಡ ಭೇಟಿ ನೀಡಿತ್ತು. ಹೊನ್ನಕಿರಣಗಿ, ಜೇವರ್ಗಿ ಪಟ್ಟಣಕ್ಕೆ ಭೇಟಿ ನೀಡಿ ಬೆಳೆ ಹಾನಿ, ಮಳೆಯಿಂದ ಬಿದ್ದ ಮನೆಗಳನ್ನು ವೀಕ್ಷಿಸಿತು.

ಇನ್ನು ಕರಾವಳಿಯಲ್ಲಿ ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಆಶೀಶ್‌ ಕುಮಾರ್‌ ನೇತೃತ್ವದ ತಂಡವು, ಉಡುಪಿ ಹಾಗೂ ದಕ್ಷಿಣಕನ್ನಡ, ಉತ್ತರಕನ್ನಡ ಜಿಲ್ಲೆಗಳಲ್ಲಿ ಪರಿಶೀಲನೆ ನಡೆಸಿತು. ವಿಪರೀತ ಕಡಲ್ಕೊರೆತ ಉಂಟಾಗಿರುವ ಉಳ್ಳಾಲದ ಬಟಪ್ಪಾಡಿಗೆ ತೆರಳಿ ಅಲ್ಲಿನ ವಾಸ್ತವ ಪರಿಸ್ಥಿತಿಯನ್ನು ಅವಲೋಕಿಸಿದರು. ರಸ್ತೆ ಹಾನಿ, ಕಡಲ್ಕೊರೆತದಿಂದಾದ ಹಾನಿ ವೀಕ್ಷಿಸಿದ ತಂಡದ ಸದಸ್ಯರು ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದರು. ಡಲುಕೊರೆತ ಸಂಭವಿಸಿದ್ದ ಮರವಂತೆಗೆ ತಂಡ ಭೇಟಿ ನೀಡಿತು.
 

Follow Us:
Download App:
  • android
  • ios